ಹರಿಹರ:ನಗರದ ಎಂಕೆಇಟಿ ಲಕ್ಷ್ಮಣರಾವ್ ಕಿರ್ಲೋಸ್ಕರ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಎರಡು ದಿನ ನಡೆದ ವಸ್ತು ಪ್ರದರ್ಶನ ಶನಿವಾರ ಮುಕ್ತಾಯಗೊಂಡಿತು.
ವಿಜ್ಞಾನ ಮತ್ತು ಕಲಾ ವಿಸ್ಮಯ ಎನ್ನುವ ಘೋಷ ವಾಕ್ಯದೊಂದಿಗೆ ಶುಕ್ರವಾರ ಮತ್ತು ಶನಿವಾರ ಹಮ್ಮಿಕೊಂಡಿದ್ದ ವಸ್ತು ಪ್ರದರ್ಶನಕ್ಕೆ ಸಂಸ್ಥೆಯ ಟ್ರಸ್ಟಿ ರಘುನಾಥ್ ಚಾಲನೆ ನೀಡಿದ್ದರು.
ವಿಷಯವಾರು ವಿಭಾಗದಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮಾಡಿದ್ದ ಮಾದರಿಗಳು ನೋಡುಗರನ್ನು ನಿಬ್ಬೆರಗಾಗಿಸಿದ್ದು ಸುಳ್ಳಲ್ಲ.100ಕ್ಕೂ ಹೆಚ್ಚು ಮಾಡೆಲ್‌ಗಳೊಂದಿಗೆ ವಿದ್ಯಾರ್ಥಿಗಳೇ ಬಿಡಿಸಿದ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿತ್ತು.
ವಿಜ್ಞಾನ ವಿಭಾಗದ ರೋಬಾಟಿಕ್, ಪ್ಲೈ ಓವರ್ ಸೇತುವೆಯ ಮೇಲೆ ಮಿತಿಗಿಂತ ಹೆಚ್ಚು ತೂಕದ ಲಾರಿಗಳನ್ನು ಪತ್ತೆ ಹಚ್ಚುವ ತಂತ್ರಾಂಶದ ಮಾದರಿ, ಬೈಜಿಕ ವಿದಳನ ಕ್ರಿಯೆ, ವಾಯುಮಾಲಿನ್ಯ ತಡೆಗಟ್ಟುವ ಮಾದರಿ, ದರೋಡೆ ಮಾಡಲು ಬಂದಾಗ ಸೈರನ್ ಕೂಗುವ ಮಾದರಿ, ಡಿಎನ್‌ಎ ಮಾದರಿ, ಮಾನವನ ಜೀರ್ಣಾಂಗ ವ್ಯೆಹ ಮಾದರಿಗಳು ಸೇರಿ ಹಲವು ಮಾದರಿಗಳಿದ್ದವು.
ಗಣಿತ ಲೋಕ, ಸಮಾಜ ವಿಜ್ಞಾನ, ಕನ್ನಡ, ಹಿಂದಿ, ಸಂಸ್ಕೃತ, ಇಂಗ್ಲಿಷ್ ವಿಷಯವನ್ನು ಒಳಗೊಂಡಂತೆ ಚಿತ್ರಕಲಾ ವಿಭಾಗದಲ್ಲಿ ಗೋಲ್‌ಗುಂಬಜ್ ಮಾದರಿ, ಸೋಲಾರ್ ಪ್ರಾಜೆಕ್ಟ್, ರಾಮ ಮಂದಿರ ಕಲಾ ಕೃತಿ, ಬಿಗ್ ಪಿಕ್ಚರ್ ಶೀರ್ಷಿಕೆ ಅಡಿಯಲ್ಲಿ ಆನೆಯ ಐರಾವತ ಅತ್ಯಂತ ಆಕರ್ಷಣೀಯವಾಗಿತ್ತು.
ವಿದ್ಯಾರ್ಥಿಗಳು ತಾವು ಮಾಡಿದ ಮಾದರಿಯ ಬಗ್ಗೆ ಮತ್ತು ಅದರ ಚಟುವಟಿಕೆ ಹಾಗೂ ಉಪಯೋಗದ ಬಗ್ಗೆ ತಮ್ಮದೇ ರೂಪದಲ್ಲಿ ವಿಶ್ಲೇಷಣೆಯೊಂದಿಗೆ ಮಾಹಿತಿ ನೀಡಿದರು.
ಪಾಲಕರು ಕುಟುಂಬ ಸಮೇತರಾಗಿ ಆಗಮಿಸಿ ತಮ್ಮ ಮಕ್ಕಳು ಮಾಡಿದ್ದ ಮಾದರಿಗಳನ್ನು ನೋಡಿ ಖುಷಿ ಪಟ್ಟರೆ ಇತರರು ಮಾಡಿದ ಮಾದರಿಗಳನ್ನು ನೋಡಿ ಅವುಗಳ ಮಾಹಿತಿ ಪಡೆದುಕೊಂಡರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ವಿದ್ಯಾರ್ಥಿಗಳು ಎಲ್ಲ ವಿಷಯಗಳ ಮೇಲೆ ಮಾಡಿದ ಮಾದರಿಗಳು ಇತರೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವಂತಿತ್ತು.