ಪ್ರಾಚೀನ ವಾಸ್ತುಶಿಲ್ಪಕ್ಕೆ ಇಲ್ಲ ಸಾಟಿ

ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಕೆ.ಎಸ್. ಬಸವಂತಪ್ಪ, ದಿನೇಶ ಕೆ. ಶೆಟ್ಟಿ, ಜಿ.ಎಂ. ಗಂಗಾಧರ ಸ್ವಾಮಿ, ಮಮತಾ ಹೊಸಗೌಡರ, ಮಲ್ಲನಾಯ್ಕ, ರೇಷ್ಮಾ ಕೌಸರ್, ರವಿಚಂದ್ರ, ಬಿ.ವಿ. ಶಿವಾನಂದ್ ಇದ್ದರು.
ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಕೆ.ಎಸ್. ಬಸವಂತಪ್ಪ, ದಿನೇಶ ಕೆ. ಶೆಟ್ಟಿ, ಜಿ.ಎಂ. ಗಂಗಾಧರ ಸ್ವಾಮಿ, ಮಮತಾ ಹೊಸಗೌಡರ, ಮಲ್ಲನಾಯ್ಕ, ರೇಷ್ಮಾ ಕೌಸರ್, ರವಿಚಂದ್ರ, ಬಿ.ವಿ. ಶಿವಾನಂದ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಯಕೊಂಡ ಶಾಸಕ ಬಸವಂತಪ್ಪ ಹೇಳಿಕೆ
  • ಅಮರಶಿಲ್ಪಿ ಜಕಣಾಚಾರಿ ಜಯಂತಿ
  • ಜಿಲ್ಲಾಡಳಿತದಿಂದ ಆಯೋಜನೆ
ದಾವಣಗೆರೆ : ಆಧುನಿಕ ತಂತ್ರಜ್ಞಾನ, ಸಲಕರಣೆಗಳು ಇದ್ದರೂ ಸಹ ಪ್ರಾಚೀನ ಕಾಲದ ವಾಸ್ತುಶಿಲ್ಪ ಕೆತ್ತನೆಯ ಜನಪ್ರಿಯತೆಗೆ ಸಾಟಿಯಲ್ಲ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಅಮರಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಚೀನ ಕಾಲದಲ್ಲಿ ಆಧುನಿಕ ತಂತ್ರಜ್ಞಾನ, ಸಲಕರಣೆ ಇಲ್ಲದ ಸಂದರ್ಭದಲ್ಲಿ ಉಳಿ ಮತ್ತು ಸುತ್ತಿಗೆಯಿಂದ ಸೂಕ್ಷ್ಮವಾಗಿ ಅದ್ಭುತ ಕೆತ್ತನೆ ಮಾಡಿ ವಿಶ್ವ ಪ್ರಸಿದ್ಧಿ ಪಡೆದವರು ಅಮರಶಿಲ್ಪಿ ಜಕಣಾಚಾರಿ ಎಂದು ತಿಳಿಸಿದರು.
ಪ್ರಾಚೀನ ಕಾಲದ ವಿಶ್ವ ಪಾರಂಪರಿಕ ಇತಿಹಾಸವುಳ್ಳ ದೇವಾಲಯ, ವಾಸ್ತುಶಿಲ್ಪ ಕೇಂದ್ರ, ಶಿಲೆಗಳು ಇಂದಿಗೂ ಉಳಿದಿವೆ ಎಂದರೆ, ಅದಕ್ಕೆ ಜಕಣಾಚಾರಿ ಅವರಂತಹ ಹೆಸರಾಂತ ಶಿಲ್ಪಿಗಳೇ ಕಾರಣ ಎಂದು ಅಭಿಪ್ರಾಯಪಟ್ಟರು.
ಜಕಣಾಚಾರಿ ಅವರು ಕೆತ್ತನೆ ಮಾಡಿದ ಬೇಲೂರು, ಹಳೇಬೀಡು ದೇವಾಲಯಗಳು ವಿಶ್ವ ಪ್ರಸಿದ್ಧವಾಗಿವೆ. ಕಲ್ಲು ಕೆತ್ತನೆಯಷ್ಟೇ ಅಲ್ಲದೇ, ತಾಮ್ರ, ಬೆಳ್ಳಿ, ಬಂಗಾರದ ಮೇಲೆಯೂ ಕೆತ್ತನೆ ಕೈಚಳಕ ತೋರ್ಪಡಿಸಿದ್ದಾರೆ. ಇಂತಹ ಕಲೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಿದೆ. ನಮ್ಮ ಇತಿಹಾಸ ಮತ್ತು ಸಂಸ್ಕೃತಿ, ಪರಂಪರೆಯನ್ನು ಭವಿಷ್ಯದ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದು ಆಶಯ ವ್ಯಕ್ತಪಡಿಸಿದರು.
ಸಮಾಜದ ಮುಖಂಡ ವೀರೇಶ್ ಆಚಾರಿ ಉಪನ್ಯಾಸ ನೀಡಿದರು. ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಮತಾ ಹೊಸಗೌಡರ, ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್, ತಹಸೀಲ್ದಾರ್ ಡಾ. ಅಶ್ವಥ್, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ನಾಗೇಂದ್ರಚಾರ್, ಗೌರವಾಧ್ಯಕ್ಷ ಪೂರ್ವಾಚಾರ್, ಕಾರ್ಯದರ್ಶಿ ಬಿ.ವಿ. ಶಿವಾನಂದ್, ಉಪಾಧ್ಯಕ್ಷ ಬಿ. ಸಿದ್ದಾಚಾರ್, ಆಡಳಿತಾಧಿಕಾರಿ ಬಿ.ಬಿ. ಜಗನ್ನಾಥ್ ಸೇರಿ ಸಮಾಜದ ಮುಖಂಡರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿದರು.

ಮಕ್ಕಳಿಗೆ ಇತಿಹಾಸದ ಅರಿವು

ಮಕ್ಕಳಿಗೆ ಕಟ್ಟು ಕಥೆಗಳ ಬದಲಾಗಿ ಸಾಹಿತ್ಯ, ಕಲೆ, ವಾಸ್ತುಶಿಲ್ಪದ ಇತಿಹಾಸದ ಬಗ್ಗೆ ತಿಳಿಸಬೇಕಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.
ಗಾಂಧಾರ, ಮಥುರಾ, ಮತ್ತು ಹೊಯ್ಸಳ ಶೈಲಿಯ ಕಲೆ, ವಾಸ್ತುಶಿಲ್ಪವನ್ನು ಉತ್ತರದಿಂದ ದಕ್ಷಿಣ ಭಾರತದುದ್ದಕ್ಕೂ ಕಾಣಬಹುದು. ಅದರಲ್ಲಿಯೂ ಹೊಯ್ಸಳ ಶೈಲಿಯ ವಾಸ್ತುಶಿಲ್ಪ ಪ್ರಪಂಚದಲ್ಲಿ ಎಲ್ಲಿಯೂ ಕಾಣಲು ಸಿಗುವುದಿಲ್ಲ ಎಂದರು.
ಬೇಲೂರು, ಹಳೇಬೀಡು, ತುಮಕೂರು ಜಿಲ್ಲೆಯಲ್ಲಿಯೇ 40ಕ್ಕೂ ಹೆಚ್ಚು ದೇವಾಲಯ ನಿರ್ಮಾಣ ಮಾಡಲಾಗಿದೆ. ನಮ್ಮ ಜಿಲ್ಲೆಯ ಕಲ್ಲೇದೇವಪುರದಲ್ಲಿ ಹೊಯ್ಸಳ ವಾಸ್ತುಶಿಲ್ಪ ಶೈಲಿಯನ್ನು ಕಾಣಬಹುದು. ನೆರೆ ರಾಜ್ಯಗಳಲ್ಲಿ ಕೂಡ ತಮ್ಮ ಪ್ರತಿಭೆಯ ಅನಾವರಣಗೊಳಿಸುವ ಮೂಲಕ ಇಡೀ ಪ್ರಪಂಚಕ್ಕೆ ಅಪಾರ ಕೊಡುಗೆ ನೀಡಿದವರು ಅಮರಶಿಲ್ಪಿ ಜಕಣಾಚಾರಿ. ಇಂಥವರ ಜೀವನ, ಸಾಧನೆ, ಯಶೋಗಾಥೆಯನ್ನು ಭವಿಷ್ಯದ ಪೀಳಿಗೆಗೆ ತಿಳಿಸುವ ಅಗತ್ಯತೆ ಇದೆ ಎಂದು ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net