ವ್ಯಾಪಾರ ಮಾಡಲು ಮುಂದಾಗದ ವರ್ತಕರು

ಎಪಿಎಂಸಿ ಉಪ ಮಾರುಕಟ್ಟೆಯಲ್ಲಿನ ವ್ಯಾಪಾರ ಮಳಿಗೆಗಳು.
ಎಪಿಎಂಸಿ ಉಪ ಮಾರುಕಟ್ಟೆಯಲ್ಲಿನ ವ್ಯಾಪಾರ ಮಳಿಗೆಗಳು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿಯಿಂದ 2 ವರ್ಷ ಕಮಿಷನ್ ವಿನಾಯಿತಿ ಘೋಷಣೆ
  • ಲೈಸನ್ಸ್ ನೀಡುವ ಭರವಸೆ
  • ಪಾಳು ಬಿದ್ದ ಗೋದಾಮುಗಳು
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಮಾಯಕೊಂಡ ಗ್ರಾಮದಲ್ಲಿರುವ 21 ಎಕರೆಯ ಎಪಿಎಂಸಿ ಉಪ ಮಾರುಕಟ್ಟೆ ವ್ಯಾಪಾರಿಗಳ ನಿರುತ್ಸಾಹದಿಂದ ಕಾರ್ಯಾರಂಭಗೊಳ್ಳದೆ ಪಾಳು ಬಿದ್ದಿದೆ.
ಕಳೆದ ಜುಲೈನಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮತ್ತು ರೈತ ಮುಖಂಡರು ಅಧಿಕಾರಿಗಳ ಜತೆ ಸ್ಥಳಕ್ಕೆ ಭೇಟಿ ನೀಡಿ ಮಾರುಕಟ್ಟೆ ಸಮಗ್ರ ಅಭಿವೃದ್ಧಿ ಕುರಿತು ಚರ್ಚಿಸಿದರೂ ಯಾವುದೇ ಪ್ರಗತಿ ಸಾಧಿಸಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ ಎಪಿಎಂಸಿ ಪ್ರಾರಂಭವಾದಾಗಿನಿಂದ ಕಾರ್ಯ ಚಟುವಟಿಕೆಗಳಿಲ್ಲದೆ ಪಾಳು ಬಿದ್ದಿದೆ. ಅಲ್ಲಿರುವ ದನ-ಕುರಿ- ಮೇಕೆಗಳ ಮಾರುಕಟ್ಟೆ, ವ್ಯವಹಾರಿಕ ವಾಣಿಜ್ಯ ಮಳಿಗೆ ಸೇರಿ ಹಲವು ಗೋದಾಮುಗಳು ಹಾಳಾಗಿವೆ.
ಎರಡು ವರ್ಷಗಳ ಕಾಲ ಯಾವುದೇ ಕಮಿಷನ್ ವಿಧಿಸದೆ ಮಾನ್ಯತೆ ಪಡೆದ ಖರೀದಿದಾರರಿಗೆ ವ್ಯವಹಾರ ಆರಂಭಿಸಲು ಅವಕಾಶ ನೀಡುವುದಾಗಿ ಜಿಲ್ಲಾಧಿಕಾರಿ ಘೋಷಿಸಿದ್ದರು. ಜತೆಗೆ ಅಗತ್ಯ ಲೈಸೆನ್ಸ್ ನೀಡುವ ಭರವಸೆಯೂ ನೀಡಲಾಗಿತ್ತು. ಆದಾಗ್ಯೂ ನಾಲ್ಕು ತಿಂಗಳು ಕಳೆದರೂ ಯಾವುದೇ ವರ್ತಕರು ವ್ಯಾಪಾರ ಆರಂಭಿಸಲು ಮುಂದೆ ಬಂದಿಲ್ಲ.
ಜಿಲ್ಲಾಡಳಿತವು ಸ್ಥಳೀಯ ಹಾಗೂ ಜಿಲ್ಲಾಮಟ್ಟದ ವರ್ತಕರಿಗೆ ಕಮಿಷನ್ ವಿನಾಯಿತಿ ನೀಡುವ ಮೂಲಕ ವ್ಯಾಪಾರ ಆರಂಭಿಸಲು ಕೋರಿದರೂ ಪ್ರತಿಕ್ರಿಯೆ ಲಭ್ಯವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತದಿಂದ ಸ್ವಚ್ಛತೆ

ಶಾಸಕರು ಮತ್ತು ಜಿಲ್ಲಾಧಿಕಾರಿಗಳ ಭೇಟಿಯ ವೇಳೆ ಗ್ರಾಮಸ್ಥರು 40 ವರ್ಷಗಳಿಂದ ಪ್ರಾಂಗಣ ಸರಿಯಾದ ಸ್ವಚ್ಛತೆ ಕಾಣದೆ ಹಾಳಾಗುತ್ತಿದೆ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಮಾರುಕಟ್ಟೆಯಲ್ಲಿದ್ದ ಗಿಡಗಂಟೆ ಮತ್ತು ಕಸವನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿತ್ತು.

ಎರಡು ವರ್ಷಗಳವರೆಗೆ ಯಾವುದೇ ಕಮಿಷನ್ ವಿಧಿಸಲಾಗುವುದಿಲ್ಲ. ನಂತರ ಲೈಸೆನ್ಸ್ ನೀಡಲಾಗುತ್ತದೆ. ಆದರೂ ಖರೀದಿದಾರರು ಮಾರುಕಟ್ಟೆಗೆ ಬರುವಲ್ಲಿ ನಿರುತ್ಸಾಹ ತೋರುತ್ತಿದ್ದಾರೆ. ವರ್ತಕರು ಮುಂದೆ ಬಂದಲ್ಲಿ ವಹಿವಾಟು ಪ್ರಾರಂಭಿಸಲಾಗುವುದು.

ಎಪಿಎಂಸಿ ಪ್ರಾಂಗಣಕ್ಕೆ ಜುಲೈ ತಿಂಗಳಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಭೇಟಿ ನೀಡಿ ವ್ಯಾಪಾರಕ್ಕೆ ವರ್ತಕರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಖರೀದಿದಾರರು ವ್ಯಾಪಾರಕ್ಕೆ ಬಾರದ ಕಾರಣ ಪ್ರಾಂಗಣದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net