ದಾವಣಗೆರೆ: ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷವಿದೆ. ದಾವಣಗೆರೆ ದಕ್ಷಿಣದಲ್ಲಿ ಕಮಲ ಅರಳಿಸಲು ಕಾರ್ಯಕರ್ತರು ಇಂದಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ನಗರದ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಬಿಜೆಪಿಯ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮಂಡಳ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿದರು.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಶಾಸಕರನ್ನು ಚುನಾಯಿಸುವ ನಿರೀಕ್ಷೆ ಇತ್ತು. ಅನೇಕ ಕಾರಣ ಹಾಗೂ ಕಾಂಗ್ರೆಸ್‌ನ ಹಣಬಲದಿಂದ ನಮಗೆ ಸೋಲಾಗಿದೆ. ಮತ್ತೆ ಗೆಲ್ಲುವ ಹಂಬಲವಿದೆ. ಕ್ಷೇತ್ರದಲ್ಲಿ ಪಕ್ಷ ಬಲವರ್ಧನೆಗಾಗಿ ಮತ್ತಷ್ಟು ಶ್ರಮಿಸಿ ಎಂದು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರು ನೀಡಿದ ಕೊಡುಗೆಗಳನ್ನು ಮನೆ ಮನೆಗೆ ತಲುಪಿಸಬೇಕು. ಕಾರ್ಯಕರ್ತರು ತಮ್ಮ ವೃತ್ತಿಯ ನಡುವೆಯೂ ದಿನದ ಮೂರು ತಾಸು ಸಂಘಟನೆಗೆ ಮೀಸಲಿಡಬೇಕು ಎಂದು ಹೇಳಿದರು.
ಉಪಚುನಾವಣೆಯಲ್ಲಿ ಪಟ್ಟಣದ ಕೆಲವೆಡೆ 9 ಸಾವಿರವರೆಗೆ ಲೀಡ್ ಬಂದಿವೆ. ಮುಸ್ಲಿಮರ ಪ್ರದೇಶಗಳಲ್ಲಿ ಸ್ವಲ್ಪ ಮತ ಕಡಿಮೆಯಾಗಿದೆ. ಗ್ರಾಮಾಂತರ ಭಾಗದಲ್ಲಿ 5ರಿಂದ 6ಸಾವಿರ ಲೀಡ್ ನಿರೀಕ್ಷೆಯಲ್ಲಿ ಹಿನ್ನಡೆಯಾಗಿದೆ. ಲೋಕಸಭೆ ಹಾಗೂ ಹಿಂದಿನ ವಿಧಾನಸಭೆ ಚುನಾವಣೆಯಲ್ಲೂ ಹಿನ್ನಡೆಯಾಗಿತ್ತು. ಗ್ರಾಮಾಂತರ ಭಾಗದಲ್ಲಿ ಮುನ್ನಡೆ ಸಾಧಿಸುವ ಕಾಲ ಬರಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅಮಿತ್‌ಶಾ ಆದಿಯಾಗಿ ಹಿರಿಯ ಮುಖಂಡರು ಪಕ್ಷಕ್ಕಾಗಿ ಹಾಗೂ ಹಿಂದೂ ಧರ್ಮ, ಭಾರತೀಯ ಸಂಸ್ಕೃತಿ ಉಳಿವಿಗಾಗಿ ತ್ಯಾಗ ಮಾಡುತ್ತಿದ್ದಾರೆ. ಕಾರ್ಯಕರ್ತರು ಕೂಡ ಇದೇ ದಿಸೆಯಲ್ಲಿ ಕೆಲಸ ಮಾಡಬೇಕಿದೆ ಎಂದು ಆಶಿಸಿದರು.
ಪ್ರಾಸ್ತಾವಿಕ ಮಾತನಾಡಿದ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಕಾಂಗ್ರೆಸ್‌ನ ಇಬ್ಬಗೆ ನೀತಿ ಖಂಡಿಸಿ, ನೆಹರೂ ಸಚಿವ ಸಂಪುಟದಿಂದ ಹೊರಬಂದಿದ್ದ ಶ್ಯಾಮಾಪ್ರಸಾದ್ ಮುಖರ್ಜಿ ಅವರು 1951ರಲ್ಲಿ ಜನಸಂಘ ಶುರು ಮಾಡಿ ಹೋರಾಟಕ್ಕಿಳಿದರು. ಅವರ ಜತೆಗೆ ದೀನದಯಾಳ್ ಮುಖರ್ಜಿ ಕೂಡ ನಿಗೂಢ ಹತ್ಯೆಗೀಡಾದರು. ಹೀಗಾಗಿ ಬಿಜೆಪಿ ತ್ಯಾಗ-ಬಲಿದಾನದಿಂದ ಬಂದಿದೆ ಎಂದರು.
ಹಿರಿಯ ಮುತ್ಸದ್ದಿ ಲಾಲ್‌ಕೃಷ್ಣ ಅಡ್ವಾಣಿ, ಈ ಹಿಂದೆ ಪ್ರಧಾನಿ ಸ್ಥಾನಕ್ಕೆ ಅಟಲ್ ಬಿಹಾರಿ ವಾಜಪೇಯಿ ಹೆಸರನ್ನು ಸೂಚಿಸಿದ್ದರು. ಬಿಜೆಪಿ ಅಧಿಕಾರಕ್ಕಾಗಿ ಅಂಟಿಕೊಂಡಿಲ್ಲ. ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷಕ್ಕಿಂತಲೂ ದೇಶ ಮುಖ್ಯ. ಪಕ್ಷಕ್ಕಾಗಿ ಎಂಥಹ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂದು ಹೇಳಿದರು.
ಯಾವುದೇ ಹೋರಾಟಗಳಲ್ಲಿ ದಾವಣಗೆರೆ ದಕ್ಷಿಣ ಮಂಡಲ ಮುಂಚೂಣಿಯಲ್ಲಿ ಇರುತ್ತದೆ. ಆದರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಇದುವರೆಗೂ ವಿಧಾನಸಭೆ ಪ್ರವೇಶಿಸಲು ಸಾಧ್ಯವಾಗಿಲ್ಲ ಎಂಬ ಕೊರಗಿದೆ ಎಂದು ಹೇಳಿದರು.
ಮಾಜಿ ಶಾಸಕ ಶಿವರಾಜ ಸಜ್ಜನ್ ಮಾತನಾಡಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾರ್ವಜನಿಕರಿಗೆ ನೀಡಲಾದ ಯೋಜನೆಗಳು ಸಾಕಷ್ಟಿವೆ. ಸಾಧನೆಗಳನ್ನು ಪ್ರತಿ ಮನೆಗೆ ಪ್ರಚಾರ ಮಾಡುವಲ್ಲಿ ಮುಖಂಡರು, ಕಾರ್ಯಕರ್ತರು ಹಿಂದುಳಿದಿದ್ದೇವೆ. ವಾಜಪೇಯಿ ಅವರ ಚತುಷ್ಪಥ ಇತರೆ ಯೋಜನೆಗಳನ್ನು ಮನೆಗಳಿಗೆ ತಲುಪಿಸದ್ದರಿಂದಾಗಿ ಅವರು ಮರು ಪ್ರಧಾನಿಯಾಗಿ ಚುನಾಯಿತರಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶೂನ್ಯ ಖಾತೆಯ ಜನಧನ್ ಯೋಜನೆ ಜಾರಿಗೆ ಆರಂಭದಲ್ಲಿ ವಿಪಕ್ಷಗಳು ವಿರೋಧಗಳು ವ್ಯಕ್ತಪಡಿಸಿದ್ದವು. ಒಂದೇ ವರ್ಷದಲ್ಲಿ 58.15 ಕೋಟಿ ಖಾತೆಗಳು ಸೃಷ್ಟಿಯಾದವು. ಇದರಲ್ಲಿ 37.43 ಕೋಟಿ ಮಹಿಳೆಯರ ಖಾತೆಗಳಿವೆ. ಇದುವರೆಗೆ 3.02 ಲಕ್ಷ ಕೋಟಿ ರೂ. ಬ್ಯಾಂಕ್‌ಗಳಲ್ಲಿ ಠೇವಣಿಯಾಗಿದೆ. ಇದರಿಂದ ನೇರ ಖಾತೆಗೆ ಜಮೆ ಆಗಲು ಜನ್‌ಧನ್ ಕಾರಣವಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು 12 ವರ್ಷದ ಅವಧಿಯಲ್ಲಿ ಜಗತ್ತೇ ಭಾರತದತ್ತ ನೋಡುವುದರ ಜತೆಗೆ ಭಾರತ ಹೇಳಿದ್ದನ್ನು ಕೇಳುವಂತೆ ಮಾಡಿದ್ದಾರೆ. ಭ್ರಷ್ಟಾಚಾರರಹಿತ ಆಡಳಿತ ನೀಡಿದ್ದಾರೆ. ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿ ಕಾಣುವಂತಾಗಿದೆ.