ಸೂಳೆಕೆರೆ ವಿಚಾರದಲ್ಲಿ ಅಧಿಕಾರಿಗಳ ಕಳ್ಳಾಟ

ಚನ್ನಗಿರಿ ತಾಲೂಕಿನ ಸೂಳೆಕೆರೆ.
ಚನ್ನಗಿರಿ ತಾಲೂಕಿನ ಸೂಳೆಕೆರೆ.
Published on

ಪ್ರಮುಖ ಮುಖ್ಯಾಂಶಗಳು

  • ನಿಗಮಕ್ಕೆ ಸೇರಿದ್ದರೂ ಮರುಸೇರ್ಪಡೆಗೆ ನಾಳೆ ಸಭೆ
  • ನಿಲುವಳಿಯಾದಲ್ಲಿ ಪಿಐಎಲ್- ಬಿ.ಆರ್.ರಘು ಎಚ್ಚರಿಕೆ
  • ಲೋಕಾ ವಿಚಾರಣೆ ದಾರಿತಪ್ಪಿಸಲು ಪ್ರಯತ್ನ- ಆರೋಪ
ದಾವಣಗೆರೆ: ಏಷ್ಯಾದ ಎರಡನೇ ಅತಿ ದೊಡ್ಡ ಕೆರೆಯಾದ, ಚನ್ನಗಿರಿ ತಾಲೂಕಿನ ಸೂಳೆಕೆರೆಯ ಒತ್ತುವರಿ ತೆರವಿಗೆ ಇದುವರೆಗೆ ಕ್ರಮ ಕೈಗೊಳ್ಳದ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಲೋಕಾಯುಕ್ತರ ತನಿಖೆಯಿಂದ ತಪ್ಪಿಸಿಕೊಳ್ಳಲು ‘ಕೆರೆಯನ್ನು ನಮ್ಮ ವ್ಯಾಪ್ತಿಗೆ ಸೇರಿಸಿ’ ಎಂಬ ನಿಲುವಿನೊಂದಿಗೆ ಕಳ್ಳಾಟ ನಡೆಸಿದ್ದಾರೆ ಎಂದು ಖಡ್ಗ ಸಂಘದ ಅಧ್ಯಕ್ಷ ಬಿ. ಆರ್. ರಘು ದೂರಿದರು.
10 ವರ್ಷದಿಂದಲೂ ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಗೆ ಒಳಪಟ್ಟಿದ್ದಾಗಿ ಅಧಿಕಾರಿಗಳು ಲಿಖಿತ ಹಾಗೂ ಮೌಖಿಕವಾಗಿ ಸ್ಪಷ್ಟಪಡಿಸಿರುವುದು ದಾಖಲೆಗಳಲ್ಲಿ ನಮೂದಾಗಿದೆ. ಒತ್ತುವರಿಯಾದ ಸುಮಾರು 1300 ಎಕರೆ ತೆರವಿಗೆ ಕ್ರಮ ಕೈಗೊಳ್ಳದ ನಿಗಮದ ಅಧಿಕಾರಿಗಳು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೆರೆಯನ್ನು ನಿಗಮದ ವ್ಯಾಪ್ತಿಗೆ ಹೊಸದಾಗಿ ಸೇರಿಸುವ ಸಂಬಂಧ ಏ.22ರಂದು ಬೆಳಗ್ಗೆ 11 ಗಂಟೆಗೆ ಅಧಿಕಾರಿಗಳ ಸಭೆ ನಡೆಸುತ್ತಿರುವುದು ಸರಿಯಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ನೇತೃತ್ವದಲ್ಲಿ ಅಂದು ಸೂಳೆಕೆರೆ ಪ್ರವಾಸಿಮಂದಿರದಲ್ಲಿ 30 ಅಧಿಕಾರಿಗಳ ಸಮ್ಮುಖದಲ್ಲಿನ ಸಭೆ ಯನ್ನು ಚನ್ನಗಿರಿ ತಹಸೀಲ್ದಾರ್ ಕರೆದಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಸಂಘವು ಸೂಳೆಕೆರೆ ವಿಚಾರದಲ್ಲಿ ಹೋರಾಟ ನಡೆಸುತ್ತಿದ್ದು ಇದು ನಿಗಮದ ವ್ಯಾಪ್ತಿಯಲ್ಲಿಯೇ ಇದೆ ಎಂಬುದು ಸಂಘದ ಪತ್ರ ವ್ಯವಹಾರಗಳೇ ಸಾಕ್ಷೀಕರಿಸಲಿವೆ ಎಂದರು.
ಕರ್ನಾಟಕ ನೀರಾವರಿ ನಿಗಮ, ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತವು ಜಂಟಿಯಾಗಿ 2020ನೇ ವರ್ಷದಲ್ಲಿ ಸರ್ವೇ ಕಾರ್ಯ ಮಾಡಿದ್ದು, ಇದುವರೆಗೆ ಅಧಿಕೃತ ದಾಖಲೆ ನೀಡಿಲ್ಲ. ಸೂಳೆಕೆರೆ ಒತ್ತುವರಿ ಮತ್ತು ಅದರ ವಿರುದ್ಧ ಕ್ರಮ ಕೈಗೊಳ್ಳದ್ದರಿಂದ ನಿಗಮದ ಕೆಲವು ಅಧಿಕಾರಿಗಳ ವಿರುದ್ಧ ಮತ್ತು ತಾಲೂಕು ಆಡಳಿತದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಒಳಗೊಂಡ ದೂರು ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲಾಗಿದ್ದು ವಿಚಾರಣೆ ಅಂತಿಮ ಹಂತದಲ್ಲಿದೆ ಎಂದರು.
ಪ್ರಧಾನ ಮಂತ್ರಿಗಳ ಕಾರ್ಯಾಲಯ, ಮುಖ್ಯಮಂತ್ರಿ ಕಾರ್ಯಾಲಯ, ದಾವಣಗೆರೆ ಜಿಲ್ಲಾಡಳಿತ ಹಾಗೂ ಇತರ ಪ್ರಾಧಿಕಾರಗಳು ಸೂಳೆಕೆರೆಯ ಒತ್ತುವರಿ ತೆರವಿಗಾಗಿ ಸ್ಪಷ್ಟ ನಿರ್ದೇಶನ ನೀಡಿದ್ದರೂ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗಿದೆ. ಇದು ಆಡಳಿತ ನಿರ್ದೇಶನ ವಿರುದ್ಧದ ನಡೆಯಾಗಿದೆ ಎಂದು ದೂರಿದರು.
ಅಧಿಕಾರಿಗಳಿಂದಲೇ ಕೆರೆ ನಾಶದ ಹುನ್ನಾರ ನಡೆಯುತ್ತಿದೆ. ಒತ್ತುವರಿ ತೆರವಿಗೆ ಆಗ್ರಹಿಸಿದಾಗ ಮಳೆಗಾಲ ಎಂದರು. ಅದು ಮುಗಿದು ಬೇಸಿಗೆ ಬಂದಾಗ ಕೆಲಸದ ಒತ್ತಡದ ನೆಪ ಹೇಳಿ 10 ವರ್ಷದಿಂದ ಕಾಲಹರಣ ಮಾಡಲಾಗುತ್ತ ಬರಲಾಗಿದೆ. ಉದ್ದೇಶಿತ ಸಭೆಯು ಸಾರ್ವಜನಿಕ ಆಸ್ತಿ ಸಂರಕ್ಷಣೆಯ ಉದ್ದೇಶಕ್ಕೆ ವಿರುದ್ಧವಾಗಿರಬಹುದು. ಈಗ ನಡೆಯುತ್ತಿರುವ ವಿಚಾರಣೆಯ ದಿಕ್ಕುತಪ್ಪಿಸುವ ಪ್ರಯತ್ನ ಆಗಿರಬಹುದು ಎಂದರು.
ಕೆರೆ ಸಾರ್ವಜನಿಕ ಆಸ್ತಿಯಾಗಿದೆ. ಇದರ ನೀರು ಬಳಸುವ ಜನರೂ ಸಹ ಇದರ ಬಗ್ಗೆ ಜಾಗೃತರಾಗಬೇಕು. 22ರಂದು ಉದ್ದೇಶಿತ ಸಭೆ ಹಿನ್ನೆಲೆಯಲ್ಲಿ ಚನ್ನಗಿರಿ ಪ್ರವಾಸಿಮಂದಿರ ಬಳಿ ಹೆಚ್ಚಿನ ಸಂಖ್ಯೆಯ ಜನರು ಬರಬೇಕು ಎಂದು ಮನವಿ ಮಾಡಿದರು.
ಒಂದು ವೇಳೆ ಉದ್ದೇಶಿತ ಸಭೆಯಲ್ಲಿ ಸೂಳೆಕೆರೆಯನ್ನು ಕರ್ನಾಟಕ ನೀರಾವರಿ ನಿಗಮಕ್ಕೆ ಹೊಸದಾಗಿ ಸೇರ್ಪಡೆ ಮಾಡಿದ್ದಾಗಿ ನಿಲುವಳಿ ಕೈಗೊಂಡಲ್ಲಿ ಜಿಲ್ಲಾಧಿಕಾರಿಯೂ ಸೇರಿ 30 ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡುವುದಾಗಿಯೂ ಎಚ್ಚರಿಸಿದರು.
ಚಂದ್ರಹಾಸ ಲಿಂಗದಹಳ್ಳಿ ಮಾತನಾಡಿ ಸೂಳೆಕೆರೆಯಲ್ಲಿ ಇದುವರೆಗೆ ನಡೆದ ಕಾಮಗಾರಿಗಳಿಗೆ ಬಳಸಿದ ಹಣ ಯಾವ ಮೂಲದ್ದು, ಎಷ್ಟು ಬಳಕೆಯಾಗಿದೆ ಎಂಬುದರ ಬಗ್ಗೆ ಲೆಕ್ಕ ಕೊಡಲಿ ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಶಿಧರ್ ಎನ್.ಸಿ. ನುಗ್ಗೇಹಳ್ಳಿ, ಮಹ್ಮದ್ ಶಬ್ಬೀರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net