ವಿದ್ಯುತ್ ಖಾಸಗೀಕರಣ ವಿರುದ್ಧ ಆಕ್ಷೇಪಣೆ ಸಲ್ಲಿಸಿ

ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ರೈತ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಲ್ಲೂ
ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ರೈತ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಲ್ಲೂ
Published on

ಪ್ರಮುಖ ಮುಖ್ಯಾಂಶಗಳು

  • ನಿರ್ಲಕ್ಷಿಸುವ ಜನಪ್ರತಿನಿಧಿಗಳಿಗೆ ಕಪ್ಪು ಬಾವುಟ ಪ್ರದರ್ಶನ
  • ರೈತ ಸಂಘಗಳ ಒಕ್ಕೂಟದ ಬಲ್ಲೂರು ರವಿಕುಮಾರ್ ಎಚ್ಚರಿಕೆ
  • ದಾವಣಗೆರೆಯಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ
ದಾವಣಗೆರೆ: ಕೃಷಿ ಕ್ಷೇತ್ರಕ್ಕೆ ಮಾರಕ ಆಗಲಿರುವ ವಿದ್ಯುತ್ ಖಾಸಗೀಕರಣ ನೀತಿಗೆ ತಕರಾರು ಸಲ್ಲಿಸಲು ಜೂ. 23ರವರೆಗೆ ಅವಕಾಶವಿದೆ. ಜಿಲ್ಲೆಯ ಎಲ್ಲ ಹಾಲಿ, ಮಾಜಿ ಶಾಸಕರು, ಎಂಎಲ್ಸಿಗಳು ಕಡ್ಡಾಯವಾಗಿ ಕೆಇಆರ್‌ಸಿಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ರಾಜ್ಯ ರೈತ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಆಗ್ರಹಿಸಿದರು.
ಕುಣಿಗಲ್ ಶಾಸಕ ರಂಗನಾಥ್ ಅವರೊಬ್ಬರೇ ಇದುವರೆಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳು ತಕರಾರು ಮಾಡದೆ ಹೋದರೆ ಜೂ. 26ರಂದು ಖಾಸಗೀಕರಣ ನೀತಿ ಅನುಮೋದನೆ ಮಾಡಲು ಸರ್ಕಾರ ಮುಂದಾಗಲಿದೆ. ತಕರಾರು ಸಲ್ಲಿಸದ ಜನಪ್ರತಿನಿಧಿಗಳ ಮನೆ ಬಳಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ 45 ಲಕ್ಷ ಕೃಷಿ ಪಂಪ್‌ಸೆಟ್ ಬಳಕೆದಾರರಿದ್ದಾರೆ. ಇದಲ್ಲದೆ ಸಣ್ಣ ಉದ್ದಿಮೆ, ಗುಡಿ ಕೈಗಾರಿಕೆಗಳಿಗೂ ವಿದ್ಯುತ್ ಖಾಸಗೀಕರಣ ನೀತಿ ದುಷ್ಪರಿಣಾಮ ಬೀರಲಿದೆ. ರಾಜ್ಯದಲ್ಲಿ ಶಾಸಕರು, ಸಚಿವರ ವೇತನಕ್ಕೆ 475 ಕೋಟಿ ರೂ. ವೆಚ್ಚವಾಗುತ್ತಿದೆ. ಹೀಗಾಗಿ ಕೃಷಿಕರ ಪರವಾಗಿ ಅವರು ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
ದೇಶಕ್ಕೆ ಅನ್ನ ನೀಡುವ ರೈತರಿಂದಲೇ 5 ಸಾವಿರ ಕೋಟಿ ರೂ. ಮೊತ್ತದ ಪ್ರತ್ಯಕ್ಷ ಹಾಗೂ ಪರೋಕ್ಷ ತೆರಿಗೆ ಸರ್ಕಾರಕ್ಕೆ ಸಂದಾಯವಾಗಲಿದೆ. ರೈತರು ವಿದ್ಯುತ್ ಬಿಲ್ ಪಾವತಿಸಿ ಕೃಷಿ ಕಾರ್ಯ ಮಾಡಲು ಸಾಧ್ಯವಿಲ್ಲ. ಕೂಡಲೆ ಸರ್ಕಾರ ಖಾಸಗೀಕರಣ ಮಾಡುವ ನಿರ್ಧಾರ ಕೈಬಿಡಬೇಕು ಎಂದು ಒತ್ತಾಯಿಸಿದರು.
ಖಾಸಗೀಕರಣ ನೀತಿಯು ಶ್ರೀಮಂತ ಉದ್ದಿಮೆದಾರರಿಗೆ ಸಹಾಯ ಮಾಡಿಕೊಡುವ ಹುನ್ನಾರವಾಗಿದೆ. ರೈತರ ಜತೆಗೆ ಕೈಗಾರಿಕೆ, ಸಣ್ಣ ಉದ್ದಿಮೆ, ಹೋಟೆಲ್ ಇತರೆ ಗ್ರಾಹಕರ ಮೇಲೂ ಹೊರೆಯಾಗಲಿದೆ. ತಕರಾರು ಸಲ್ಲಿಸುವುದಾಗಿ ಭರವಸೆ ನೀಡಿರುವ ಶಾಸಕರಾದ ಕೆ. ಎಸ್.ಬಸವಂತಪ್ಪ, ಶಿವಗಂಗಾ ಬಸವರಾಜ್ ಮಾತು ತಪ್ಪಿದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿದ್ಯುತ್ ಖಾಸಗೀಕರಣ ನೀತಿಗೆ ವಿರೋಧಿಸಿ ರಾಜ್ಯ ರೈತ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಜೂ.18ರಂದು ಜಯದೇವ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿ ಮನವಿ ಸಲ್ಲಿಸಲಾಗುವುದು. ರೈತಹಿತ ಮರೆವ ಜನಪ್ರತಿನಿಧಿಗಳ ವಿರುದ್ಧದ ಕ್ರಮ ಕುರಿತಂತೆ ರೈತರ ಪ್ರತ್ಯೇಕ ಸಭೆ ಕರೆದು ಚರ್ಚಿಸಲಾಗುವುದು ಎಂದು ಹೇಳಿದರು.
ಒಕ್ಕೂಟದ ಮುಖಂಡ ನ್ಯಾಮತಿ ಕರಿಬಸಪ್ಪ ಗೌಡ ಮಾತನಾಡಿ, ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಿದರೆ ಒಕ್ಕಲುತನಕ್ಕೆ ಪೆಟ್ಟು ಬೀಳಲಿದೆ. ರೈತರ ಬದುಕು ಹಾಗೂ ಕೃಷಿ ಅವನತಿಗೆ ಅಂಚು ತಲುಪಲಿದ್ದು, ಆಹಾರ ಭದ್ರತೆಗೂ ಕಂಟಕ ಆಗಲಿದೆ ಎಂದರು.
ಒಕ್ಕೂಟದ ಮುಖಂಡರಾದ ನಿಟುವಳ್ಳಿ ಅಂಜಿನಪ್ಪ ಪೂಜಾರ್, ಹೆಬ್ಬಾಳ್ ರಾಜಯೋಗಿ, ಬಲ್ಲೂರು ಪರಶುರಾಮ ರೆಡ್ಡಿ, ಹೊನ್ನಾಳಿ ಕೆ.ಸಿ.ಬಸಪ್ಪ ಮೇಷ್ಟ್ರು, ಸೋಮಗೊಂಡು, ಬಾಡದ ಹನುಮಂತಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net