ಮಕ್ಕಳ ಭವಿಷ್ಯ ರೂಪಿಸುವ ಹೊಣೆ ತಾಯಂದಿರದು

ದಾವಣಗೆರೆ ಡಿಸಿಎಂ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆ ನಿಮಿತ್ತ ಜವಾಹರ ಲಾಲ್ ನೆಹರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ದಾವಣಗೆರೆ ಡಿಸಿಎಂ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆ ನಿಮಿತ್ತ ಜವಾಹರ ಲಾಲ್ ನೆಹರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಡಿಆರ್‌ಆರ್ ಶಾಲೆಗಳ ಆಡಳಿತಾಧಿಕಾರಿ ಬಸವರಾಜಪ್ಪ ಅಭಿಪ್ರಾಯ
  • ಡಿಸಿಎಂ ಶಾಲೆಯಲ್ಲಿ ಮಕ್ಕಳ ದಿನಾಚರಣೆ
  • ಶಾಲೆ, ಮಕ್ಕಳು, ಶಿಕ್ಷಕ, ಪೋಷಕ ಇವರು ಶಿಕ್ಷಣದ ಆಧಾರ ಸ್ತಂಭ
ದಾವಣಗೆರೆ: ಮಕ್ಕಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರಿಗಿಂತ ಹೆಚ್ಚಾಗಿ ತಾಯಂದಿರ ಮೇಲಿದೆ ಎಂದು ಡಿಆರ್‌ಆರ್ ಶಾಲೆಗಳ ಆಡಳಿತಾಧಿಕಾರಿ ಬಸವರಾಜಪ್ಪ ಎಂ. ಅಭಿಪ್ರಾಯಪಟ್ಟರು.
ನಗರದ ಡಿಸಿಎಂ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆ ಹಾಗೂ ಪೋಷಕ-ಶಿಕ್ಷಕರ ಮಹಾ ಸಭೆಯಲ್ಲಿ ಮಾತನಾಡಿದರು.
ಮಕ್ಕಳು ಉನ್ನತ ಸ್ಥಾನಕ್ಕೇರಬೇಕೆಂಬ ಬಯಕೆ ಎಲ್ಲ ಪಾಲಕರಲ್ಲೂ ಇರುತ್ತದೆ. ಅದಕ್ಕೆ ಪೂರಕವಾಗಿ ಮನೆಯಲ್ಲಿ ಮಕ್ಕಳ ಅಭ್ಯಾಸಕ್ಕೆ ತಾಯಂದಿರು ನೆರವಾಗಬೇಕು ಎಂದು ಸಲಹೆ ನೀಡಿದರು.
ಮುಖ್ಯ ಶಿಕ್ಷಕ ಭೋಜರಾಜ್ ಯಾದವ್ ಮಾತನಾಡಿ, ಶಾಲೆ, ಮಕ್ಕಳು, ಶಿಕ್ಷಕ, ಪೋಷಕ ಇವರು ಶಿಕ್ಷಣದ ಆಧಾರ ಸ್ತಂಭವಾಗಿದ್ದಾರೆ.
ಶಾಲೆಗೆ ಕಳಿಸಿದ ಮಾತ್ರಕ್ಕೆ ಪಾಲಕರ ಜವಾಬ್ದಾರಿ ಮುಗಿಯುವುದಿಲ್ಲ. ಮನೆಯಲ್ಲಿ ಅಭ್ಯಾಸದ ರೂಢಿ ಮಾಡಿಸಬೇಕು. ಮಕ್ಕಳಿಗೆ ಮೊದಲು ಸಂಸ್ಕಾರ ನೀಡಬೇಕು, ನಂತರ ಶಿಕ್ಷಣ ಕೊಡಬೇಕು ಎಂದು ಸಲಹೆ ನೀಡಿದರು.
ಶಿಕ್ಷಣ ಕ್ಷೇತ್ರದ ಸಬಲೀಕರಣಕ್ಕಾಗಿ ಸರ್ಕಾರ ಮತ್ತು ಇಲಾಖೆ ಎಲ್ಲ ರೀತಿಯ ನೆರವು ನೀಡುತ್ತಿವೆ. ಮಕ್ಕಳು ಟಿವಿ, ಮೊಬೈಲ್ ಕಡೆ ಮನಸ್ಸು ಕೊಡದೆ ವಿದ್ಯೆಗೆ ಹೆಚ್ಚು ಒತ್ತುಕೊಟ್ಟರೆ ಜೀವನ ಸಾರ್ಥಕವಾಗಲಿದೆ. ಜತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲೂ ಅವಿರತ ಸಾಧನೆ ಮಾಡುವ ಮೂಲಕ ಉತ್ತಮ ಪ್ರತಿಭಾನ್ವಿತರಾಗಿ ಬೆಳೆಯಬೇಕು ಎಂದು ಮಕ್ಕಳಲ್ಲಿ ಹುರುಪು ತುಂಬಿದರು.
ಪ್ರೌಢಶಾಲೆ ಮುಖ್ಯ ಶಿಕ್ಷಕ ಹಾಲೇಶ್ ಎಚ್.ಎಸ್. ಮಾತನಾಡಿ, ಸಾಧನೆ ಮಾಡಲು ಶ್ರಮ ಬೇಕು. ಮಕ್ಕಳಿಗೆ ಪಾಲಕರು ಈ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.
ವಿದ್ಯಾರ್ಥಿನಿಯರಾದ ಲಾವಣ್ಯ, ಭಾವನಾ ಹಾಗೂ ಶ್ವೇತಾ ನಿಬಗೂರು ಅವರು ಮಕ್ಕಳ ದಿನಾಚರಣೆ ಕುರಿತು ಮಾತನಾಡಿದರು. ಹಿಂದಿನ ವರ್ಷ ವಿವಿಧ ತರಗತಿಗಳಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪಾಲಕರು ಅನಿಸಿಕೆ ಹಂಚಿಕೊಂಡರು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಮುಖ್ಯ ಶಿಕ್ಷಕರಾದ ಬಸವನಗೌಡ ಎ.ಎಂ. ರಾಧಾ ಕೆ.ಎಲ್. ಉಪಸ್ಥಿತರಿದ್ದರು.
ಅನುಷಾ ಮತ್ತು ಶ್ರಾವಣಿ ಪ್ರಾರ್ಥಿಸಿದರು. ಸಿಂಧು ವಿ. ಸ್ವಾಗತಿಸಿದರು. ಸಂಜನಾ ಪಿ. ವಂದಿಸಿದರು. ಖುಷಿ ಎನ್. ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net