ಜನರಿಗಾಗಿ ಶಾಸಕರ ಜೋಳಿಗೆ Campaign

ಜಗಳೂರು ಪಟ್ಟಣದ ವಾಲ್ಮೀಕಿ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೊಂದವರಿಗೆ ನೆರವು ವಿನೂತನ  ಕಾರ್ಯಕ್ರಮವನ್ನು  ಶಾಸಕ ಬಿ. ದೇವೇಂದ್ರಪ್ಪ ಉದ್ಘಾಟಿಸಿದರು. ಜಿ. ಸುಭಾಷ್ ಚಂದ್ರ ಬೋಸ್, ಕೆ.ಪಿ. ಪಾಲಯ್ಯ, ಸಿ. ತಿಪ್ಪೇಸ್ವಾಮಿ, ನೇರ್ಲಗುಂಟೆ ತಿಪ್ಪೇಸ್ವಾಮಿ ಇತರರಿದ್ದರು.Campaign
ಜಗಳೂರು ಪಟ್ಟಣದ ವಾಲ್ಮೀಕಿ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೊಂದವರಿಗೆ ನೆರವು ವಿನೂತನ ಕಾರ್ಯಕ್ರಮವನ್ನು ಶಾಸಕ ಬಿ. ದೇವೇಂದ್ರಪ್ಪ ಉದ್ಘಾಟಿಸಿದರು. ಜಿ. ಸುಭಾಷ್ ಚಂದ್ರ ಬೋಸ್, ಕೆ.ಪಿ. ಪಾಲಯ್ಯ, ಸಿ. ತಿಪ್ಪೇಸ್ವಾಮಿ, ನೇರ್ಲಗುಂಟೆ ತಿಪ್ಪೇಸ್ವಾಮಿ ಇತರರಿದ್ದರು.Campaign
Published on

ಪ್ರಮುಖ ಮುಖ್ಯಾಂಶಗಳು

  • ವಿನೂತನ ಕಾರ್ಯಕ್ರಮಕ್ಕೆ ಚಾಲನೆ
  • ಒಂದು ಕೋಟಿ ರೂ. ಸಂಗ್ರಹದ ಗುರಿ
ಜಗಳೂರು: ಸಾಮಾನ್ಯವಾಗಿ ರಾಜಕಾರಣಿಗಳು ಅದ್ದೂರಿ ಕಾರ್ಯಕ್ರಮಗಳ ಮೂಲಕ ಹೊಸ ವರ್ಷಾಚರಣೆ ಮಾಡುವುದು ರೂಢಿ. ಆದರೆ ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಅವರು ಈ ಬಾರಿ ಸಂಪೂರ್ಣ ಭಿನ್ನವಾದ ಮತ್ತು ವಿನೂತನ ಹಾದಿ ತುಳಿಯುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ನೊಂದವರ ನೆರವಿಗೆ ಶಾಸಕರ ಜೋಳಿಗೆ ಎಂಬ ಅಭಿಯಾನದ ಮೂಲಕ ಬಡವರ ಕಣ್ಣೀರು ಒರೆಸುವ ಸಂಕಲ್ಪ ಮಾಡಿದ್ದಾರೆ.
ಗುರುವಾರ ಜಗಳೂರಿನಲ್ಲಿ ಚಾಲನೆ ಪಡೆದ ಈ ಅಭಿಯಾನವು 1 ಕೋಟಿ ರೂ. ದೇಣಿಗೆ ಸಂಗ್ರಹದ ಗುರಿ ಹೊಂದಿದೆ. ಮೊದಲ ದಿನವೇ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ದೊರೆತಿದ್ದು, ಒಟ್ಟು 5,68,300 ರೂ. ಸಂಗ್ರಹವಾಗಿದೆ. ಈ ನಿಧಿಗೆ ಶಾಸಕರು 1,26,000 ರೂ. ನೀಡಿದ್ದಾರೆ. ಅಷ್ಟೇ ಅಲ್ಲದೆ, ಪ್ರತಿ ತಿಂಗಳು ತಮ್ಮ ವೇತನದ ಒಂದು ಲಕ್ಷ ರೂ.ಗಳನ್ನು ಈ ಕಾರ್ಯಕ್ಕೆ ಮೀಸಲಿಡುವುದಾಗಿ ಘೋಷಿಸಿದ್ದಾರೆ.
ರಾಜ್ಯ ಬ್ರಾಹ್ಮಣ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ ಮಾತನಾಡಿ, ಈ ಯೋಜನೆ ರಾಜ್ಯಕ್ಕೆ ಮಾದರಿಯಾಗಿದೆ. ಪ್ರತಿಯೊಬ್ಬರ ಹೃದಯವನ್ನು ಬಿಚ್ಚಿಡುವ ಕಾರ್ಯಕ್ರಮವಾಗಿದೆ. ಎಲ್ಲರ ಒಳಗಣ್ಣು ತೆರೆಸುವ ಈ ಕಾರ್ಯಕ್ಕೆ ದೇವೇಂದ್ರಪ್ಪ ನಾಂದಿ ಹಾಡಿದ್ದಾರೆ. ಅವರು ಏನೇ ಮಾಡಿದರೂ ಸಾಮಾಜಿಕ ಒಳತಿಗಾಗಿ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.
ನಿವೃತ್ತ ಉಪನ್ಯಾಸಕ ಜಿ. ಸುಭಾಷ್ ಚಂದ್ರ ಬೋಸ್, ಕೆಪಿಸಿಸಿ ಎಸ್ಟಿ ವಿಭಾಗದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ನಿವೃತ್ತ ಅಧಿಕಾರಿ ಸಿ. ತಿಪ್ಪೇಸ್ವಾಮಿ. ನಿವೃತ್ತ ಶಿಕ್ಷಕ ನೇರ್ಲಗುಂಟೆ ತಿಪ್ಪೇಸ್ವಾಮಿ ಮಾತನಾಡಿದರು.
ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್, ಪಲ್ಲಾಗಟ್ಟೆ ಶೇಖರಪ್ಪ, ಕೆ. ತಿಪ್ಪೇಸ್ವಾಮಿ, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ. ಪಾಲಯ್ಯ, ಕಲ್ಲೇಶ್‌ರಾಜ್ ಪಟೇಲ್, ದೀಪಕ್ ಪಟೇಲ್, ಓಮಣ್ಣ, ತಿಪ್ಪೇಸ್ವಾಮಿಗೌಡ, ಶಿವನಗೌಡ್ರು, ಬಿ. ಮಹೇಶ್ವರಪ್ಪ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎ.ಎಲ್. ತಿಪ್ಪೇಸ್ವಾಮಿ, ವಕೀಲ ಸಂಘದ ಅಧ್ಯಕ್ಷ ಬಸವರಾಜ್, ಮಹೇಶ್ವರಪ್ಪ, ಶಕೀಲ್ ಅಹಮದ್, ಷಂಷೀರ್ ಅಹಮದ್, ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಎಂ. ಐಹೊಳೆ ಇತರರಿದ್ದರು.

ಸಮಾಜದ ಒಳಿತಿಗಾಗಿ ಭಿಕ್ಷಾಟನೆ

ಬಹುದಿನಗಳ ಆಸೆಯಾಗಿದ್ದ ನೊಂದವರಿಗೆ ನೆರವು ಕಾರ್ಯಕ್ರಮ ಎಲ್ಲರ ಸಹಕಾರದಿಂದ ಲೋಕಾರ್ಪಣೆಯಾಗುತ್ತಿರುವುದು ಸಂತೋಷವಾಗಿದೆ. ಒಂದು ಕೋಟಿ ರೂ. ಸಂಗ್ರಹ ಮಾಡಿ ಬಡವರಿಗೆ ಸಹಾಯ ಮಾಡುವ ಗುರಿ ಇದೆ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು. ಬಾಲ್ಯ, ಯೌವನ, ಗೃಹಸ್ಥ, ಸನ್ಯಾಸ, ವಾನಪ್ರಸ್ಥ ಮುಖೇನ ಬದುಕಿಗೆ ವಿದಾಯ ಹೇಳಬೇಕು ಎಂದು ಸಂಕಲ್ಪ ಮಾಡಿಕೊಂಡಿದ್ದೇನೆ. ನಾನು ಸಹ ಕನಕ, ಪುರಂದರ ಸಂಸ್ಕೃತಿಯ ಉಪಾಸನೆಯಂತೆ ಸಮಾಜದ ಒಳಿತಿಗಾಗಿ ಭಿಕ್ಷಾಟನೆ ಮಾಡುತ್ತೇನೆ. ಈ ಕಾರ್ಯಕ್ಕೆ ಮನಃಪೂರ್ವಕವಾಗಿ ಯಾರು ಬೇಕಾದರೂ ಸಹಾಯ ಮಾಡಬಹುದು. ಇಂತಿಷ್ಟೇ ಕೊಡಿ ಎಂದು ಕೇಳಲ್ಲ ಎಂದರು. ಇದರಲ್ಲಿ ಒಂದು ಪೈಸೆಯೂ ದುಂದುವೆಚ್ಚ ಆಗದಂತೆ ನೋಡಿಕೊಳ್ಳಲಾಗುವುದು. ಕೊಟ್ಟ ಹಣವನ್ನು ಪಾರದರ್ಶಕವಾಗಿ ಬಳಸಿಕೊಂಡು ಕಷ್ಟದಲ್ಲಿರುವ ನಾಗರಿಕರಿಗೆ ನೆರವಾಗುತ್ತೇವೆ ಎಂದು ಹೇಳಿದರು.
ಪಾರದರ್ಶಕತೆ ಮತ್ತು ನಿರ್ವಹಣೆ
ಸಾರ್ವಜನಿಕ ಹಣದ ದುರುಪಯೋಗವಾಗದಂತೆ ತಡೆಯಲು ಶಾಸಕರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಹಿರಿಯ ಸಾಹಿತಿ ಎನ್.ಟಿ. ಎರ‌್ರಿಸ್ವಾಮಿ ಅವರ ನೇತೃತ್ವದಲ್ಲಿ ಏಳು ಜನರ ಪಾರದರ್ಶಕ ಸಮಿತಿಯನ್ನು ರಚಿಸಲಾಗುವುದು. ಈ ನಿಧಿಗಾಗಿಯೇ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಲಾಗುವುದು. ಈ ಹಣವನ್ನು ಸ್ವಾರ್ಥಕ್ಕೆ ಬಳಸಿದರೆ ಅದು ವಿಷಸರ್ಪವಾಗಿ ಕಾಡುತ್ತದೆ ಎಂದು ಶಾಸಕರು ಮಾರ್ಮಿಕವಾಗಿ ಎಚ್ಚರಿಸಿದ್ದಾರೆ.
ಫಲಾನುಭವಿಗಳು ಯಾರು?
ಈ ಅಭಿಯಾನದ ಮೂಲಕ ಸಂಗ್ರಹವಾಗುವ ಹಣವನ್ನು ಕೇವಲ ಪ್ರಚಾರಕ್ಕಾಗಿ ಬಳಸದೆ, ಅರ್ಹ ವ್ಯಕ್ತಿಗಳಿಗೆ ತಲುಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
1. ಅನಾಥರು ಮತ್ತು ಅಂಗವಿಕಲರು.
2. ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು.
3. ಎಲ್ಲ ಸಮುದಾಯಗಳ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net