ದಾವಣಗೆರೆಯಲ್ಲಿ ಶುಕ್ರವಾರ ನಡೆದ ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಸಮರ್ಥ ಶಾಮನೂರು ಮಾತನಾಡಿದರು. ಡಾ.ಎಂ.ಬಿ. ಅಶ್ವಥ್, ರಾಮ್ ಭೋವಿ, ಮಹೇಶ್ ಇದ್ದರು.
ದಾವಣಗೆರೆ :ನೂತನ ಶಾಸಕ ಸಮರ್ಥ ಶಾಮನೂರು ಶುಕ್ರವಾರ ಪಾಲ್ಗೊಂಡ ಮೊದಲ ಪ್ರಗತಿ ಪರಿಶೀಲನಾ ಸಭೆಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಮಸ್ಯೆಗಳಿಗೆ ಕಿವಿಯಾದರು.
ಇಲ್ಲಿನ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಕ್ಷೇತ್ರದ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ಮತ್ತು ನಗರ ಪ್ರದೇಶದ ಜನರಿಗೆ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳ ಮಾಹಿತಿ ಪಡೆದುಕೊಂಡರು.
ಪಿಡಿಒಗಳು ತಮ್ಮ ಗ್ರಾ.ಪಂ. ವ್ಯಾಪ್ತಿಯ ಪ್ರಗತಿಯ ವಿವರಗಳನ್ನು ಸಭೆಯ ಮುಂದಿಟ್ಟರು. ಹದಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 6 ಕೊಳವೆಬಾವಿಯಲ್ಲಿ ಗಡಸು ನೀರಿದೆ. ಹೊಸದಾಗಿ 2 ಬೋರ್‌ಗಳ ಅಗತ್ಯವಿದೆ. ಒಳಚರಂಡಿ ಕಾಮಗಾರಿ ಬಾಕಿ ಇದೆ ಎಂದು ಅಲ್ಲಿನ ಪಿಡಿಒ ತಿಳಿಸಿದರು.
ಮುದಹದಡಿ ಪಿಡಿಒ ಮಾತನಾಡಿ, ಸ್ಮಶಾನ ಜಾಗದ ಅಗತ್ಯವಿದೆ. ಜರೆಕಟ್ಟೆ ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ ಬೇಕಾಗಿದೆ. ಶಾಲೆಗೆ ಕಾಂಪೌಂಡ್ ಆಗಬೇಕು. ಚರಂಡಿ, ರಾಜಕಾಲುವೆ ಅಭಿವೃದ್ಧಿಪಡಿಸಬೇಕು. ಗ್ರಾ.ಪಂ.ಗೆ 140 ಮನೆ ಮಂಜೂರಾಗಿದ್ದವು, ಅವುಗಳಲ್ಲಿ 60 ಕಾಮಗಾರಿ ಪೂರ್ಣಗೊಂಡಿವೆ ಎಂದು ವಿವರಿಸಿದರು.
ಜಿ.ಪಂ. ಉಪ ಕಾರ್ಯದರ್ಶಿ ಮಮತ ಹೊಸಗೌಡರ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಮಹೇಶ್ ಇದ್ದರು.
ಕುಡಿಯುವ ನೀರಿಗೆ ಆದ್ಯತೆ ಕೊಡಿ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಗ್ರಾಮಗಳಲ್ಲಿ ಕುಡಿಯುವ ನೀರು ಮತ್ತು ಮೂಲ ಸೌಕರ್ಯಗಳಿಗೆ ಒತ್ತು ನೀಡಿ, ಸಾರ್ವಜನಿಕರಿಂದ ಯಾವುದೆ ದೂರುಗಳು ಬರದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಸಮರ್ಥ್ ಶಾಮನೂರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ‘ಜಲ ಜೀವನ್ ಮಿಷನ್’ ಯೋಜನೆಯಡಿ ಕಾಮಗಾರಿಗಳು ಪೂರ್ಣಗೊಂಡಿದ್ದರೂ ಮನೆ ಮುಂದಿನ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ಅಧಿಕಾರಿಗಳು ತಕ್ಷಣ ಗಮನಹರಿಸಿ, ಹೊಸ ಬೋರ್‌ವೆಲ್‌ಗಳನ್ನು ಕೊರೆಸಲು ಹಾಗೂ ನೀರಿನ ಟ್ಯಾಂಕ್‌ಗಳ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಕೈದಾಳೆ ಕ್ಯಾಂಪ್‌ನಲ್ಲಿ ಸ್ಮಶಾನ ಭೂಮಿಯ ಕೊರತೆಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳ ಪರಿಶೀಲನೆ ಹಾಗೂ ಜಾಗ ಗುರುತಿಸಲು ತಹಸೀಲ್ದಾರ್ ಅಶ್ವಥ್ ಅವರಿಗೆ ಸೂಚನೆ ನೀಡಿದರು.
ನಗರ ಹಾಗೂ ಗ್ರಾಮೀಣ ಭಾಗದ ವಾರ್ಡ್‌ಗಳಲ್ಲಿ ಚರಂಡಿ ವ್ಯವಸ್ಥೆ ಮತ್ತು ಬೀದಿ ದೀಪಗಳ ಸಮಸ್ಯೆಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಖುದ್ದು ಕೆಲವು ವಾರ್ಡ್‌ಗಳಿಗೆ ಭೇಟಿ ನೀಡಿ ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಲಾಗಿದೆ ಎಂದರು.
ಲ್ಯಾಪ್‌ಟಾಪ್‌ನೊಂದಿಗೆ
ಅತ್ಯಂತ ಕಿರಿಯ ವಯಸ್ಸಿನ ಶಾಸಕ ಸಮರ್ಥ್ ಶಾಮನೂರು, ಸಭೆಗೆ ಲ್ಯಾಪ್‌ಟಾಪ್ ಜತೆಗೆ ಬಂದಿದ್ದು ಗಮನ ಸೆಳೆಯಿತು.
ಅಧಿಕಾರಿಗಳು ನೀಡಿದ ಮಾಹಿತಿಗಳನ್ನು ಲ್ಯಾಪ್‌ಟಾಪ್‌ನಲ್ಲಿ ದಾಖಲಿಸಿಕೊಂಡರು. ಸಾಂಪ್ರದಾಯಿಕವಾಗಿ ಸಭೆಯ ಅಜೆಂಡಾ ಪುಸ್ತಕ ಹಿಡಿದು, ಅಂಕಿ ಅಂಶಗಳ ಕಡೆಗೆ ಕಣ್ಣಾಡಿಸವ ಬದಲು ಸ್ವತಃ ಲ್ಯಾಪ್‌ಟಾಪ್‌ನಲ್ಲಿ ಎಂಟ್ರಿ ಮಾಡಿಕೊಂಡರು.
"
ಕಂದಾಯ ಇಲಾಖೆಯಿಂದ ಸಾರ್ವಜನಿಕರಿಗೆ ವಿಧವಾ ವೇತನ, ಆಹಾರ ಸಂರಕ್ಷಣೆ, ಕಂದಾಯ ಗ್ರಾಮ, ವಿಪತ್ತು ನಿರ್ವಹಣೆ, ಭೂ ಮಂಜೂರಾತಿ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ನಿವಾಸ ಪ್ರಮಾಣಪತ್ರ, ಮುಜರಾಯಿ ದೇವಸ್ಥಾನಗಳ ನಿರ್ವಹಣೆ, ಹೊಸ ಕಂದಾಯ ಗ್ರಾಮಗಳನ್ನು ಗುರುತಿಸುವುದು ಸೇರಿ 74 ಸೌಲಭ್ಯಗಳನ್ನು ವಿತರಿಸಲಾಗುತ್ತಿದೆ. ಭೂ ಸುರಕ್ಷಾ ಯೋಜನೆಯಡಿ 87 ಲಕ್ಷ ಪುಟಗಳನ್ನು ಡಿಜಿಟಲೀಕರಣ ಮಾಡಿ ದಾವಣಗೆರೆ ತಾಲೂಕು ರಾಜ್ಯದಲ್ಲೆ 3ನೇ ಸ್ಥಾನದಲ್ಲಿದೆ. ಇದುವರೆಗೆ 53000 ಪುಟಗಳ ಡಿಜಿಟಲ್ ಮಾದರಿ ದಾಖಲೆಗಳನ್ನು ಸಾರ್ವಜನಿಕರು ಪಡೆದಿದ್ದಾರೆ.