ಬೀದಿನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ ಶುರು

ದಾವಣಗೆರೆ ನಗರಪಾಲಿಕೆ ಆರಂಭಿಸಿದ, ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ಸ್ಥಳಕ್ಕೆ ಶಾಸಕ ಸಮರ್ಥ್ ಶಾಮನೂರು ಭೇಟಿ ನೀಡಿ ಪರಿಶೀಲಿಸಿದರು. ಪಾಲಿಕೆ ಆಯುಕ್ತ ಮಹಾಂತೇಶ್, ಜಗದೀಶ್, ಶ್ರೀನಿವಾಸ್ ಇತರರಿದ್ದರು.
ದಾವಣಗೆರೆ ನಗರಪಾಲಿಕೆ ಆರಂಭಿಸಿದ, ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ಸ್ಥಳಕ್ಕೆ ಶಾಸಕ ಸಮರ್ಥ್ ಶಾಮನೂರು ಭೇಟಿ ನೀಡಿ ಪರಿಶೀಲಿಸಿದರು. ಪಾಲಿಕೆ ಆಯುಕ್ತ ಮಹಾಂತೇಶ್, ಜಗದೀಶ್, ಶ್ರೀನಿವಾಸ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಲ್ಲಾ ವಾರ್ಡ್‌ಗಳಲ್ಲೂ ನಡೆಯಲಿದೆ ಕಾರ್ಯಾಚರಣೆ
  • ದಾಳಿಗೀಡಾದವರು ನಗರಪಾಲಿಕೆಗೆ ಮಾಹಿತಿ ನೀಡಲಿ
  • ದಾವಣಗೆರೆ ದಕ್ಷಿಣ ಶಾಸಕ ಸಮರ್ಥ್ ಶಾಮನೂರು ಮನವಿ
ದಾವಣಗೆರೆ: ನಗರಪಾಲಿಕೆ ವ್ಯಾಪ್ತಿಯ ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ನೀಡಲು ಮಹಾನಗರಪಾಲಿಕೆ ಮುಂದಾಗಿದ್ದು, ಗುರುವಾರ ಚಾಲನೆ ದೊರೆತಿದೆ.
ದೇವರಾಜ ಅರಸು ಬಡಾವಣೆಯಲ್ಲಿ ಕೈಗೊಂಡ ಕಾರ್ಯಾಚರಣೆ ಸ್ಥಳಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ ಅವರು ಭೇಟಿ ನೀಡಿ ಮಾಹಿತಿ ಪಡೆದರು.
ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ನೀಡಲು ಹಾಗೂ ರೇಬೀಸ್ ಸೋಂಕಿತ ಅಥವಾ ತುಂಬಾ ಆಕ್ರಮಣಕಾರಿ ನಾಯಿಗಳನ್ನು ಸೆರೆಹಿಡಿದು ಅಗತ್ಯ ಚಿಕಿತ್ಸೆ ಮತ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಮಹಾನಗರ ಪಾಲಿಕೆ ಸಿಬ್ಬಂದಿ ಜತೆಗೆ ಪಶು ವೈದ್ಯಕೀಯ ಇಲಾಖೆಯ ವೈದ್ಯರ ಸಹಕಾರ ಪಡೆಯಲಾಗುವುದು. ಪಾಲಿಕೆಯಿಂದ ಎಲ್ಲ ವಾರ್ಡ್‌ಗಳಲ್ಲೂ ಈ ಕಾರ್ಯಾಚರಣೆ ನಡೆಯಲಿದೆ ಎಂದು ಎಂದು ಪಾಲಿಕೆ ಆಯುಕ್ತ ಮಹಾಂತೇಶ್ ವಿವರಿಸಿದರು.
ಪ್ರಸಕ್ತ ವರ್ಷ 5500ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮತ್ತು ರೇಬೀಸ್ ನಿರೋಧಕ ಲಸಿಕೆ ನೀಡಲು ಉದ್ದೇಶಿಸಿದ್ದು, ನಿತ್ಯ 20 ನಾಯಿಗಳನ್ನು ಹಿಡಿದು ಹೊರ ವಲಯದ ಎಬಿಸಿ ಸೆಂಟರ್‌ನಲ್ಲಿ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿ, ರೇಬೀಸ್ ನಿರೋಧಕ ಲಸಿಕೆ ನೀಡಿ ಮೂರು ದಿನಗಳ ಆರೈಕೆ ನಂತರ, ನಾಯಿಯ ಮೂಲ ಸ್ಥಳದಲ್ಲಿ ಬಿಡಲಾಗುವುದು ಎಂದು ಮಾಹಿತಿ ನೀಡಿದರು.
ಅಸ್ರಾ ಸಂಸ್ಥೆಯು ಬೀದಿನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆಯ ಜವಾಬ್ದಾರಿ ವಹಿಸಿಕೊಂಡಿದೆ. ಇದರೊಂದಿಗೆ ರೇಬೀಸ್ ರೋಗದ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸಲು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಶಾಸಕ ಸಮರ್ಥ್ ಶಾಮನೂರು ಮಾತನಾಡಿ ಸಾರ್ವಜನಿಕರು ಬೀದಿ ನಾಯಿ ದಾಳಿಗೆ ಒಳಗಾದಲ್ಲಿ ನಿರ್ಲಕ್ಷ್ಯ ತೋರದೆ ಹತ್ತಿರದ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯಬೇಕು. ದಾಳಿ ಮಾಡಿದ ಬೀದಿ ನಾಯಿಯ ಬಗ್ಗೆ ಮಹಾನಗರ ಪಾಲಿಕೆ ಅಥವಾ ಪಶು ಇಲಾಖೆ ಗಮನಕ್ಕೆ ತರಬೇಕು ಎಂದು ಸೂಚಿಸಿದರು.
ನಗರದಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗಿದೆ. ಎಲ್ಲಾ ಬೀದಿ ನಾಯಿಗಳು ಹುಚ್ಚು ನಾಯಿಗಳಲ್ಲ. ಒಂದು ಹುಚ್ಚು ನಾಯಿ 50ಕಿ.ಮೀ. ಕ್ರಮಿಸಿ ಸರಾಸರಿ 100 ಪ್ರಾಣಿಗಳಿಗೆ ಕಚ್ಚಿ ರೋಗ ಹರಡಬಹುದು.
ಸೋಂಕಿತ ನಾಯಿ 10 ದಿನಕ್ಕೂ ಹೆಚ್ಚು ಆರೋಗ್ಯವಾಗಿ ಬದುಕಿದ್ದರೆ ಅದು ರೇಬೀಸ್ ಸೋಂಕಿತ ನಾಯಿ ಆಗಿರುವುದಿಲ್ಲ ಮತ್ತು ಅದರಿಂದ ರೇಬೀಸ್ ಹರಡುವ ಭಯವಿಲ್ಲ. ಪ್ರತಿ ವರ್ಷ ಲಸಿಕೆ ಪಡೆದ ಸಾಕುನಾಯಿಗಳಿಂದ ರೇಬೀಸ್ ಬರುವುದಿಲ್ಲ ಎಂದರು.
ಎಲ್ಲೆಂದರಲ್ಲಿ ಆಹಾರತ್ಯಾಜ್ಯ ಎಸೆಯುವ ಕಾರಣಕ್ಕೆ ಬೀದಿನಾಯಿಗಳ ಸಂಖ್ಯೆ ಹೆಚ್ಚಿದೆ. ಬೀದಿನಾಯಿಗಳ ಉಪಟಳ ನಿಯಂತ್ರಿಸಲು ಸಾರ್ವಜನಿಕರು ಉಳಿದ ಆಹಾರ ತ್ಯಾಜ್ಯವನ್ನು ಪಾಲಿಕೆಯ ವಾಹನಕ್ಕೆ ನೀಡಬೇಕು ಎಂದು ಮನವಿ ಮಾಡಿದರು.
ಆರೋಗ್ಯ ಶಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಗದೀಶ್, ಪರಿಸರ ಇಂಜಿನಿಯರ್ ಶ್ರೀನಿವಾಸ್ ಹಾಗೂ ಆರೋಗ್ಯ ನಿರೀಕ್ಷಕರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net