ವೈದ್ಯ ವಿದ್ಯಾರ್ಥಿಗಳಿಗೆ ಬೇಕು ಯೋಗ-ಧ್ಯಾನ

 ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ 61ನೇ ಪದವಿ ಪ್ರದಾನ ಸಮಾರಂಭದಲ್ಲಿ ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಉಪಕುಲಪತಿ ಡಾ. ಎಚ್. ಬಸವನಗೌಡ, ಡಾ. ಶುಕ್ಲಾ ಎಸ್. ಶೆಟ್ಟಿ, ಡಾ. ಎಲ್.ಡಿ. ಶ್ರೀನಿವಾಸ್, ಡಾ. ಮಹಾಲಕ್ಷ್ಮಿ ಕೆಂಚೆ, ಡಾ. ವರದೇಂದ್ರ ಕುಲಕರ್ಣಿ, ಡಾ. ಸುದೀಪ್ ಇದ್ದರು.
ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ 61ನೇ ಪದವಿ ಪ್ರದಾನ ಸಮಾರಂಭದಲ್ಲಿ ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಉಪಕುಲಪತಿ ಡಾ. ಎಚ್. ಬಸವನಗೌಡ, ಡಾ. ಶುಕ್ಲಾ ಎಸ್. ಶೆಟ್ಟಿ, ಡಾ. ಎಲ್.ಡಿ. ಶ್ರೀನಿವಾಸ್, ಡಾ. ಮಹಾಲಕ್ಷ್ಮಿ ಕೆಂಚೆ, ಡಾ. ವರದೇಂದ್ರ ಕುಲಕರ್ಣಿ, ಡಾ. ಸುದೀಪ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾಧನೆಗೆ ಅಡ್ಡಿಯಾಗದಿರಲಿ ದೌರ್ಬಲ್ಯ
  • ಉಪಕುಲಪತಿ ಡಾ. ಎಚ್. ಬಸವನಗೌಡ ಅನಿಸಿಕೆ
  • ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ಪದವಿ ಪ್ರದಾನ
ದಾವಣಗೆರೆ: ವೈದ್ಯ ವೃತ್ತಿಯು ಅತ್ಯಂತ ಜವಾಬ್ದಾರಿಯುತವಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಒತ್ತಡ ನೀಗಲು ಯೋಗ, ಧ್ಯಾನ ಹಾಗೂ ಏಕಾಗ್ರತೆ ಸಾಧಿಸಬೇಕು ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಉಪಕುಲಪತಿ ಡಾ. ಎಚ್. ಬಸವನಗೌಡ ಹೇಳಿದರು.
ನಗರದ ಬಾಪೂಜಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ 61ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ತಮ್ಮ ವಿದ್ಯಾರ್ಥಿ ಜೀವನವನ್ನು ಸ್ಮರಿಸಿದ ಅವರು, ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಪ್ರವೇಶ ಪಡೆದಿದ್ದು ತಮ್ಮ ಅದೃಷ್ಟವಾಗಿತ್ತು. ಇದೇ ಕಾಲೇಜಿನಲ್ಲಿ ಎಂ.ಡಿ. ಮೆಡಿಸಿನ್ ಪದವಿ ಪೂರ್ಣಗೊಳಿಸಿದ್ದು, ತಮ್ಮ ಶಿಕ್ಷಣ ಹಾಗೂ ಸಾಧನೆಗೆ ಕಾರಣರಾದ ಗುರುಗಳನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.
ಪ್ರತಿಯೊಬ್ಬರ ಜೀವನದಲ್ಲಿ ಸ್ಪಷ್ಟವಾದ ಗುರಿ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ವೈದ್ಯರ ಜೀವನದಲ್ಲಿ ಪ್ರತಿದಿನವೂ ಕಲಿಕೆಯ ದಿನವಾಗಿದ್ದು, ತಮ್ಮನ್ನು ಬೆಳೆಸಿದ ಪಾಲಕರು, ಮಾರ್ಗದರ್ಶಿ ಗುರುಗಳನ್ನು ಎಂದಿಗೂ ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಅನೇಕ ಸಾಧಕರು ತಮ್ಮ ಜೀವನದಲ್ಲಿ ಎದುರಾದ ವೈಫಲ್ಯಗಳನ್ನು ಮೀರಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ. ನಮ್ಮಲ್ಲಿನ ದೌರ್ಬಲ್ಯಗಳು ಸಾಧನೆಗೆ ಅಡ್ಡಿಯಾಗಬಾರದು. ಅಗತ್ಯಕ್ಕೆ ತಕ್ಕಂತೆ ಮೊಬೈಲ್ ಬಳಸಬೇಕು ಎಂದು ಸಲಹೆ ನೀಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶುಕ್ಲಾ ಎಸ್. ಶೆಟ್ಟಿ ಮಾತನಾಡಿ, ಪದವಿ ಪ್ರದಾನವು ಶಿಕ್ಷಣದ ಅಂತ್ಯವಲ್ಲ, ಹೊಸ ಜೀವನದ ಆರಂಭವಾಗಿದೆ. ವೈದ್ಯರು ರೋಗಿಗಳೊಂದಿಗೆ ಪ್ರೀತಿ, ಕರುಣೆ ಮತ್ತು ಸಹಾನುಭೂತಿಯಿಂದ ವರ್ತಿಸಬೇಕು. ರೋಗಿಗಳು ಮತ್ತು ಅವರ ಕುಟುಂಬಸ್ಥರು ವೈದ್ಯರ ಮೇಲೆ ಅಪಾರ ನಂಬಿಕೆ ಇಟ್ಟಿರುತ್ತಾರೆ. ಆದ್ದರಿಂದ ಮಾನವೀಯ ಮೌಲ್ಯಗಳೊಂದಿಗೆ ವೈದ್ಯಕೀಯ ಸೇವೆ ನಿರ್ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರು ಹಾಗೂ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಫಾರ್ಮಕಾಲಜಿ ವಿಭಾಗದ ಪ್ರಾಧ್ಯಾಪಕ ಡಾ. ಎಲ್.ಡಿ. ಶ್ರೀನಿವಾಸ್ ಅವರು ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.
ಐಎಬಿ ಅಧ್ಯಕ್ಷೆ ಡಾ. ಮಹಾಲಕ್ಷ್ಮಿ ಕೆಂಚೆ ಅಧ್ಯಕ್ಷತೆ ವಹಿಸಿದ್ದರು. ವೈದ್ಯಕೀಯ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ವರದೇಂದ್ರ ಕುಲಕರ್ಣಿ, ಐಎಬಿ ಅಧ್ಯಕ್ಷ ಡಾ. ಸುದೀಪ್, ಡಾ. ಸ್ಯಾಮುಯಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net