ದಾವಣಗೆರೆ ತಾಲೂಕಿನ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯಕ್ಕೆ ಶಾಸಕ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ, ಆರ್‌ಎಫ್‌ಒ ಹಿದಾಯತ್ ಇತರರಿದ್ದರು.
ದಾವಣಗೆರೆ:ನಾಲ್ಕು ಚುಕ್ಕೆ ಜಿಂಕೆಗಳು ಸಾವಿಗೀಡಾಗಿದ್ದ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯಕ್ಕೆ ಸೋಮವಾರ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃಗಾಲಯದಲ್ಲಿನ ಸೂಕ್ತ ನಿರ್ವಹಣೆ ಕೊರತೆ ಹಾಗೂ ಪ್ರಾಣಿಗಳಿಗೆ ಗುಣಮಟ್ಟದ ಆಹಾರ ನೀಡದಿರುವ ಶಂಕೆ ವ್ಯಕ್ತಪಡಿಸಿದ ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮೃಗಾಲಯದಲ್ಲಿನ ಜಿಂಕೆ, ಕರಡಿಗಳು ಸೇರಿ ವಿವಿಧ ಪ್ರಾಣಿ-ಪಕ್ಷಿಗಳನ್ನು ವೀಕ್ಷಣೆ ಮಾಡಿದ ಶಾಸಕರು ಅವುಗಳ ಆರೋಗ್ಯ ಸ್ಥಿತಿ, ಪೂರೈಸುವ ಆಹಾರದ ಬಗ್ಗೆ ಮಾಹಿತಿ ಪಡೆದರು.
ಮೃಗಾಲಯದಲ್ಲಿ 94 ಹೆಣ್ಣು, 58 ಗಂಡು ಹಾಗೂ 18 ಮರಿಗಳು ಸೇರಿ ಒಟ್ಟು 170 ಚುಕ್ಕೆ ಜಿಂಕೆಗಳಿವೆ. ನಾಲ್ಕು ಜಿಂಕೆಗಳು ಮೃತಪಟ್ಟಿವೆ. ಇದು ಹೆಮರಾಜಿಕ್ ಸೆಪ್ಟಿಸೆಮಿಯಾ ಎಂಬ ಸಾಂಕ್ರಾಮಿಕ ರೋಗವಿರಬಹುದು ಎಂದು ಪ್ರಾಣಿ ಆರೋಗ್ಯ ಸಲಹಾ ಸಮಿತಿ ಶಂಕಿಸಿದ್ದಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ ತಿಳಿಸಿದರು.
ರೋಗ ಹರಡದಂತೆ ಉಳಿದ ಜಿಂಕೆಗಳಿಗೆ ರೋಗ ನಿರೋಧಕ ಮತ್ತು ಮುನ್ನೆಚ್ಚರಿಕೆ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಹಿರಿಯ ಪಶುವೈದ್ಯರು, ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಚಿಕಿತ್ಸಾ ಕ್ರಮ ಜಾರಿಗೊಳಿಸಲಾಗಿದೆ ಎಂದು ಹೇಳಿದರು.
ಆಹಾರ ದಾಸ್ತಾನು ಕೊಠಡಿಯಲ್ಲಿನ ಕೊಳೆತ ತರಕಾರಿ, ಕೊಳೆತ ಕಾಳುಗಳನ್ನು ಗಮನಿಸಿದರೆ ಪ್ರಾಣಿ, ಪಕ್ಷಿಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. 33 ಲಕ್ಷ ರೂ. ಖರ್ಚು ಮಾಡಿ ಆಹಾರ ಸಾಮಗ್ರಿ ಖರೀದಿಸಲಾಗಿದೆ ಎಂದಿದ್ದರೂ ಅಷ್ಟೊಂದು ಹಣ ಖರ್ಚು ಮಾಡದಿರುವ ಲೋಪ ಎದ್ದು ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮರ್ಪಕ ಆಹಾರ ಪದಾರ್ಥಗಳು ಇಲ್ಲ. ಅಲ್ಲದೇ ಹಣ ದುರ್ಬಳಕೆ ಆಗುತ್ತಿದೆ ಎಂದು ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿವೆ. ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೊದಲು ಮೃತಪಟ್ಟಿದ್ದ ಜಿಂಕೆಯ ಅಂಗಾಂಗದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ರೋಗದ ನಿಖರ ಕಾರಣ ತಿಳಿದ ಬಳಿಕ ಸೂಕ್ತ ಚಿಕಿತ್ಸೆ ನೀಡಿದ್ದರೆ ಸಾವಿನ ಸಂಖ್ಯೆ ತಪ್ಪಿಸಬಹುದಿತ್ತು. ಸಾಂಕ್ರಾಮಿಕ ರೋಗದ ಲಕ್ಷಣಗಳು ಕಾಣಿಸುತ್ತಿದ್ದರೂ, ತಕ್ಷಣಕ್ಕೆ ಚಿಕಿತ್ಸೆ ಕಲ್ಪಿಸಲು ಹಾಗೂ ತಜ್ಞರ ನೆರವು ಪಡೆಯುವಲ್ಲಿ ವಿಳಂಬವಾಗಿದ್ದು ನಿರ್ವಹಣೆ ಕೊರತೆ ಸೂಚಿಸುತ್ತದೆ. ಇದು ಪುನರಾವರ್ತನೆಯಾದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಕಿರು ಮೃಗಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಆದರೆ ಬರುವ 100 ಜನರಲ್ಲಿ 25 ಮಂದಿ ಪ್ರವಾಸಿಗರಿಗೆ ಮಾತ್ರ ಟಿಕೆಟ್ ನೀಡಿ, ಉಳಿದ ಹಣವನ್ನು ದುರ್ಬಳಕೆ ಮಾಡುತ್ತಿರುವ ಆರೋಪಗಳಿವೆ. ಮುಂದೆ ಇಂಥಹ ತಪ್ಪುಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಆರ್‌ಎಫ್‌ಒ ಹಿದಾಯತ್, ಎಸಿಎಫ್ ಆನಂದ್, ಗ್ರಾಪಂ ಮಾಜಿ ಅಧ್ಯಕ್ಷ ನಸ್ರುಲ್ಲಾ, ಗ್ರಾಮದ ಮುಖಂಡರಾದ ಪ್ರಕಾಶ್, ರಾಜಪ್ಪ, ರವಿ, ಸನಾವುಲ್ಲಾ, ರುದ್ರಪ್ಪ, ಶಿವು, ಮಲ್ಲೇಶ್‌ನಾಯ್ಕ, ಫಿರೋಜ್ ಅಹ್ಮದ್, ಜೀವನ್ ಇತರರಿದ್ದರು.
ದಾವಣಗೆರೆ ತಾಲೂಕಿನ ಆನಗೋಡಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯಕ್ಕೆ ಶಾಸಕ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ, ಆರ್‌ಎಫ್‌ಒ ಹಿದಾಯತ್ ಇತರರಿದ್ದರು.