ವಚನಾನಂದ ಶ್ರೀ ಪೀಠ ತೆರವಿಗೆ ವಾರದ ಗಡುವು

ದಾವಣಗೆರೆ ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ಮುಖಂಡ ಎಚ್.ಎಸ್.ನಾಗರಾಜ್, ಅಶೋಕ್ ಗೋಪನಾಳ್, ಚನ್ನಬಸಪ್ಪ ಚಿಕ್ಕಮೇಗಳಗೆರೆ, ರುದ್ರಪ್ಪ ಸೋಗಿ ಇದ್ದರು.
ದಾವಣಗೆರೆ ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ಮುಖಂಡ ಎಚ್.ಎಸ್.ನಾಗರಾಜ್, ಅಶೋಕ್ ಗೋಪನಾಳ್, ಚನ್ನಬಸಪ್ಪ ಚಿಕ್ಕಮೇಗಳಗೆರೆ, ರುದ್ರಪ್ಪ ಸೋಗಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಮಾಜದ ಮುಖಂಡ ಎಚ್.ಎಸ್.ನಾಗರಾಜ್ ಎಚ್ಚರಿಕೆ
  • ನಿರ್ಗಮನಕ್ಕೆ ಸಾವಿರಾರು ಜನರ ಶಕ್ತಿ ಪ್ರದರ್ಶನ
  • ನಿರಾಣಿ ನೀಡಿದ್ದ 2 ಕೋಟಿ ರೂ. ಲೆಕ್ಕ ನೀಡಲಿ
ದಾವಣಗೆರೆ: ಉಚ್ಚಾಟಿತ ವಚನಾನಂದ ಸ್ವಾಮೀಜಿ ವಾರದೊಳಗಾಗಿ ಹರಿಹರ ಪಂಚಮಸಾಲಿ ಪೀಠ ತೊರೆಯದಿದ್ದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಹೊರ ಹಾಕಬೇಕಾಗುತ್ತದೆ ಎಂದು ಸಮಾಜದ ಮುಖಂಡ ಎಚ್.ಎಸ್.ನಾಗರಾಜ್ ಎಚ್ಚರಿಕೆ ನೀಡಿದರು.
ಎಂಟು ವರ್ಷದಲ್ಲಿ ಧಾರ್ಮಿಕ ಚಟುವಟಿಕೆ ಮಾಡದವರು ಈಗ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ. ಪೀಠದಲ್ಲಿ ಈಗ ಸೂಕ್ತ ವಾತಾವರಣವಿಲ್ಲ. ಸ್ವಾಮೀಜಿ ಪೀಠ ತ್ಯಜಿಸುವವರೆಗೂ ಪಾಲಕರು ಮಕ್ಕಳನ್ನು ಪೀಠಕ್ಕೆ ಕಳುಹಿಸಬಾರದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಅವರನ್ನು ಪೀಠದಲ್ಲಿ ಕೂರಿಸಿದ ಉದ್ದೇಶದಂತೆ ನಡೆದುಕೊಂಡಿಲ್ಲ. ಉಚ್ಚಾಟನೆಗೊಂಡರೂ ನೈತಿಕತೆ ಬಿಟ್ಟು ಪೀಠದಲ್ಲಿ ಇದ್ದಾರೆ. ಸಮಾಜವನ್ನು ಒಡೆಯುತ್ತಿದ್ದಾರೆ. ಹಿರಿಯ ನಾಯಕರ ಕರೆಗಳನ್ನು ರೆಕಾರ್ಡ್ ಮಾಡಿಕೊಳ್ಳುವ ಈ ಸ್ವಾಮೀಜಿ ಅಪಾಯಕಾರಿ ಎಂದರು.
ಸಿರಿಗೆರೆ ಶ್ರೀಗಳ ಹೆಸರು ಬಳಸಲೂ ವಚನಾನಂದ ಸ್ವಾಮೀಜಿಗೆ ಯೋಗ್ಯತೆ ಇಲ್ಲ. ಶಿವಶಂಕರಪ್ಪ ಮನತೆನದ ಜತೆ ಒಡನಾಟವುಳ್ಳ ಬಿ.ಸಿ.ಉಮಾಪತಿ ವಿರುದ್ಧದ ಟೀಕೆ ಸರಿಯಲ್ಲ ಎಂದರು. ಮಾಜಿ ಸಚಿವ ದಿ.ಎಚ್. ಶಿವಪ್ಪ ಹಾಗೂ ಅವರ ಸಮಾಧಿ, ಸ್ವಾಮೀಜಿಗೆ ಈಗ ನೆನಪಾಗಿದೆ ಎಂದೂ ವ್ಯಂಗ್ಯವಾಡಿದರು.
ಸಮಾಜದ ಅಭಿವೃದ್ಧಿಗೆಂದು ಎರಡು ವರ್ಷದ ಹಿಂದೆ ಮಾಜಿ ಸಚಿವ ಮುರುಗೇಶ ನಿರಾಣಿ ಅವರಿಂದ 2 ಕೋಟಿ ರೂ. ಪಡೆದಿದ್ದ ಸ್ವಾಮೀಜಿ ಸ್ವಂತಕ್ಕೆ ಬಳಸಿದ್ದಾರೆ. ನಿರಾಣಿ ಅವರಿಂದ ಆಣೆ ಮಾಡಿಸಿಕೊಂಡು ಸುಳ್ಳು ಹೇಳಿಸುವ ಪ್ರಯತ್ನ ಮಾಡಿದರು ಎಂದು ದೂರಿದರು.

ಅಕ್ಕಿ, ವೆಚ್ಚದ ಲೆಕ್ಕ ಕೊಡಿ ಶಿವಶಂಕರ್

ಸ್ವಾಮೀಜಿ ಪರ ಲೆಕ್ಕ ಕೊಡಿ ಚಳವಳಿಗೆ ಇಳಿದ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಹಾಗೂ ಅವರ ತಂಡದ ಬಗ್ಗೆಯೂ ನಾಗರಾಜ್ ಹೆಸರನ್ನು ಪ್ರಸ್ತಾಪಿಸದೆಯೇ ವಾದ್ದಾಳಿ ನಡೆಸಿದರು. ಮೀಸಲಾತಿ ಹೋರಾಟಕ್ಕೆ ಹಳ್ಳಿ-ಹಳ್ಳಿಗಳಲ್ಲಿ, ಜನರು, ಮುಖಂಡರಿಂದ ಸಂಗ್ರಹಿಸಿದ ದೇಣಿಗೆ ಮತ್ತು ಅಕ್ಕಿ ಎಷ್ಟು? ಎಷ್ಟು ಮೊತ್ತ ಬಳಸಲಾಗಿದೆ. ಸಂಗ್ರಹಿಸಿದ್ದ ಅಕ್ಕಿಯನ್ನು ಎಷ್ಟು ಮೊತ್ತಕ್ಕೆ ಮಾರಿದಿರಿ? ಎಲ್ಲದರ ಲೆಕ್ಕವನ್ನು ನೀಡಲಿ ಎಂದು ಆಗ್ರಹಿಸಿದರು.
ಪೀಠದ ಲೆಕ್ಕ ಕೇಳುತ್ತಿರುವ ಹರಿಹರದ ಮಾಜಿ ಶಾಸಕ ಮತ್ತು ಅವರ ಪಟಾಲಂ ಇಷ್ಟು ದಿನ ಎಲ್ಲಿತ್ತು? ಈ ಪೀಠಕ್ಕೆ ಇವರ ಕೊಡುಗೆ ಏನು? ಈಗಾಗಲೆ ಕೂಡಲಸಂಗಮ ಪೀಠ ಮುಗಿಸಿ ಅಲ್ಲಿನ ಟ್ರಸ್ಟ್‌ನಿಂದ ವಜಾಗೊಂಡ ಮಾಜಿ ಶಾಸಕರು ಇದೀಗ ಹರಿಹರದ ಪೀಠದ ವಿಚಾರದಲ್ಲಿ ಸ್ವಾರ್ಥಕ್ಕಾಗಿ ಗೊಂದಲ ಮೂಡಿಸುತ್ತಿದ್ದಾರೆ ಎಂದೂ ಕಿಡಿ ಕಾರಿದರು.
ಹನಗವಾಡಿ ಬಳಿಯ ಹೆದ್ದಾರಿಯಲ್ಲಿನ 5 ಎಕರೆ ಜಾಗವನ್ನು ನಮ್ಮ ತಂದೆ ಪಡೆದುಕೊಂಡಿದ್ದರು. ಅದರ ಸ್ವಲ್ಪ ಹಣ ನೀಡಿದ್ದೆವು. ಆದರೆ ನೋಂದಣಿ ಆಗಿರಲಿಲ್ಲ. ಪೀಠಕ್ಕೆ ಜಾಗ ಕೇಳಿದಾಗ ನೀಡಲಾಗಿತ್ತು. ಇದು ವಿವಾದದಲ್ಲಿದೆ ಎಂದು ನಾಗರಾಜ್ ಹೇಳಿದರು.
ಕೂಡಲಸಂಗಮ ಪೀಠದ ಅಧ್ಯಕ್ಷ ಅಶೋಕ್ ಗೋಪನಾಳ್ ಮಾತನಾಡಿ ಕೂಡಲಸಂಗಮ ಪೀಠದಿಂದ ಮೀಸಲಾತಿ ಹೆಸರಲ್ಲಿ ಹೋರಾಟ ನಡೆಸಿದಾಗ ಅನೇಕ ಮುಖಂಡರು ಲೋಡ್‌ಗಟ್ಟಲೆ ಅಕ್ಕಿ ನೀಡಿದ್ದರು. ಆದರೆ ಅನೇಕ ಲೋಡ್‌ಗಳ ಅಕ್ಕಿಯನ್ನು ಶಿವಶಂಕರ್ ಅವರು ಮಾರಿದ್ದರು. ಇದರ ಲೆಕ್ಕ ಕೇಳಿ ನಾವು ಕೂಡ ರಾಜ್ಯವ್ಯಾಪಿ ಹೋರಾಟ ಮಾಡುತ್ತೇವೆ ಎಂದರು.
ವಚನಾನಂದ ಸ್ವಾಮೀಜಿ ಮೀಸಲಾತಿಗೆ ಹೋರಾಟ ಮಾಡಲಿಲ್ಲ. ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದ ಅವರು ಅದಕ್ಕೆ ನಡೆಸಿದ ಕಡತಗಳನ್ನು ತೋರಿಸಲಿ ಎಂದ ಅವರು, ರಂಗೀಲಾ ಸ್ವಾಮೀಜಿ, ಮೇಕಪ್ ಸ್ವಾಮೀಜಿ, ಎಸಿ ರೂಂನ ಸ್ವಾಮಿ ಎಂದವರನ್ನೇ ವಚನಾನಂದ ಸ್ವಾಮೀಜಿ ಈಗ ಹತ್ತಿರಕ್ಕೆ ಸೇರಿಸಿಕೊಂಡಿದ್ದಾರೆ ಎಂದೂ ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಚನ್ನಬಸಪ್ಪ ಚಿಕ್ಕಮೇಗಳಗೆರೆ, ರುದ್ರಪ್ಪ ಸೋಗಿ, ಹಾಲೇಶ್ ಕಾಯಿಪೇಟೆ, ಜಗದೀಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net