ದಾವಣಗೆರೆ ರೌಂಡ್ ಟೇಬಲ್ ಹಾಗೂ ದಾವಣಗೆರೆ ಲೇಡಿಸ್ ಸರ್ಕಲ್ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ನೈಟ್ಸ್ ಇನ್ ಖಾಕಿ’ ಕಾರ್ಯಕ್ರಮವನ್ನು ಜಿಲ್ಲಾ ರಕ್ಷಣಾಧಿಕಾರಿ ಎಚ್.ಟಿ. ಶೇಖರ್ ಉದ್ಘಾಟಿಸಿದರು. ಸಚಿನ್ ತಲ್ರೆಜಾ, ಡಾ. ಪೂಜಾ ಮಹಾಜನ್, ಅಭಿಷೇಕ್ ಶೇಟ್, ಮಾಧುರಿ ಸುಹಾಸ್, ಡಾ.ಎನ್.ಟಿ.ಚೈತ್ರಾ ಇತರರಿದ್ದರು.
ದಾವಣಗೆರೆ: ಪೊಲೀಸ್ ವ್ಯವಸ್ಥೆಯು ಸಾರ್ವಜನಿಕರ ನಿಯಂತ್ರಣ ಹಾಗೂ ಅವರ ಮೇಲಿನ ನಿಗಾವಣೆಗೆ ಸೀಮಿತವಾಗಿಲ್ಲ. ಕಾನೂನು ಸುವ್ಯವಸ್ಥೆ ಪಾಲನೆ ಜತೆಗೆ ಸಮಾಜಮುಖಿ ಕಾರ್ಯಗಳತ್ತ ಆದ್ಯತೆ ನೀಡಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಎಚ್.ಟಿ. ಶೇಖರ್ ಹೇಳಿದರು.
ದಾವಣಗೆರೆ ರೌಂಡ್ ಟೇಬಲ್ ಹಾಗೂ ದಾವಣಗೆರೆ ಲೇಡಿಸ್ ಸರ್ಕಲ್ ಸಂಸ್ಥೆಗಳ ಸಹಯೋಗದಲ್ಲಿ ಇಲ್ಲಿನ ಎಸ್.ಎಸ್. ಮಾಲ್‌ನಲ್ಲಿ ಹಮ್ಮಿಕೊಂಡಿದ್ದ ‘ನೈಟ್ಸ್ ಇನ್ ಖಾಕಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1861ರಲ್ಲಿ ಬ್ರಿಟಿಷರ ಕಾಲದಲ್ಲಿ ಪೊಲೀಸ್ ಕಾಯ್ದೆ ಜಾರಿಗೆ ಬಂದಿದ್ದು ಆಗ ಪೊಲೀಸ್ ಎಂದರೆ ಭಯವಿತ್ತು. ಅಂದು ಮತ್ತು ಇಂದಿನ ವ್ಯವಸ್ಥೆಯಲ್ಲಿ ಬದಲಾವಣೆ ಆಗಿದೆ. ಪೊಲೀಸರ ಬಗೆಗಿನ ನಕಾರಾತ್ಮಕತೆ ಈಗ ಕಡಿಮೆಯಾಗಿದೆ ಎಂದರು.
ಮಕ್ಕಳಲ್ಲಿ ಪೊಲೀಸರ ಕಾರ್ಯ ನಿರ್ವಹಣೆ, ಬಳಸುವ ಶಸ್ತ್ರಗಳು, ದಿನವಹಿ ಚಟುವಟಿಕೆಗಳ ಕುರಿತು ಮಾಹಿತಿ ನೀಡಲು ಠಾಣೆಗಳಲ್ಲಿ ತೆರೆದ ಮನೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದರೊಂದಿಗೆ ವಯೋವೃದ್ಧರ ನೆರವಿನ ಆಸರೆ, ಮನೆ ಮನೆಗೆ ಪೊಲೀಸ್ ಮೊದಲಾದ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರ ಜತೆ ಸಂಪರ್ಕ ಸಾಧಿಸಲಾಗಿದೆ ಎಂದರು.
ಪೊಲೀಸರು ಒತ್ತಡದ ನಡುವೆಯೂ ದಿನವಿಡೀ ಕೆಲಸ ಮಾಡುತ್ತಿದ್ದಾರೆ. ಅವರ ಕುಟುಂಬದ ಸದಸ್ಯರಿಗೆ ಸಮಯ ನೀಡಲಾಗದೆ, ಅವರೊಂದಿಗೆ ಸುಂದರ ಕ್ಷಣಗಳನ್ನು ಕಳೆಯಲಾಗದೆ ಜನರ ರಕ್ಷಣೆ, ಹಬ್ಬಗಳಲ್ಲಿ ಬಂದೋಬಸ್ತ್ ಕಾರ್ಯದಲ್ಲಿ ತೊಡಗುತ್ತಿದ್ದಾರೆ. ಒಳ್ಳೆಯ ಕೆಲಸಗಳಿಂದ ಗುರುತಿಸಲ್ಪಟ್ಟ ಪೊಲೀಸ್ ಸಿಬ್ಬಂದಿ, ಇಲಾಖೆಗೆ ಕೆಟ್ಟ ಹೆಸರು ತರುವ ಕೆಲವೇ ಪೊಲೀಸರಿಗೂ ಮಾದರಿ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ದಾವಣಗೆರೆ ಲೇಡಿಸ್ ಸರ್ಕಲ್ ಸಂಸ್ಥೆಯ ಅಧ್ಯಕ್ಷೆ ಡಾ.ಎನ್.ಟಿ.ಚೈತ್ರಾ ಮಾತನಾಡಿ ದಾವಣಗೆರೆ ಲೇಡಿಸ್ ಸರ್ಕಲ್ ಸಂಸ್ಥೆಯು ಮಹಿಳಾ ಸಬಲೀಕರಣ, ಸಮುದಾಯ ಆರೋಗ್ಯ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ದೇಶದಲ್ಲಿ ರಾಷ್ಟ್ರೀಯ ಸಂಸ್ಥೆಯಡಿ 10 ಸಾವಿರ ತರಗತಿ ಕೊಠಡಿಗಳನ್ನು ನಿರ್ಮಿಸಿಕೊಡಲಾಗಿದೆ. ಹೆಣ್ಣುಮಕ್ಕಳ ಶಾಲೆಗಳಲ್ಲಿ ಶೌಚಗೃಹಗಳನ್ನು ಕಟ್ಟಿಸಿಕೊಡಲಾಗುತ್ತಿದೆ ಎಂದು ವಿವರಿಸಿದರು.
ಚೇರ್ಮನ್ ಜೆ.ಜಿ.ಆದಿತ್ಯ ಮಾತನಾಡಿ ದಾವಣಗೆರೆ ರೌಂಡ್ ಟೇಬಲ್ ಸಂಸ್ಥೆಯಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ವಂತಿಗೆಗಳನ್ನು ನೀಡಲಾಗುತ್ತಿದೆ. ವಿಕಲಾಂಗ ಮಕ್ಕಳಿಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.
ಲೇಡಿಸ್ ಸರ್ಕಲ್ ವಲಯ 10ರ ಅಧ್ಯಕ್ಷೆ ಡಾ. ಪೂಜಾ ಮಹಾಜನ್, ಪೊಲೀಸರು ಧರಿಸುವ ಸಮವಸ್ತ್ರ ಸಾಮಾಜಿಕ ಹೊಣೆಗಾರಿಕೆ ಮತ್ತು ಧೈರ್ಯದ ಸಂಕೇತವಾಗಿದೆ. ಆಂತರಿಕ ಭದ್ರತೆಗೆ ಒತ್ತು ನೀಡುತ್ತಿರುವ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಿಎಆರ್ ಡಿವೈಎಸ್ಪಿ ಪಿ.ಬಿ. ಪ್ರಕಾಶ್, ಸಂಸ್ಥೆಯ ಸಚಿನ್ ತಲ್ರೆಜಾ, ಅಭಿಷೇಕ್ ಶೇಟ್, ಮಾಧುರಿ ಸುಹಾಸ್ ಇದ್ದರು. ಇದೇ ವೇಳೆ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ, ಗ್ರೈಂಡಿಂಗ್ ಯಂತ್ರ ಜತೆಗೆ ಮಕ್ಕಳಿಗೆ ಶಾಲಾ ಶುಲ್ಕ ಹಾಗೂ ಸಮವಸ್ತ್ರದ ಚೆಕ್ ವಿತರಿಸಲಾಯಿತು.