ಬೇಡ ಸೋಮಾರಿತನ, ಇರಲಿ ಸಾಧಿಸುವ ಛಲ

ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ಗುರುವಾರ ಸಂಜೆ ನಡೆದ ‘ದವನ 2026’ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯ ವಿಜೇತರಿಗೆ ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ್ ಬಹುಮಾನ ವಿತರಿಸಿದರು. ಪ್ರೊ. ವೈ. ವೃಷಭೇಂದ್ರಪ್ಪ, ಡಾ. ವಿನುತಾ ಎಚ್.ಪಿ, ಡಾ. ಜಿ. ಮಾನವೇಂದ್ರ ಇದ್ದರು.
ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ಗುರುವಾರ ಸಂಜೆ ನಡೆದ ‘ದವನ 2026’ ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯ ವಿಜೇತರಿಗೆ ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ್ ಬಹುಮಾನ ವಿತರಿಸಿದರು. ಪ್ರೊ. ವೈ. ವೃಷಭೇಂದ್ರಪ್ಪ, ಡಾ. ವಿನುತಾ ಎಚ್.ಪಿ, ಡಾ. ಜಿ. ಮಾನವೇಂದ್ರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯೆ ಎಂ.ಪಿ. ರೂಪಶ್ರೀ ಸಲಹೆ
  • ಬಿ.ಐ.ಇ.ಟಿ ಕಾಲೇಜಿನಲ್ಲಿ ‘ದವನ 2026’
ದಾವಣಗೆರೆ : ವಿದ್ಯಾರ್ಥಿಗಳು ಸೋಮಾರಿತನ ಬಿಟ್ಟು, ಗುರಿಯೊಂದಿಗೆ ಸಾಧಿಸುವ ಛಲ ಬೆಳೆಸಿಕೊಳ್ಳಬೇಕು ಎಂದು ಧ.ರಾ.ಮ ವಿಜ್ಞಾನ ಕಾಲೇಜು ಪ್ರಾಚಾರ್ಯೆ ಎಂ.ಪಿ. ರೂಪಶ್ರೀ ಹೇಳಿದರು.
ನಗರದ ಬಿ.ಐ.ಇ.ಟಿ ಕಾಲೇಜಿನಲ್ಲಿ ಗುರುವಾರ ಸಂಜೆ ನಡೆದ ‘ದವನ 2026’ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ನೆನಪಿಸಿದ ಅವರು, ದವನ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳಬಹುದು, ಇಂದಿನ ಯುವಜನತೆಯು ಮುಂದಿನ ಭವಿಷ್ಯ ಎಂದು ತಿಳಿಸಿದರು.
ದವನ ಕಾರ್ಯಕ್ರಮವು 1984ರಿಂದ ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಹಿಂದೆ ದವನದಲ್ಲಿ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದರು. ಇತ್ತೀಚೆಗೆ ಬಿ.ಐ.ಇ.ಟಿ ಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ 6 ಸಾವಿರ ಮೀರಿದ್ದು ದವನ ಆಯೋಜಿಸಲು ಸಮರ್ಥವಾಗಿದೆ ಎಂದರು.
ಎರಡು ದಿನಗಳ ಕಾಲ ಸಂಗೀತ, ನೃತ್ಯ, ಚರ್ಚಾ ಸ್ಪರ್ಧೆ, ಕಿರು ನಾಟಕ, ವ್ಯಂಗ್ಯಚಿತ್ರ, ಛಾಯಾಚಿತ್ರ, ಫ್ಯಾಷನ್ ಶೋ ಹೀಗೆ 23 ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಈ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ಬಹುಮಾನ ನೀಡಲಾಯಿತು. ಇತ್ತೀಚೆಗೆ ನಡೆದ ವಿಟಿಯು ಕೇಂದ್ರ ವಲಯ ಕ್ರಿಕೆಟ್ ಟೂರ್ನಿಯಲ್ಲಿ ವಿಜೇತರಾದ ಬಿ.ಐ.ಇ.ಟಿ ಕ್ರಿಕೆಟ್ ತಂಡಕ್ಕೆ ಸನ್ಮಾನಿಸಲಾಯಿತು.
ದವನ-2026ರಲ್ಲಿ ಡೇಟಾ ಸೈನ್ಸ್ ವಿಭಾಗದ ನಿತಿನ್ ಆರ್ ಮತ್ತು ಸ್ಫೂರ್ತಿ ಎನ್.ಎಸ್. ಕ್ರಮವಾಗಿ ‘ದವನ ಕುವರ’ ಮತ್ತು ‘ದವನ ಕುವರಿ’ ಪ್ರಶಸ್ತಿಗೆ ಭಾಜನರಾದರು. ಡೇಟಾ ಸೈನ್ಸ್ ವಿಭಾಗದವರು ಸರಾಸರಿ 1275 ಅಂಕಗಳನ್ನು ಗಳಿಸಿ ದವನ ಪರ್ಯಾಯ ಪಾರಿತೋಷಕ ವಿಜೇತರಾದರು. ಕಂಪ್ಯೂಟರ್ ಸೈನ್ಸ್ ವಿಭಾಗವು ಎರಡನೇ ಸ್ಥಾನ ಗಳಿಸಿ ದವನ ರನ್ನರ್ ಅಪ್ ಟ್ರೋಫಿಯನ್ನು ಪಡೆದುಕೊಂಡಿತು.
ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ್, ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ವಿದ್ಯಾರ್ಥಿ ಪರಿಷತ್ತಿನ ಮುಖ್ಯಸ್ಥೆ ಡಾ. ವಿನುತಾ ಎಚ್.ಪಿ, ಸದಸ್ಯರು, ಸಲಹೆಗಾರರಾದ ಡಾ. ಜಿ. ಮಾನವೇಂದ್ರ, ಡಾ. ದೇವೇಂದ್ರಪ್ಪ ಕೆ.ಸಿ, ಭಾಗ್ಯ ಶಾಂತಕುಮಾರ್, ಚಂದ್ರಶೇಖರ್, ಶ್ರೀನಿಧಿ ಆರ್ ಕುಲಕರ್ಣಿ, ಸಾವನ್ ಬಸವರಾಜ್, ಶಿವಕುಮಾರ ಸ್ವಾಮಿ ಇದ್ದರು. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವೃಂದ ಪ್ರಾರ್ಥಿಸಿದರು, ಮೋಕ್ಷ ಬಿ.ವಿ ಸ್ವಾಗತಿಸಿದರು, ಸತೀಶ್ ಎಂ.ಪಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಅನ್ಮೋಲ್ ವಂದಿಸಿದರು.
ಬಹುಮಾನ ವಿತರಣಾ ಸಮಾರಂಭದ ನಂತರ ಸರಿಗಮಪ ಖ್ಯಾತಿಯ ಗಾಯಕಿ ಐಶ್ವರ್ಯ ರಂಗರಾಜನ್ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು. ಅವರು ತಮ್ಮ ವಿಶಿಷ್ಟ ಧ್ವನಿ ಹಾಗೂ ಹಾಡುಗಳ ಮೂಲಕ ರಂಜಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net