ದಾವಣಗೆರೆಯಲ್ಲಿ ದಾವಣಗೆರೆ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘವನ್ನು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಿ.ಜಿ. ಅಜಯಕುಮಾರ್, ಎ.ನಾಗರಾಜ್, ಮಂಜುನಾಥ್, ವಾಸುದೇವ ಆರ್. ರಾಯ್ಕರ್, ಚಿಂದೋಡಿ ಶಂಭುಲಿಂಗಪ್ಪ , ಮೀನಾ ಆನಂದಕುಮಾರ್, ಟಿ. ಪರಮೇಶ್ ಇತರರಿದ್ದರು.
ದಾವಣಗೆರೆ: ಪ್ರತಿಭಾವಂತ ಕಲಾವಿದರೇ ಈ ದೇಶದ ಸಾಂಸ್ಕೃತಿಕ ನಾಯಕರು ಮತ್ತು ರಾಷ್ಟ್ರೀಯ ಸಂಪತ್ತು. ಇವರನ್ನು ಪ್ರೋತ್ಸಾಹಿಸುವ ಮೂಲಕ ಸಂಗೀತ ಇತರೆ ಕಲೆಗಳನ್ನು ಉಳಿಸುವ ಅಗತ್ಯವಿದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಇಲ್ಲಿನ ಶಿವಯೋಗಿ ಮಂದಿರ ಆವರಣದಲ್ಲಿ ಹಮ್ಮಿಕೊಂಡಿದ್ದ, ದಾವಣಗೆರೆ ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘದ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಗೀತಕ್ಕೆ ಸ್ವರ ಮತ್ತು ತಾಳ ಎರಡೂ ಬೇಕು. ಸಂಗೀತಕ್ಕೆ ಜಾತಿ-ಧರ್ಮ ಎಂಬುದಿಲ್ಲ. ಸಂಗೀತದಿಂದ ಸೌಹಾರ್ದ, ಭಾವೈಕ್ಯ ಸಮಾಜವನ್ನು ಕಟ್ಟಲು ಸಾಧ್ಯವಾಗಲಿದೆ ಎಂದು ಹೇಳಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಜಗತ್ತಿನಲ್ಲೇ ಅತಿ ಎತ್ತರದಾಗಿದೆ. ಇದಲ್ಲದೆ ತಾಜ್‌ಮಹಲ್‌ನಂತಹ ಕಟ್ಟಡಗಳನ್ನು ಮತ್ತೆ ಕಟ್ಟಬಹುದು. ಆದರೆ ಸಾವಿರಾರು ಹಾಡು ಹಾಡಿದ ಖ್ಯಾತ ಗಾಯಕ ಡಾ. ಬಾಲಸುಬ್ರಮಣ್ಯಂ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರಂತಹ ಕಲಾವಿದರನ್ನು ಮರುಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದರು.
ಪಂಚಾಕ್ಷರ ಗವಾಯಿಗಳು, ಪುಟ್ಟರಾಜ ಗವಾಯಿಗಳು ಸೇರಿದಂತೆ ನಾಡಿನಲ್ಲಿ ಮಹಾನ್ ಕಲಾವಿದರು ಆಗಿ ಹೋಗಿದ್ದಾರೆ. ಕಲಾವಿದರು ಉಳಿದರೆ ಕಲೆಗಳೂ ಬದುಕಲಿವೆ. ಹೀಗಾಗಿ ದಾನಿಗಳು, ಜನರು ಕಲಾವಿದರಿಗೆ ಉದಾರ ಸಹಕಾರ ನೀಡಬೇಕಿದೆ ಎಂದು ಹೇಳಿದರು.
ಪಾಲಿಕೆ ಮಾಜಿ ಸದಸ್ಯ ಎ. ನಾಗರಾಜ್, ಆರ್ಕೆಸ್ಟ್ರಾದಿಂದಲೇ ಜೀವನ ಸಾಗಿಸುವ ವಾದ್ಯ ಕಲಾವಿದರಿಗೆ ರಾಜ್ಯೋತ್ಸವ ಮತ್ತು ಗಣೇಶ ಹಬ್ಬದ ಹೊರತಾಗಿ ಕಾರ್ಯಕ್ರಮಗಳು ಸಿಗುವುದಿಲ್ಲ. ಮೊದಲೆಲ್ಲ ಅಶಕ್ತ ಕಲಾವಿದರಿಗಾಗಿ ಸಹಾಯಾರ್ಥ ಪ್ರದರ್ಶನ ನಡೆಸಲಾಗಿದೆ. ಆಶ್ರಯ ಮನೆ ಮತ್ತಿತರೆ ಸೌಲಭ್ಯಕ್ಕಾಗಿ ಹೋರಾಟ ಮಾಡುವ ದಿನಗಳಿದ್ದವು ಎಂದು ಸ್ಮರಿಸಿದರು.
ನಗರಪಾಲಿಕೆ ಆವರಣದ ಪುಟ್ಟಣ ಕಣಗಾಲ್ ವಾದ್ಯಮಂಟಪದಲ್ಲಿ ವಾದ್ಯಗೋಷ್ಠಿ ಕಲಾವಿದರ ಕಾರ್ಯಕ್ರಮ ನಡೆಸಲು 2001ರ ಅವಧಿಯಲ್ಲಿ ಪಾಲಿಕೆಯಿಂದಲೇ ತೀರ್ಮಾನಿಸಲಾಗಿತ್ತು. ಕಾರಣಾಂತರದಿಂದ ಇದು ಸ್ಥಗಿತವಾಗಿದೆ. ಸಂಘದವರು ಒಗ್ಗಟ್ಟಾಗಿ ಬಂದಲ್ಲಿ ವಾರ ಅಥವಾ 15 ದಿನಕ್ಕೊಮ್ಮೆ ರಸಮಂಜರಿ ಕಾರ್ಯಕ್ರಮ ನೀಡಿ ಗೌರವಧನ ಪಡೆಯಲು ಅವಕಾಶವಾಗಲಿದೆ. ಇದನ್ನು ಬಳಸಿಕೊಳ್ಳಬೇಕು ಎಂದರು.
ಪಾಲಿಕೆ ಮಾಜಿ ಸದಸ್ಯ ಬಿ.ಜಿ. ಅಜಯಕುಮಾರ್ ಮಾತನಾಡಿ ವಾದ್ಯ, ಸಂಗೀತ ಕಲಾವಿದರು ಯಾವುದೋ ವೈಯಕ್ತಿಕ ಲಾಭಕ್ಕಾಗಿ ಅಥವಾ ಮಜಾ ಮಾಡಲಿಕ್ಕೆ ಈ ಸಂಘವನ್ನು ಕಟ್ಟಿಲ್ಲ. ಎಲ್ಲರಿಗೂ ಮನರಂಜನೆ ನೀಡುವುದು ಅವರ ಉದ್ದೇಶವಾಗಿದೆ. ಅವರು ಇಂದಿಗೂ ಚಿಕ್ಕಪುಟ್ಟ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರದು ಐಷಾರಾಮಿ ಜೀವನವಲ್ಲ. ದಾನಿಗಳು, ಜನರು ಅವರ ಸಹಾಯಕ್ಕೆ ನಿಲ್ಲಬೇಕಿದೆ ಎಂದು ಆಶಿಸಿದರು.
ಚಿನ್ನಬೆಳ್ಳಿ ವರ್ತಕ ವಾಸುದೇವ ಆರ್. ರಾಯ್ಕರ್ ಮಾತನಾಡಿ ಸಿನಿಮಾ ಅಥವಾ ಕಿರುತೆರೆ ಕಲಾವಿದರನ್ನೇ ಇಂದಿನವರು ಅನುಕರಿಸುತ್ತಾರೆ. ಆದರೆ ನಿಜವಾಸ ಸಾಂಸ್ಕೃತಿಕ ರೂವಾರಿಗಳಾದ ಸ್ಥಳೀಯ ಕಲಾವಿದರ ಬಗ್ಗೆ ಉದಾಸೀನ ಸಲ್ಲದು. ನಮಗೆ ಶಾಂತಿ-ನೆಮ್ಮದಿ ಬೇಕಿದ್ದಲ್ಲಿ ಈ ಕಲಾವಿದರಿಗೆ ಉತ್ತೇಜಿಸಬೇಕು ಎಂದರು.
ಜೆಎಚ್ ಪಟೇಲ್ ಕಾಲೇಜಿನ ಕಾರ್ಯದರ್ಶಿ ಮುಸ್ತಾಫ ಮಾತನಾಡಿ ರಾಜ್ಯೋತ್ಸವ ಕೇವಲ ನವೆಂಬರ್‌ಗೆ ಸೀಮಿತ ಆಗಬಾರದು. ವರ್ಷವಿಡೀ ಆಚರಿಸಿದರೆ ವಾದ್ಯ ಕಲಾವಿದರಿಗೂ ಅವಕಾಶ ಸಿಗಲಿವೆ ಎಂದು ಹೇಳಿದರು.
ಭದ್ರಾವತಿಯ ಸಂಘದ ಮುಖಂಡ ಮಂಜುನಾಥ್ ಮಾತನಾಡಿ ಶಂಕರ್ ನೇತೃತ್ವದ ರಾಜ್ಯ ಸಂಘ ರಾಜ್ಯದ ಪ್ರತಿ ಕಲಾವಿದರಿಂದ 2500 ರೂ. ವಂತಿಕೆ ಸಂಗ್ರಹಿಸಿದರೂ ಯಾವುದೇ ಕಾರ್ಯಕ್ರಮ ಮಾಡುತ್ತಿಲ್ಲ. ಕಲಾವಿದರಿಗೆ ನೆರವಾಗುತ್ತಿಲ್ಲ ಎಂದು ದೂರಿದರು.
ಪ್ರಾಸ್ತಾವಿಕ ಮಾತನಾಡಿದ ಗುರು ವಾದ್ಯ ವೃಂದದ ಚಿಂದೋಡಿ ಶಂಭುಲಿಂಗಪ್ಪ ಮಾತನಾಡಿ ಕರೋಕೆ ಬಂದ ನಂತರ ಹಾಡುಗಾರರು, ವಾದ್ಯಗಾರಿಕೆ ಕಲಾವಿದರಿಗೂ ಬೆಲೆಯೇ ಇಲ್ಲವಾಗಿದೆ. ಹಾರ್ಮೋನಿಯಂ ಅನ್ನು ಇಂದಿಗೂ ಕನ್ನಡ ಸಂಸ್ಕೃತಿ ಇಲಾಖೆಯ ನಿಯಮದ ಅನುಸಾರವಾಗಿ ವಾದ್ಯ ಎಂದು ಪರಿಗಣಿಸುತ್ತಿಲ್ಲ. ಇದರಿಂದ ವಾದ್ಯ ಕಲಾವಿದರಿಗೆ ನೆರವು ಸಿಗುತ್ತಿಲ್ಲ. ಇದರ ಜಾಗವನ್ನು ಕೀಬೋರ್ಡ್ ಆವರಿಸಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ಟಿ. ಪರಮೇಶ್, ಭಾರತಿ ಆರ್ಕೆಸ್ಟ್ರಾ ಮುಖ್ಯಸ್ಥೆ ಮೀನಾ ಆನಂದಕುಮಾರ್, ನ್ಯೂ ಟಾಪ್ ಮೆಲೋಡಿ ಆರ್ಕೆಸ್ಟ್ರಾದ ಆರ್.ಆರ್. ತಿಪ್ಪೇಸ್ವಾಮಿ, ಗಾಯಕ ಎನ್. ಗಣೇಶ್, ಎನ್. ಈಶ್ವರ್, ಎ.ಎಂ.ಸಚಿನ್, ಎಚ್.ಧರ್ಮರಾಜ್ ಇತರರಿದ್ದರು.
ಜಿಲ್ಲಾ ಸಾಂಸ್ಕೃತಿಕ ಕಲಾವಿದರ ಸಂಘಕ್ಕೆ ಸಿಎ ನಿವೇಶನಕ್ಕಾಗಿ ದೂಡಾಕ್ಕೆ ಅರ್ಜಿ ಸಲ್ಲಿಸಿದಲ್ಲಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಮೂಲಕವಾಗಿ ಅತಿ ಕಡಿಮೆ ಶುಲ್ಕದಲ್ಲಿ ಕೊಡಿಸಲು ಪ್ರಯತ್ನಿಸಲಾಗುವುದು.