

ಮಲೇಬೆನ್ನೂರು: ಹರಿಹರ ತಾಲೂಕಿನ ನಂದಿಗುಡಿಯ ನೊಳಂಬ ಲಿಂಗಾಯತ ಸಮಾಜದ ಶ್ರೀ ವೃಷಭಪುರಿ ಮಹಾಸಂಸ್ಥಾನ ಬೃಹನ್ಮಠದ ಪೀಠಾಧಿಪತಿ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಠದ ಆಡಳಿತದ ಸಂಪೂರ್ಣ ಲೆಕ್ಕವನ್ನು ಸಮಾಜದ ಭಕ್ತರಿಗೆ ಒಪ್ಪಿಸಿ, ಪೀಠತ್ಯಾಗ ಮಾಡಬೇಕು, ತೆರವಾಗಲಿರುವ ಸ್ಥಾನಕ್ಕೆ ನೂತನ ಪೀಠಾಧಿಪತಿಗಳನ್ನು ನೇಮಕ ಮಾಡಬೇಕು ಎಂದು ಮಂಗಳವಾರ ಕಡರನಾಯ್ಕನಹಳ್ಳಿಯಲ್ಲಿ ಕರೆದಿದ್ದ ಮಠದ ಭಕ್ತರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ
18 ವರ್ಷಗಳಿಂದ ಮಠದ ಪೀಠಾಧಿಪತಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಆಡಳಿತದ ಅವಧಿಯಲ್ಲಿ ಮಠದ ಅಭಿವೃದ್ಧಿ ಕುಂಠಿತಗೊಂಡಿದೆ. ಹಿಂದಿನ ಪೀಠಾಧಿಪತಿ ಶ್ರೀ ನಂದೀಶ್ವರ ಶಿವಾಚಾರ್ಯರ ಹೆಸರಿನಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಂದ ಹಣವನ್ನು ಕಾನೂನುಬಾಹಿರವಾಗಿ ಪಡೆದು, ಮಠ ಅಥವಾ ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಬಳಸದೆ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸಮುದಾಯದ ಮುಖಂಡರು ಸಭೆಯಲ್ಲಿ ಆರೋಪ ಮಾಡಿದರು.
ಮಠದ ಒಡೆತನದ ಸುಮಾರು 62 ಎಕರೆ ನೀರಾವರಿ ಜಮೀನನ್ನು ಯಾವುದೇ ಸಾರ್ವಜನಿಕ ಹರಾಜು ಪ್ರಕ್ರಿಯೆ ನಡೆಸದೆ, ಸ್ವಾಮೀಜಿ ತಮಗೆ ಬೇಕಾದವರಿಗೆ ಗುತ್ತಿಗೆ ನೀಡುತ್ತಿದ್ದಾರೆ. ಶ್ರೀ ನಂದೀಶ್ವರ ವಿದ್ಯಾಸಂಸ್ಥೆಯಡಿ ನಡೆಯುತ್ತಿರುವ ಬಿ.ಇಡಿ, ಐಟಿಐ ಕಾಲೇಜುಗಳು ಹಾಗೂ ಪ್ರೌಢಶಾಲೆಗಳ ಅಭಿವೃದ್ಧಿಗೆ ಗಮನಹರಿಸದ ಪರಿಣಾಮ ಶಿಕ್ಷಣದ ಗುಣಮಟ್ಟ ಕುಸಿದಿದೆ. ವಿದ್ಯಾರ್ಥಿಗಳ ಹಾಜರಾತಿ ಮತ್ತು ದಾಖಲಾತಿ ಕಡಿಮೆಯಾಗಿದ್ದು, ಶಾಲಾ- ಕಾಲೇಜುಗಳು ಮುಚ್ಚುವ ಹಂತ ತಲುಪಿವೆ. ಈಗಾಗಲೇ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯಗಳು ಬಂದ್ ಆಗಿವೆ ಎಂದು ದೂರಿದರು.
18 ವರ್ಷಗಳ ಮಠದ ಆಡಳಿತದ ಸಂಪೂರ್ಣ ಲೆಕ್ಕಪತ್ರಗಳನ್ನು ನೀಡುವಂತೆ ಸೆ.13ರಂದು ಭಕ್ತರ ತಂಡ ಮಠಕ್ಕೆ ತೆರಳಿ ಸ್ವಾಮೀಜಿಗೆ ಮನವಿ ಮಾಡಿತ್ತು. ಅ.31ರೊಳಗೆ ಮಠದಲ್ಲಿ ಎಲ್ಲ ಭಕ್ತರ ಸಮ್ಮುಖದಲ್ಲಿ ಸಂಪೂರ್ಣ ಲೆಕ್ಕಪತ್ರಗಳನ್ನು ನೀಡುವುದಾಗಿ ಹಾಗೂ ಅಂದೇ ಅಂತಿಮ ಸಭೆ ನಡೆಸಲಾಗುವುದು ಎಂದು ಸ್ವಾಮೀಜಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಲೆಕ್ಕಪತ್ರಗಳನ್ನು ನೀಡಿಲ್ಲ. ಸ್ವಾಮೀಜಿಯವರು ಮಠದಲ್ಲಿಯೂ ಭಕ್ತರಿಗೆ ಭೇಟಿಯಾಗುತ್ತಿಲ್ಲ ಎಂದು ಇಂದೂಧರ್ ಎನ್. ರುದ್ರಗೌಡ ಆರೋಪಿಸಿದರು.
ನಂದಿತಾವರೆ ತಿಮ್ಮನಗೌಡ, ನಂದಿಗುಡಿ ಕರಿಬಸಯ್ಯ, ಡಿ. ಷಣ್ಮುಖಯ್ಯ, ಶಿವಮೂರ್ತಯ್ಯ, ವಿಜಯ ಕುಮಾರ್, ವೀರನಗೌಡ, ಕೊಕ್ಕನೂರು ವಿವೇಕಾನಂದ, ಜಿ.ಬಿ. ಹಳ್ಳಿ ರಾಮನಗೌಡ ಸೇರಿದಂತೆ ನೊಳಂಬ ಸಮಾಜದ ಹಲವು ಮುಖಂಡರು ಹಾಗೂ ಭಕ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಮಠದ ಆಸ್ತಿಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳು ಎದುರಾಗಿವೆ. ಪ್ರೌಢಶಾಲೆಯ ಮೈದಾನ, ಗೋಶಾಲೆ, ಸಮುದಾಯ ಭವನ ಹಾಗೂ ವಿದ್ಯಾರ್ಥಿ ನಿಲಯದ ಕಟ್ಟಡಗಳಿಗೆ ಸಂಬಂಧಿಸಿದ ಜಮೀನುಗಳ ಕುರಿತು ಕಾನೂನು ವಿವಾದಗಳಿದ್ದು, ಸರ್ಕಾರವು 2022ರಿಂದ ಮಠಕ್ಕೆ ನೋಟಿಸ್ ನೀಡುತ್ತ ಬಂದಿದೆ. ಈ ವಿಚಾರಗಳನ್ನು ಸ್ವಾಮೀಜಿ ಭಕ್ತರ ಗಮನಕ್ಕೆ ತಾರದ ಪರಿಣಾಮ, ಸರ್ಕಾರ ಸಂಬಂಧಪಟ್ಟ ಆಸ್ತಿಗಳನ್ನು ವಶಕ್ಕೆ ಪಡೆದಿದೆ ಎಂದು ಮುಖಂಡರು ಆರೋಪಿಸಿದರು.
ಮಠದಲ್ಲಿ ದಾಸೋಹ ಕಾರ್ಯ ನಡೆಯುತ್ತಿಲ್ಲ. ವೇದ ಪಾಠಶಾಲೆಗಳು ಸ್ಥಗಿತಗೊಂಡಿವೆ. ವಿದ್ಯಾಸಂಸ್ಥೆಗಳ ಸ್ಥಿತಿ ಹದಗೆಟ್ಟಿದ್ದು, ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ವಿದ್ಯಾರ್ಥಿ ವಸತಿ ನಿಲಯಗಳು ಬಂದ್ ಆಗಿವೆ. ಬಿ.ಇಡಿ., ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪಾವತಿಸಿದ ಶುಲ್ಕಕ್ಕೆ ರಸೀದಿ ಬದಲಿಗೆ ಕೈಚೀಟಿ ಬರೆದುಕೊಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಈ ಎಲ್ಲ ಬೆಳವಣಿಗೆಗಳಿಂದ ಮಠದ ಗೌರವ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಆದ್ದರಿಂದ ಹಾಲಿ ಪೀಠಾಧಿಪತಿಗಳನ್ನು ಪೀಠದಿಂದ ಕೆಳಗಿಳಿಸಿ, ಹೊಸ ಸ್ವಾಮೀಜಿಯವರನ್ನು ಪೀಠಾಧಿಪತಿಗಳನ್ನಾಗಿ ನೇಮಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ನೊಳಂಬ ಕೇಂದ್ರ ಸಮಿತಿ ನಿರ್ದೇಶಕ ಕೆ.ಎಚ್. ನಾಗನಗೌಡ, ನಂದಿಗುಡಿ ಷಣ್ಮುಖಯ್ಯ ಹಾಗೂ ಇಂದೂಧರ್ ಎನ್ ರುದ್ರಗೌಡ ತಿಳಿಸಿದರು.
ಸ್ವಾಮೀಜಿ ಪೊಲೀಸ್ ಠಾಣೆಗೆ ನೀಡಿರುವ ದೂರಿ ನಲ್ಲಿ ಮಿಥ್ಯಾರೋಪ ಮಾಡಿದ್ದಾರೆ. ಭಕ್ತರು ಮದ್ಯಪಾನ ಮಾಡಿ ಮಠದ ಬಳಿ ತೆರಳಿ ಗಲಾಟೆ ಮಾಡಿಲ್ಲ ಹಾಗೂ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗಿಲ್ಲ. ಮಠದಲ್ಲಿ ಸಿಸಿ ಕ್ಯಾಮರಾಗಳಿದ್ದು, ಸ್ವಾಮೀಜಿಯವರು ಮಾಡಿರುವ ಆರೋಪಗಳು ನಿಜವಾಗಿದ್ದರೆ ಅದಕ್ಕೆ ಸಂಬಂಧಿಸಿದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಬಹಿರಂಗಪಡಿಸಲಿ ಎಂದು ಕೆ.ಎಚ್. ನಾಗನಗೌಡ ಸವಾಲು ಹಾಕಿದರು.
ಮಠದ 62 ಎಕರೆ ಭೂಮಿ ಬೇಕಾದವರಿಗೆ ಗುತ್ತಿಗೆ
ಶಿಕ್ಷಣ ಸಂಸ್ಥೆ ಕಡೆ ಗಮನ ನೀಡದ ಕಾರಣ ಗುಣಮಟ್ಟ ಕುಸಿತ
ದಾಖಲಾತಿ ಕುಸಿದಿದ್ದು ಶಾಲಾ-ಕಾಲೇಜುಗಳು ಮುಚ್ಚುವ ಸ್ಥಿತಿಗೆ
ಮಠದಲ್ಲಿ ದಾಸೋಹ, ವೇದ ಪಾಠಶಾಲೆಗಳು ಸ್ಥಗಿತ
ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ ಹಣ ದುರ್ಬಳಕೆ