ಬಿಜೆಪಿ ಕಾಲದಲ್ಲಿ ನೀಟ್ ಅವ್ಯವಹಾರ corruption

ನ್ಯಾಮತಿಯಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದ ಉದ್ಘಾಟನೆಯಲ್ಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಶಾಸಕ ಡಿ.ಜಿ. ಶಾಂತನಗೌಡ, ಡಿಸಿ ಗಂಗಾಧರ ಸ್ವಾಮಿ, ಗಿತ್ತೆ ಮಾಧವ ವಿಠ್ಠಲರಾವ್ ಇತರರಿದ್ದರು. corruption
ನ್ಯಾಮತಿಯಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದ ಉದ್ಘಾಟನೆಯಲ್ಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್, ಶಾಸಕ ಡಿ.ಜಿ. ಶಾಂತನಗೌಡ, ಡಿಸಿ ಗಂಗಾಧರ ಸ್ವಾಮಿ, ಗಿತ್ತೆ ಮಾಧವ ವಿಠ್ಠಲರಾವ್ ಇತರರಿದ್ದರು. corruption
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರದ ವಿರುದ್ಧ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ವಾಗ್ದಾಳಿ
  • ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ
  • 40 ಕೋಟಿ ರೂ. ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ
ನ್ಯಾಮತಿ: ಕೇಂದ್ರದ ಬಿಜೆಪಿ ಆಡಳಿತಾವಧಿಯಲ್ಲಿ ದೇಶಾದ್ಯಂತ 70 ಬಾರಿ ನೀಟ್ ಅವ್ಯವಹಾರಗಳು ನಡೆದಿವೆ. ಗುಜರಾತ್ ಹಾಗೂ ರಾಜಸ್ಥಾನ ರಾಜ್ಯಗಳು ಈ ಪರೀಕ್ಷಾ ಮಾಫಿಯಾದಲ್ಲಿ ತೊಡಗಿವೆ ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. corruption
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ನೂತನ ಪ್ರಜಾಸೌಧ (ತಾಲೂಕು ಕಚೇರಿ), ಅಗ್ನಿಶಾಮಕ ಠಾಣೆ ಹಾಗೂ ಪದವಿ ಕಾಲೇಜು ಕಟ್ಟಡಗಳ ಉದ್ಘಾಟನೆ ಸೇರಿ 40 ಕೋಟಿ ರೂ.ಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಬಿಜೆಪಿ ಸರ್ಕಾರವು ರಾಜ್ಯದ ಒಂದೂವರೆ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಭವಿಷ್ಯದ ಜತೆ ಆಟವಾಡುತ್ತಿದ್ದು, ಅವರ ಬದುಕನ್ನು ಪ್ರಶ್ನಾರ್ಥಕ ಚಿಹ್ನೆಯನ್ನಾಗಿಸಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವ ಬಿಜೆಪಿಯವರಿಗೆ ತಾಕತ್ತಿದ್ದರೆ ಬಡವರಿಗೆ ನೀಡಲಾಗುತ್ತಿರುವ ಈ ಸೌಲಭ್ಯಗಳು ಬೇಡವೆಂದು ಹೇಳಲಿ ಎಂದು ಸವಾಲು ಹಾಕಿದರು.
ಸಂಸದರ ನಿಧಿಯಡಿ ಬರುವ 5 ಕೋಟಿ ರೂ. ಅನುದಾನವನ್ನು ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಿಗೆ ಸಮಾನವಾಗಿ ಹಂಚಿಕೆ ಮಾಡಬೇಕಾಗುತ್ತದೆ. ಅದರಂತೆ ನ್ಯಾಮತಿ ತಾಲೂಕಿಗೆ ಪ್ರಸಕ್ತ ಸಾಲಿನಲ್ಲಿ 65 ಲಕ್ಷ ರೂ. ಅನುದಾನ ನೀಡಲಾಗಿದ್ದು, ಇದರಲ್ಲಿ ಚಟ್ನಹಳ್ಳಿ ಪಂಚಾಯಿತಿಗೆ 15 ಲಕ್ಷ ರೂ. ಹಾಗೂ ಪಟ್ಟಣದ ಕೆಪಿಎಸ್ ಶಾಲೆಯ ಮುಂದುವರಿದ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ತಾಲೂಕಿನ ಗೋವಿನಕೋವಿ ಹಾಗೂ ಮುಸೇನಾಳ ಗ್ರಾಮಗಳಲ್ಲಿ ಬಿಎಸ್‌ಎನ್‌ಎಲ್ ನೂತನ ಟವರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಮುಂದಿನ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ನ್ಯಾಮತಿಯಲ್ಲೇ ನಡೆಸಿ, ಇಲ್ಲಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿದರು. ನ್ಯಾಮತಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮುಸ್ಸೇನಾಳ್ ಶಿವರಾಂನಾಯ್ಕ, ಹೊನ್ನಾಳಿ ತಾಲೂಕು ಅಧ್ಯಕ್ಷ ಗದ್ದಿಗೇಶ್ ಹುಣಸಘಟ್ಟ, ಮುಖಂಡರಾದ ಅಪ್ಪಿನಕಟ್ಟೆ ಉಮಾಪತಿ, ಡಾ. ಈಶ್ವರನಾಯ್ಕ, ನುಚ್ಚಿನ್ ವಾಗೀಶ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ತಾಪಂ ಇಒ ರಾಘವೇಂದ್ರ, ಪಪಂ ಮುಖ್ಯಾಧಿಕಾರಿ ಗಣೇಶರಾವ್ ಪಿ. ಇತರರಿದ್ದರು.

ಮೂರು ವರ್ಷಗಳ ಸಾಧನಾ ಸಮಾವೇಶ

8 ಕೋಟಿ 50 ಲಕ್ಷ ರೂ. ವೆಚ್ಚದ ನೂತನ ಪ್ರಜಾಸೌಧ ಕಟ್ಟಡ ಸೇರಿ ಅಗ್ನಿಶಾಮಕ ಠಾಣೆ, ಕೆರೆಗಳ ಅಭಿವೃದ್ಧಿ, ರಸ್ತೆ ಸಂಪರ್ಕ ಹಾಗೂ ಒಳ ಕ್ರೀಡಾಂಗಣ ಸೇರಿ ಸುಮಾರು 35 ಕೋಟಿಗೂ ಅಧಿಕ ವೆಚ್ಚದ ವಿವಿಧ ಪ್ರಮುಖ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಲಾಗಿದೆ. ಈ ಸಮಾರಂಭವು ಕಳೆದ ಮೂರು ವರ್ಷಗಳಲ್ಲಿ ನಾವು ಅವಳಿ ತಾಲೂಕುಗಳಿಗೆ ತಂದ ಅನುದಾನ ಮತ್ತು ಮಾಡಿರುವ ಅಭಿವೃದ್ಧಿ ಕೆಲಸಗಳ ಸಾಧನಾ ಸಮಾವೇಶ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಅವಳಿ ತಾಲೂಕಿನ ಒಟ್ಟು 220 ಗ್ರಾಮಗಳ ಪೈಕಿ ಈಗಾಗಲೇ 200 ಹಳ್ಳಿಗಳಿಗೆ ಅಗತ್ಯಕ್ಕೆ ಅನುಗುಣವಾಗಿ ಅನುದಾನ ನೀಡಿ ಮೂಲಸೌಕರ್ಯ ಕಲ್ಪಿಸಲಾಗಿದೆ. ಇನ್ನುಳಿದ 2 ವರ್ಷಗಳ ಅವಧಿಯಲ್ಲಿ ಬಾಕಿ ಇರುವ 20 ಹಳ್ಳಿಗಳ ಬೇಡಿಕೆಗಳನ್ನೂ ಈಡೇರಿಸಿ, ಇಡೀ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವುದೇ ನಮ್ಮ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net