ದಾವಣಗೆರೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಕ್ಕಳ ಸಮಸ್ಯೆಗಳ ವರದಿಗಾರಿಕೆಯಲ್ಲಿ ಪತ್ರಕರ್ತರ ಹೊಣೆಗಾರಿಕೆ ಕುರಿತ ಕಾರ್ಯಾಗಾರವನ್ನು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಉದ್ಘಾಟಿಸಿದರು. ಪ್ರೊಸುನ್ ಸೇನ್, ಪ್ರೊ.ಎಂ.ಎಸ್. ಸಪ್ನಾ, ಶಿವಕುಮಾರ ಕಣಸೋಗಿ, ಡಾ.ವಾಸುದೇವ ಶರ್ಮಾ ಇದ್ದರು.workshop
ದಾವಣಗೆರೆ:ಭವಿಷ್ಯದ ಪ್ರಜೆಗಳಾದ ಮಕ್ಕಳ ಮೇಲಾಗುವ ದುಷ್ಪರಿಣಾಮಗಳನ್ನು ತಡೆಗಟ್ಟುವುದು ಈ ಕಾರ್ಯಾಗಾರದ ಮೂಲ ಉದ್ದೇಶ. ಬಾಲ್ಯ ವಿವಾಹ, ಬಾಲ್ಯಕಾರ್ಮಿಕ, ಕೃಷಿ- ಗ್ರಾಮೀಣ ಉದ್ಯೋಗಳು ಮಕ್ಕಳನ್ನು ಅವಲಂಬಿಸಿದೆ. ಹಾಗಾಗಿ ಮಕ್ಕಳ ಹಕ್ಕುಗಳನ್ನು ಸಂರಕ್ಷಣೆ ಮತ್ತು ಜಾರಿಗೆ ಮಾಧ್ಯಮಗಳು ಸಹಕಾರ ನೀಡಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಬುಧವಾರ ಯುನಿಸೆಫ್ ಮತ್ತು ಮೈಸೂರು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಮಸ್ಯೆಗಳ ವರದಿಗಾರಿಕೆಯಲ್ಲಿ ಪತ್ರಕರ್ತರ ಹೊಣೆಗಾರಿಕೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಹಕ್ಕು, ರಕ್ಷಣೆ ಕುರಿತು ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸಿದರೆ ಸಾಕಾಗುವುದಿಲ್ಲ. ಪ್ರಾಥಮಿಕ ಶಾಲಾ ಹಂತದಿಂದಲೇ ಸಮರ್ಪಕ ತರಬೇತಿ, ಮಾರ್ಗದರ್ಶನ ನೀಡುವ ವ್ಯವಸ್ಥೆಯಾಗಬೇಕು ಎಂದರು.
ಪತ್ರಕರ್ತರ ಜತೆಗೆ ಶಿಕ್ಷಕರಿಗೂ ಮಕ್ಕಳ ಸಮಸ್ಯೆಗಳು, ಕಾನೂನುಗಳ ಜಾಗೃತಿ ಕುರಿತ ತರಬೇತಿ ನೀಡುವ ವ್ಯವಸ್ಥೆಯಾಗಬೇಕು. ಮಕ್ಕಳನ್ನು ಪ್ರಾಥಮಿಕ ಹಂತದಿಂದಲೇ ಜಾಗೃತರನ್ನಾಗಿ ಮಾಡಿದರೆ ಭವಿಷ್ಯದಲ್ಲಾಗುವ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಉತ್ತಮ ನಾಗರಿಕ ಸಮಾಜವನ್ನು ನಿರ್ಮಿಸಲು ನೆರವಾಗುತ್ತದೆ ಎಂದರು.
ಇಂತಹ ಕಾರ್ಯಾಗಾರದಲ್ಲಿ ಪತ್ರಕರ್ತರು ಭಾಗವಹಿಸಿ ತರಬೇತಿ ಪಡೆದು, ಈ ಮಾಹಿತಿಯನ್ನು ಇತರರಿಗೂ ತಿಳಿಸಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಶ್ರಮಿಸಬೇಕು ಮತ್ತು ಒಳ್ಳೆಯ ವರದಿಗಳನ್ನು ಪ್ರಕಟಿಸಿ ಸಮಾಜಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.
ಮಾಧ್ಯಮಗಳಲ್ಲಿ ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸಿ, ಕಾಳಜಿಯುಕ್ತ ವರದಿಗಳು ದಿನವೂ ಪ್ರಕಟವಾಗುತ್ತಿವೆ. ಆದರೆ ಯಾವ ಸಮಸ್ಯೆಗೂ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಕೆಟ್ಟ ವಿಚಾರಗಳು ಹೆಚ್ಚು ಪ್ರಚಾರದ ಮನ್ನಣೆ ಪಡೆದರೆ ಒಳ್ಳೆಯ ಕೆಲಸಗಳು ಬೆಳಕಿಗೆ ಬರುವುದೇ ಇಲ್ಲ. ಅಲ್ಲದೆ ಮಕ್ಕಳ ಮೇಲಿನ ದೌರ್ಜನ್ಯ ವಿಚಾರಗಳ ಕುರಿತು ವರದಿ ಮಾಡುವಾಗ ಅವರ ಜೀವನ, ಕುಟುಂಬದ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳ ಹಕ್ಕುಗಳಿಗೆ ಹಲವಾರು ಕಾನೂನುಗಳಿವೆ. ರಕ್ಷಣೆಗಾಗಿ ಸಮಿತಿಗಳು, ಸಂಘಟನೆಗಳು ಕೆಲಸ ಮಾಡುತ್ತವೆ. ಸರ್ಕಾರ ಮತ್ತು ಆಡಳಿತ ಯಂತ್ರವನ್ನು ಎಚ್ಚರಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ನುಡಿದರು.
ಯುನಿಸೆಫ್ ಅಧಿಕಾರಿ ಪ್ರೊಸುನ್ ಸೇನ್ ಮಾತನಾಡಿ, ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಮಕ್ಕಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಪ್ರಮುಖ ಸಮಸ್ಯೆಗಳನ್ನು ಗುರುತಿಸಿ ಯೂನಿಸೆಫ್ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವ ಜತೆಗೆ ಪರಿಹಾರ ಕ್ರಮಗಳನ್ನೂ ಕೈಗೊಳ್ಳಲಾಗುತ್ತಿದೆ ಮತ್ತು ಸಮಸ್ಯೆಗೆ ಸ್ಪಂದಿಸಿ ಪರ್ಯಾಯಗಳನ್ನು ರೂಪಿಸುವ ಪ್ರಯತ್ನವನ್ನು ಮಾಡುತ್ತಿದೆ ಎಂದರು.
ಮೈಸೂರು ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಪ್ರೊ.ಎಂ.ಎಸ್. ಸಪ್ನಾ ಮಾತನಾಡಿ, ಕಾರ್ಯಾಗಾರದಲ್ಲಿ ಪತ್ರಕರ್ತರಿಗೆ ಮಕ್ಕಳ ಹಕ್ಕು, ಕಾನೂನು, ಆರೋಗ್ಯ ಸಮಸ್ಯೆಗಳು ಹಾಗೂ ಶೈಕ್ಷಣಿಕ ವಿಚಾರಗಳ ಕುರಿತು ಚರ್ಚೆಯ ಮೂಲಕ ಮನನ ಮಾಡಿಕೊಡಲಾಗುವುದು ಎಂದು ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ ಕಣಸೋಗಿ ಮಾತನಾಡಿದರು. ಮಂಜುನಾಥ ನಿರೂಪಿಸಿದರು.
ನಂತರ ನಡೆದ ಕಾರ್ಯಾಗಾರದಲ್ಲಿ ಮಕ್ಕಳ ಹಕ್ಕು ಮೇಲ್ವಿಚಾರಣೆ ರಾಜ್ಯ ಸಂಚಾಲಕ ಡಾ.ವಾಸುದೇವ ಶರ್ಮಾ ಅವರು ಮಕ್ಕಳ ಹಕ್ಕುಗಳ ಕಾರ್ಯಚೌಕಟ್ಟು ಮತ್ತು ಕಾನೂನುಗಳು ಕುರಿತು ಮಾತನಾಡಿದರು. ಯುನಿಸೆಫ್ ವೈದ್ಯಾಧಿಕಾರಿ ಡಾ. ಶ್ರೀಧರ ರ‌್ಯಾವಂಕಿ ಅವರು ಪ್ರಸ್ತುತ ಮಕ್ಕಳ ಆರೋಗ್ಯ ಸಮಸ್ಯೆಗಳು ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆಗಳು ಕುರಿತು ಮಾಹಿತಿ ನೀಡಿ, ಪತ್ರಕರ್ತರೊಂದಿಗೆ ಸಂವಾದ ನಡೆಸಿದರು.