ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ
Published on

ಪ್ರಮುಖ ಮುಖ್ಯಾಂಶಗಳು

  • ವಿರೋಧಿಗಳು ಬಹಿರಂಗ ಹೇಳಿಕೆ ನೀಡಲಿ
  • ಮಾಜಿ ಸಚಿವ ರೇಣುಕಾಚಾರ್ಯ ಸವಾಲು
  • ಹಗುರ ಹೇಳಿಕೆ ಮುಂದುವರಿದಲ್ಲಿ ಪರ್ಯಾಯ ಸಭೆ
ದಾವಣಗೆರೆ: ವಿಜಯೇಂದ್ರ ವಿರುದ್ಧ ಒಳಸಂಚು ಮಾಡುವವರು ತಾಕತ್ತಿದ್ದರೆ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಹಾಗೂ ಯಡಿಯೂರಪ್ಪ ಬಿಜೆಪಿಗೆ ಅಗತ್ಯವಿಲ್ಲ ಎಂಬ ಬಗ್ಗೆ ಬಹಿರಂಗ ಹೇಳಿಕೆ ನೀಡಲಿ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಅಬಾಧಿತ. ವಿಜಯೇಂದ್ರ ನೇತೃತ್ವದಲ್ಲಿ ಮುಂದಿನ 2028ರ ವಿಧಾನಸಭೆ ಚುನಾವಣೆ ಎದುರಿಸಲಿದ್ದೇವೆ. ಅವರ ಬಗ್ಗೆ ಹಗುರ ಹೇಳಿಕೆ ಮುಂದುವರಿಸಿದರೆ ಸಹಿಸುವುದಿಲ್ಲ. ನಾವೂ ಸಹ ಪರ್ಯಾಯ ಸಭೆ ನಡೆಸುತ್ತೇವೆ ಎಂದು ಸೋಮವಾರ ಸುದ್ದಿಗೋಷ್ಠಿ ಮೂಲಕ ಸ್ವಪಕ್ಷದ ವಿರೋಧಿ ಗುಂಪಿನವರಿಗೆ ಎಚ್ಚರಿಕೆ ನೀಡಿದರು.
ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡದಂತೆ ಪಕ್ಷದ ಮುಖಂಡರು, ವರಿಷ್ಠರು ಸೂಚಿಸಿದ ಕಾರಣಕ್ಕೆ ಮಾತನಾಡುತ್ತಿರಲಿಲ್ಲ. ನಾವೂ ಸಹ ರಾಷ್ಟ್ರೀಯ ನಾಯಕರ ಭೇಟಿಯಾಗಿ ಅಲ್ಲಿಯೇ ವಿರೋಧಿಗಳಿಗೆ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.
ರಾಜ್ಯಾಧ್ಯಕ್ಷರಾದ ಎರಡು ವರ್ಷದಲ್ಲಿ ವಿಜಯೇಂದ್ರ ಅವರು ಪಕ್ಷವನ್ನು ಉತ್ತಮವಾಗಿ ಸಂಘಟಿಸಿದ್ದಾರೆ. ಅವರ ನೇತೃತ್ವದಲ್ಲಿ ಹೆಚ್ಚಿನ ಲೋಕಸಭಾ ಸ್ಥಾನ ಗೆದ್ದಿದ್ದೇವೆ. ಅನೇಕ ಹೋರಾಟಗಳು ನಡೆದಿವೆ. ಅವರಿಗೆ ಹಾಗೂ ಪಕ್ಷಕ್ಕೆ ಕೆಟ್ಟು ಹೆಸರು ತರಲು ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲವರು ಅಡ್ಡ ಮತದಾನ ಮಾಡಿದ್ದಾರೆ. ಅಂಥವರ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡಲಿದ್ದಾರೆ ಎಂದರು.
ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ಹೊಗಳಿದವರು ಈಗ ಟೀಕೆ ಮಾಡುತ್ತಿದ್ದಾರೆ. ಬಿಎಸ್‌ವೈ ಎಂದಿಗೂ ಕುಟುಂಬ ರಾಜಕಾರಣ ಮಾಡಲಿಲ್ಲ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದು ರಾಷ್ಟ್ರೀಯ ಮುಖಂಡರೇ ಹೊರತು ಯಡಿಯೂರಪ್ಪನವರಲ್ಲ ಎಂದೂ ಹೇಳಿದರು.
ಯಡಿಯೂರಪ್ಪ ಹಾಗೂ ಅವರ ಕುಟುಂಬದ ಬಗ್ಗೆ ಟೀಕಿಸುತ್ತಿರುವವರು ಮೀರ್ ಸಾದಿಕ್, ಸಮಯ ಸಾಧಕರು. ಯಡಿಯೂರಪ್ಪ ಅವರು ಪಕ್ಷ ಕಟ್ಟದೇ ಹೋಗಿದ್ದರೆ ಟೀಕಾಕಾರರೂ ಸಹ ಅಧಿಕಾರ ಅನುಭವಿಸುತ್ತಿರಲಿಲ್ಲ. ಮಂತ್ರಿ, ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಬಿಎಸ್‌ವೈ ಅವರಿಂದಾಗಿ ದಕ್ಷಿಣ ಭಾರತದಲ್ಲಿ ಪಕ್ಷದ ಬಾಗಿಲು ತೆರೆದಿದೆ ಎಂದರು.
ಕುಮಾರ್ ಬಂಗಾರಪ್ಪ ಅವರನ್ನು ಬಿಜೆಪಿಗೆ ಕರೆ ತಂದಿದ್ದು ಯಡಿಯೂರಪ್ಪ ಅವರೇ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲೂ ಗೆಲ್ಲಲಾಗದವರು ಯಡಿಯೂರಪ್ಪ ಬಗ್ಗೆಯೇ ಮಾತನಾಡುತ್ತಾರೆ ಎಂದು ಹೇಳಿದರು.
ನಾನು ಎಂದಿಗೂ ಕಾಂಗ್ರೆಸ್ ಸೇರ್ಪಡೆಗಾಗಿ ಅರ್ಜಿ ಹಾಕಿಲ್ಲ. ಯಾವುದೇ ಕಾರಣಕ್ಕೂ ಅಲ್ಲಿಗೆ ಹೋಗುವುದೂ ಇಲ್ಲ ಎಂದೂ ಪ್ರಶ್ನೆಯೊಂದಕ್ಕೆ ಸ್ಪಷ್ಟಪಡಿಸಿದರು.

ಮಂತ್ರಿಗಿರಿ ಕೇಳಿಲ್ಲ, ಕೊಟ್ರೆ ಬಿಡುವುದೂ ಇಲ್ಲ
7 ಬಾರಿ ಗೆದ್ದವರಿಗೂ ಸಿಕ್ಕಿಲ್ಲ ಸಚಿವ ಸ್ಥಾನ
ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ನಿರೀಕ್ಷೆ
ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿಕೆ

ವಿಜಯವಾಣಿ ಸುದ್ದಿಜಾಲ ದಾವಣಗೆರೆ:
ನನ್ನನ್ನು ಮಂತ್ರಿ ಮಾಡುವಂತೆ ಯಾರನ್ನೂ ಕೇಳೋಕೆ ಹೋಗಿಲ್ಲ. ಸಚಿವ ಸ್ಥಾನ ಕೊಟ್ಟರೆ ಬಿಡುವುದೂ ಇಲ್ಲ ಎಂದು ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ರಾಷ್ಟ್ರೀಯ ಪಕ್ಷ. ಜಾತ್ಯತೀತ, ಸಾಮಾಜಿಕ ನ್ಯಾಯದ ಪಕ್ಷ. ಎಲ್ಲ ಜನಾಂಗ, ಜಾತಿಯವರನ್ನು ಒಳಗೊಂಡ. ಅದೊಂದು ಸಮುದ್ರ. ನನಗೂ ಸೇರಿ ಎಲ್ಲರಿಗೂ ಸಾಮಾಜಿಕ ನ್ಯಾಯ ಕಲ್ಪಿಸುವ ವಿಶ್ವಾಸವಿದೆ ಎಂದರು.
ಶಾಸಕರಾದ ಕೆ.ಎಸ್. ಬಸವಂತಪ್ಪ, ಶಿವಗಂಗಾ ಬಸವರಾಜ್, ದೇವೇಂದ್ರಪ್ಪ ಅವರೊಂದಿಗೆ ನಾನು ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ಮಾಡಿದ್ದು ನಿಜ. ಸಿಎಂ ಆಗಿದ್ದ ಅವರಿಗೆ ಶುಭ ಕೋರಲು ಹೋಗಿದ್ದೆವೇ ಹೊರತಾಗಿ ಮಂತ್ರಿಗಿರಿಗಾಗಿ ಅಲ್ಲ. ಜಿಲ್ಲೆಗೆ ಎರಡು ಸಚಿವ ಸ್ಥಾನ ಅಥವಾ ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದೂ ಕೇಳಿಲ್ಲ ಎಂದೂ ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ನಲ್ಲಿ ಹಿರಿತನ ಎಂದು ನೋಡಿದರೆ 5ರಿಂದ ಏಳೂ ಬಾರಿ ಗೆದ್ದವರೂ ಇದ್ದಾರೆ. ಅವರೂ ಈವರೆಗೆ ಮಂತ್ರಿ ಆಗಿಲ್ಲ. ಹಿರಿತನಕ್ಕಿಂತಲೂ ಸಾಮಾಜಿಕ ಬದ್ಧತೆ, ಜಿಲ್ಲಾ ಪ್ರಾತಿನಿಧ್ಯ, ಜಾತಿ ಎಲ್ಲವನ್ನೂ ನೋಡಿಯೇ ಮಂತ್ರಿ ಸ್ಥಾನ ನೀಡುತ್ತಾರೆ.
ನನ್ನ ಹತ್ತಿರ ಯಾವ ಸೂಟ್‌ಕೇಸ್ ಹಾಗೂ ಕೇಸ್ ಏನೂ ಇಲ್ಲ. ನನಗೆ ದೇವರು ಕೊಟ್ಟಿದ್ದು ಸಾಕಷ್ಟಿದೆ. ಮಂತ್ರಿ ಮಾಡಿ ಎಂದು ಕೇಳಲು ಹೋಗಿಲ್ಲ. ಅದು ಸಿಗದಿದ್ದರೂ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಸಿಗುವ ವಿಶ್ವಾಸವಿದೆ ಎಂದರು.
ಮುಂದಿನ ಸಚಿವ ಸಂಪುಟ ವಿಸ್ತರಣೆ ಆಗುವವರೆಗೆ ಈಗಿರುವ ಸಚಿವರಿಗೇ ಕೆಲವು ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದೆ ಎಂದರು. ಮಲ್ಲಿಕಾರ್ಜುನ್ ಅವರೇ ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಬರುತ್ತಾರೆಯೇ? ಎಂಬ ಪ್ರಶ್ನೆಗೆ ‘ಗೊತ್ತಿಲ್ಲ. ಏನು ಬೇಕಾದರೂ ಆಗಬಹುದು’ ಎಂದರು.
ದೆಹಲಿಗೆ ನಾನು ಸೇರಿದಂತೆ 30 ಜನ ಎಂಎಲ್‌ಎಗಳು ಕೆಲವಾರು ತಿಂಗಳ ಹಿಂದೆ ದೆಹಲಿಗೆ ಹೋಗಿದ್ದು ನಿಜ. ಯಾರೂ ಮಂತ್ರಿ ಮಾಡಿ ಎಂದು ಕೇಳಲು ಹೋಗಿರಲಿಲ್ಲ. ರಾಜ್ಯ ದಲ್ಲಿನ ಗೊಂದಲವನ್ನ ಆದಷ್ಟು ಬೇಗ ಬಗೆಹರಿಸಿ ಎಂದು ಮನವಿ ಮಾಡಿಕೊಳ್ಳಲು ದೆಹಲಿಗೆ ಹೋಗಿದ್ದೆವು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಿಎಚ್‌ಡಿ ಮಾಡದೆ ಇದ್ದವರೂ ಸಹ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಮಂತ್ರಿ ಮಾಡಲು, ರಾಜಕೀಯದಲ್ಲಿ ನಿರ್ದಿಷ್ಟ ಮಾನದಂಡ ಎಂಬುದಿಲ್ಲ ಎಂದೂ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
---
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net