ದಾವಣಗೆರೆ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ, 2025-26ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಆರ್. ಸುರೇಶ್ ಶಾಸ್ತ್ರಿ, ಡಾ. ಎಂ.ಸಿ. ಶಶಿಕಾಂತ್, ಎಸ್.ಪಿ. ಸತ್ಯನಾರಾಯಣ ರಾವ್, ಗಿರೀಶ್ ನಾಡಿಗ್, ಎಸ್. ಗೋಪಾಲದಾಸ್, ಎಲ್. ರಾಮಚಂದ್ರರಾವ್, ಭಾಸ್ಕರ್ ಭಟ್, ಶೇಷಾಚಲ, ಉಮೇಶ್ ಕುಲಕರ್ಣಿ ಇದ್ದರು.
ದಾವಣಗೆರೆ :ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣುತ್ತ, ಶಿಸ್ತುಬದ್ಧ ಅಭ್ಯಾಸ ಕ್ರಮವನ್ನು ರೂಢಿಸಿಕೊಂಡರೆ ಯಶಸ್ಸು ದೊರೆಯುತ್ತದೆ ಎಂದು, ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶಕ ಆರ್. ಸುರೇಶ್ ಶಾಸ್ತ್ರಿ ಹೇಳಿದರು.
ಬ್ರಾಹ್ಮಣ ಸಮಾಜ ಸೇವಾ ಸಂಘದಿಂದ ನಗರದ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಇತ್ತೀಚೆಗೆ ನಡೆದ, 2025-26ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ಮಕ್ಕಳ ಕನಸಿಗೆ ಪಾಲಕರು ನೀರೆರೆಯಬೇಕು. ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿದ್ದರೆ ಮಾತ್ರ ಯಶಸ್ಸನ್ನು ನಿರೀಕ್ಷಿಸಬಹುದು ಎಂದು ತಿಳಿಸಿದರು.
ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಡಾ. ಎಂ.ಸಿ. ಶಶಿಕಾಂತ್ ಮಾತನಾಡಿ, ಮಕ್ಕಳು ತಂದೆ, ತಾಯಿ ಮತ್ತು ಗುರುಗಳಿಗೆ ನೀಡಬೇಕಾದ ಗೌರವ, ಸಂಸ್ಕಾರ ಕಲಿಕೆ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡದೆ ಓದಿನ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಕಿವಿಮಾತು ಹೇಳಿದರು.
ಸನ್ಮಾನ ಸ್ವೀಕರಿಸಿದ ಅನ್ವಯಿ, ಸಿಂಚನ, ನಿತ್ಯಶ್ರೀ, ಭಾವನಾ ಮತ್ತು ಪಾಲಕರಾದ ಪ್ರಕಾಶ್, ಸುಜಾತಾ ಮತ್ತು ಆದಿಕೇಶವ ಶಾಸ್ತ್ರಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕೃಷ್ಣಪ್ರಸಾದ್, ಸುಧನ್ವ ಮತ್ತು ವಿಶಾಲ್ ಚಂದ್ರ ವೇದಘೋಷ ಮಾಡಿದರು.
ಗೌರವ ಕಾರ್ಯದರ್ಶಿ ಎಸ್. ಗೋಪಾಲದಾಸ್ ಸ್ವಾಗತಿಸಿದರು. ಎಲ್. ರಾಮಚಂದ್ರರಾವ್ ವಂದಿಸಿದರು. ಭಾಸ್ಕರ್ ಭಟ್ ಕಾರ್ಯಕ್ರಮ ನಿರೂಪಿಸಿದರು. ನಿಕಟಪೂರ್ವ ಅಧ್ಯಕ್ಷ ಎಸ್.ಪಿ. ಸತ್ಯನಾರಾಯಣ ರಾವ್, ನಿರ್ದೇಶಕರಾದ ಗಿರೀಶ್ ನಾಡಿಗ್, ಶೇಷಾಚಲ, ಉಮೇಶ್ ಕುಲಕರ್ಣಿ, ಎಚ್.ಎಸ್. ನಾಗರಾಜ್, ಭೀಮಾಶಂಕರ್ ಜೋಶಿ, ವಿಜಯ್ ಕುಮಾರ್ ಜೋಶಿ ಹಾಗೂ ಪಾಲಕರು ಇದ್ದರು.
ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 90, ಪಿಯುಸಿಯಲ್ಲಿ ಶೇ. 85, ಹಾಗೂ ಪದವಿ ಪರೀಕ್ಷೆಗಳಲ್ಲಿ ಶೇ. 70ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ 42 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.