

ಜಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಬಿಡುಗಡೆ ಮಾಡುವ ಅನುದಾನ ಸರ್ಕಾರದ ಆಶಯದ ರೀತಿ ಬಳಕೆಯಾಗುತ್ತಿಲ್ಲ. ಈ ವರ್ಗಗಳಿಗೆ ಪ್ರತಿಫಲ ಸಿಗುತ್ತಿಲ್ಲ. ಹಾಗಾಗಿ ಅನುದಾನ ಸದ್ಬಳಕೆ ಬಗ್ಗೆ ಚರ್ಚೆ ಮಾಡಲು ನ. 12ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ ಎಂದು ಸಚಿವ ಟಿ. ರಘುಮೂರ್ತಿ ಹೇಳಿದರು.
ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಸೋಮವಾರ 31.82 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಿಎಂ ನೇತೃತ್ವದಲ್ಲಿ ಸಭೆ ಆಯೋಜಿಸಿದ್ದು, ಡಿಸಿಎಂ ಡಾ.ಜಿ. ಪರಮೇಶ್ವರ್, ಸಚಿವ ಸತೀಶ್ ಜಾರಕಿಹೊಳಿ, ನಾನು ಭಾಗವಹಿಸಲಿದ್ದು, ಎಸ್ಸಿ-ಎಸ್ಟಿ ಸಮುದಾಯಗಳಿಗೆ ಮೀಸಲಿರುವ 45 ಸಾವಿರ ಕೋಟಿ ರೂ. ಅನುದಾನವನ್ನು ಯಾವ ರೀತಿ ಸದ್ಬಳಕೆ ಮಾಡಬಹುದೆಂದು ಚರ್ಚಿಸಲಾಗುವುದು ಎಂದರು.
ಪರಿಶಿಷ್ಠ ಪಂಗಡ ಇಲಾಖೆಯಲ್ಲಿರುವ 12.50 ಕೋಟಿ ಅನುದಾನದಲ್ಲಿ 51 ಜಾತಿಯ ಜನರಿಗೆ ಇಲಾಖೆಯ ಕಾರ್ಯಕ್ರಮಗಳನ್ನು ತಲುಪಿಸುವ ಕೆಲಸ ಮಾಡಲಾಗುವುದು. ಈಗಾಗಲೇ 10 ಸಾವಿರ ಕೋಟಿ 36 ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದರು.
ಪರಿಶಿಷ್ಟ ಇಲಾಖೆಗೆ ಸಂಬಂಧಿಸಿದಂತೆ ಸಮುದಾಯ ಭವನ, ಉದ್ಯಮ ಶೀಲತೆ, ಸ್ವಾವಲಂಬಿ ಸಾರಥಿ, ನೇರ ಸಾಲ ಇನ್ನಿತರ ಯೋಜನೆಗಳಡಿ ಜಗಳೂರಿಗೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ಅಶ್ವತ್ರೆಡ್ಡಿ, ಟಿ. ರಘುಮೂರ್ತಿ ಇಬ್ಬರೂ ಕಡಬನಕಟ್ಟೆಯವರು, ಆ ಊರಿನ ಅಳಿಯನಾದ ನನಗೆ ಜವಾನನಿಂದ ದಿವಾನನಾಗುವ ಅವಕಾಶವನ್ನು ಪ್ರಜಾಪ್ರಭುತ್ವ ಕಲ್ಪಿಸಿಕೊಟ್ಟಿದೆ. ಹಾಲುಮತಸ್ಥರ ಗುರುದೈವ ಚನ್ನಯ್ಯ ಒಡೆಯರ್, ಭೀಮಪ್ಪ ನಾಯ್ಕ, ಶ್ರೀನಿವಾಸ್ ನಾಯ್ಕ ಅವರಂತಹ ನಾಯಕರನ್ನು ಕೊಟ್ಟ ಕೀರ್ತಿ ಬಿಳಿಚೋಡು ಗ್ರಾಮಕ್ಕೆ ಸಲ್ಲುತ್ತದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮದ್, ಕೆಪಿಸಿಸಿ ಸದಸ್ಯ ಕಲ್ಲೇಶ್ರಾಜ್ ಪಾಟೇಲ್, ಕುರುಬ ಸಮುದಾಯದ ಅಧ್ಯಕ್ಷ ಓಮಣ್ಣ, ಸಿ. ಲಕ್ಷ್ಮಣ್, ಜಿಲ್ಲಾ ಪರಿಶಿಷ್ಠ ಪಂಗಡಗಳ ಕಲ್ಯಾಣಾಧಿಕಾರಿ ನವೀನ್ ಮಠದ್, ನಿರ್ಮಿತಿ ಕೇಂದ್ರ ಇಂಜಿನಿಯರ್ ಮಾಲತೇಶ್, ತಹಸೀಲ್ದಾರ್ ಗುರುಬಸವರಾಜ್, ಶೇಖರಪ್ಪ ಪಲ್ಲಾಗಟ್ಟೆ, ಬೆಂಚಿಕಟ್ಟೆ ರಾಜಣ್ಣ, ತಾಪಂ ಇಒ ಕೆಂಚಪ್ಪ, ಎಸ್ಟಿ ಅಧಿಕಾರಿ ರಾಘವೇಂದ್ರಪ್ಪ, ಬಿಇಒ ಹಾಲಮೂರ್ತಿ ಇತರರಿದ್ದರು.
ಇಂಜಿನಿಯರಿಂಗ್ ಅಧ್ಯಯನ ಮಾಡುವಾಗ ನನ್ನ ತಂದೆಯ ಜತೆ ಬರುತ್ತಿದ್ದ ಜಿ.ಎಚ್. ಅಶ್ವತ್ರೆಡ್ಡಿ ಅವರನ್ನು ನೋಡಿ ಜಗಳೂರಿನ ಶಾಸಕನಾಗಬೇಕು. ಸಮಾಜ ಸೇವೆ ಮಾಡಬೇಕೆಂಬ ಕನಸು ಕಂಡಿದ್ದೆ. ಆದರೆ, ತರುವನೂರು ಹೋಬಳಿ ಚಳ್ಳಕೆರೆಗೆ ಸೇರ್ಪಡೆಯಾಗಿದ್ದರಿಂದ ನನ್ನ ಕನಸು ನನಸಾಗಲಿಲ್ಲ. ಆದರೆ, ಚಳ್ಳಕೆರೆ ಕ್ಷೇತ್ರದ ಮತದಾರರು 3 ಬಾರಿ ನನ್ನನ್ನು ನಿರಂತರ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ನಮ್ಮ ಅಭಿವೃದ್ದಿ ಕೆಲಸ ನೋಡಿ ರಾಜ್ಯದ ಮುಖಂಡರು ಸಚಿವ ಸ್ಥಾನ ನೀಡಿದ್ದಾರೆ ಎಂದು ಟಿ. ರಘುಮೂರ್ತಿ ಹೇಳಿದರು.
ಪ್ರಸ್ತುತ ದಿನಗಳಲ್ಲಿ ಆನ್ಲೈನ್ ಕ್ಲಾಸ್ ನೆಪದಲ್ಲಿ ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ಕೂರಿಸಿ, ಪಾಲಕರು ಧಾರಾವಾಹಿ ನೋಡುತ್ತ ಸಮಯ ಕಳೆಯುತ್ತಾರೆ. ಆದರೆ ಮುಂದೆ ಇದೇ ಮೊಬೈಲ್ ಗೀಳು ಮಕ್ಕಳ ಭವಿಷ್ಯ ಹಾಳು ಮಾಡುತ್ತದೆ. ಪ್ರೀತಿ, ಪ್ರೇಮ, ಪ್ರಣಯ ಎಂದು ಪಾಲಕರ ಕಣ್ಣಲ್ಲಿ ಕಣ್ಣೀರು ತರಿಸುತ್ತಾರೆ. ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸ ರೂಢಿಸಿ ಎಂದು ಶಾಸಕ ಬಿ. ದೇವೆಂದ್ರಪ್ಪ ಹೇಳಿದರು.