ಮಹಾತ್ಮರ ತತ್ವ ಬದುಕಿಗೆ ಅನ್ವಯವಾಗಲಿ

ಕುಂದೂರು ಗ್ರಾಮದಲ್ಲಿ ಸೋಮವಾರ ಬಸವೇಶ್ವರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕರಾದ ಡಿ.ಜಿ. ಶಾಂತನಗೌಡ, ಸಮರ್ಥ ಶಾಮನೂರು, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಸ್ವಾಭಿಮಾನಿ ಬಳಗದ ಜಿ.ಬಿ. ವಿನಯಕುಮಾರ್ ಇತರರಿದ್ದರು.Principle
ಕುಂದೂರು ಗ್ರಾಮದಲ್ಲಿ ಸೋಮವಾರ ಬಸವೇಶ್ವರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಶಾಸಕರಾದ ಡಿ.ಜಿ. ಶಾಂತನಗೌಡ, ಸಮರ್ಥ ಶಾಮನೂರು, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಸ್ವಾಭಿಮಾನಿ ಬಳಗದ ಜಿ.ಬಿ. ವಿನಯಕುಮಾರ್ ಇತರರಿದ್ದರು.Principle
Published on

ಪ್ರಮುಖ ಮುಖ್ಯಾಂಶಗಳು

  • ಸಾಣೇಹಳ್ಳಿ ಸ್ವಾಮೀಜಿ ಹೇಳಿಕೆ
  • ಬಸವೇಶ್ವರ ಕಂಚಿನ ಪುತ್ಥಳಿ ಅನಾವರಣ
ಹೊನ್ನಾಳಿ: ಯುವ ಸಮುದಾಯ ಕೇವಲ ಬಸವಣ್ಣನವರ ಅಥವಾ ಮಹಾತ್ಮರ ಪುತ್ಥಳಿ ನಿರ್ಮಿಸಿ ಪ್ರತಿಷ್ಠಾಪಿಸಿದರೆ ಸಾಲದು. ಬದಲಿಗೆ ಅವರ ತತ್ವ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಿಪಾಲಿಸಿದಾಗ ಮಾತ್ರ ಸಾರ್ಥಕತೆ ಸಿಗುತ್ತದೆ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಕುಂದೂರು ಗ್ರಾಮದ ಬಸವೇಶ್ವರ ವೃತ್ತದಲ್ಲಿ ಸೋಮವಾರ ಶ್ರೀ ಬಸವೇಶ್ವರ ಪುತ್ಥಳಿ ಸಮಿತಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ ಅನಾವರಣಗೊಳಿಸಿ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಪತ್ತನ್ನು ಸದ್ವಿನಿಯೋಗ ಮಾಡುವ ಸದ್ಭಾವನೆ ಶ್ರೀಮಂತ ವರ್ಗದಲ್ಲಿ ಮೂಡಿದಾಗ ಸಮಾಜದಲ್ಲಿ ಸಂತೃಪ್ತಿ ಕಾಣಲು ಸಾಧ್ಯ. ಬಸವಣ್ಣನವರ ಕಾಯಕ ನಿಷ್ಠೆಯನ್ನು ಎಲ್ಲರೂ ಅಳವಡಿಸಿಕೊಂಡರೆ ದೇಶದಲ್ಲಿ ಬಡತನಕ್ಕೆ ಜಾಗವಿರುವುದಿಲ್ಲ. ಜೀವನಕ್ಕೆ ವೃತ್ತಿಗಿಂತ ವೃತ್ತಿ ನಿಷ್ಠೆ ಹಾಗೂ ಧರ್ಮಪಾಲನೆ ಮುಖ್ಯ ಎಂದು ಪ್ರತಿಪಾದಿಸಿದರು.
ಸಾಮಾನ್ಯವಾಗಿ ಎಲ್ಲರೂ ಅಶ್ವಾರೂಢ ಬಸವಣ್ಣನವರ ಪುತ್ಥಳಿ ಪ್ರತಿಷ್ಠಾಪಿಸುತ್ತಾರೆ. ಇದರ ಬದಲಿಗೆ ಇಷ್ಟಲಿಂಗ ಪೂಜಾನಿರತ ಅಥವಾ ತಾಳೆಗರಿಯಲ್ಲಿ ವಚನ ಬರೆಯುವ ಭಂಗಿಯ ಪುತ್ಥಳಿ ನಿರ್ಮಿಸಿದರೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ದೇವರು ಗುಡಿ-ಗುಂಡಾರಗಳಿಗಿಂತ ನಮ್ಮ ಸಂಸ್ಕಾರ, ನಡವಳಿಕೆ ಹಾಗೂ ಹೃದಯದಲ್ಲಿ ನೆಲೆಸಿರಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ದೇಶದ ಶ್ರೀಮಂತ ದೇವಸ್ಥಾನಗಳಲ್ಲಿ ದೇವರ ಹುಂಡಿಯ ಹಣವನ್ನೇ ದುರುಪಯೋಗಪಡಿಸಿಕೊಂಡ ಘಟನೆಗಳನ್ನು ಮಾಧ್ಯಮಗಳ ಮೂಲಕ ನೋಡುತ್ತಿದ್ದೇವೆ. ಇದಕ್ಕೆ ಅಯೋಧ್ಯೆ ರಾಮಮಂದಿರದ ಘಟನೆ ಉದಾಹರಣೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಿ.ಜಿ. ಶಾಂತನಗೌಡ, ಬಸವಣ್ಣನವರ ವಚನಗಳನ್ನು ಓದಿ ಅರಿತುಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದರು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಪುತ್ಥಳಿ ಹಾಗೂ ದೇವಸ್ಥಾನ ನಿರ್ಮಿಸುವುದರ ಜತೆಗೆ ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವುದು ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಧು ವೀರಶೈವ ಸಮಾಜದ ತಾಲೂಕಾಧ್ಯಕ್ಷ ಎಚ್.ಎ. ಗದ್ದಿಗೇಶ್ ಮಾತನಾಡಿ, ಗ್ರಾಮದಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಸುಂದರ ಕಂಚಿನ ಬಸವೇಶ್ವರ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. ಸ್ವಾಮೀಜಿಯವರ 76ನೇ ವರ್ಷದ ಸವಿನೆನಪಿಗಾಗಿ ಸಾಣೇಹಳ್ಳಿಯಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ಗುರುಭವನ ನಿರ್ಮಿಸಲಾಗುವುದು ಎಂದು ತಿಳಿಸಿದರು.
ದಾವಣಗೆರೆ ತಾಲೂಕು ಕಸಾಪ ಅಧ್ಯಕ್ಷೆ ಸುಮತಿ ಜಯಪ್ಪ ಉಪನ್ಯಾಸ ನೀಡಿದರು.
ದಾವಣಗೆರೆ ಶಾಸಕ ಸಮರ್ಥ ಶಾಮನೂರು, ಸ್ವಾಭಿಮಾನಿ ಬಳಗದ ಜಿ.ಬಿ. ವಿನಯಕುಮಾರ್ ಮಾತನಾಡಿದರು. ನ್ಯಾಮತಿ ತಾಲೂಕು ಸಾಧು ಲಿಂಗಾಯತ ಸಮಾಜದ ಅಧ್ಯಕ್ಷ ಜಿ. ಶಿವಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ. ವಿಶ್ವನಾಥ್, ಜಿಪಂ ಮಾಜಿ ಸದಸ್ಯ ಕೆ. ಗುರುಮೂರ್ತಿ, ಶಿಮುಲ್ ನಿರ್ದೇಶಕ ಹನುಮನಹಳ್ಳಿ ಬಸವರಾಜಪ್ಪ, ಕೆ. ಷಣ್ಮುಖಪ್ಪ, ಅನಿಲ್ ಎಚ್, ಆಂಜನೇಯ, ಸೋಮಶೇಖರಪ್ಪ ಹಾಗೂ ಪುತ್ಥಳಿ ಸಮಿತಿಯ ಪದಾಧಿಕಾರಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net