‘ಸಂಕಲ್ಪ 2’ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಕ್ರಮವನ್ನು ಡಾ. ಎನ್. ಮಂಜುಳಾ ಉದ್ಘಾಟಿಸಿದರು. ಡಾ. ಪ್ರಭಾ ಮಲ್ಲಿಕಾರ್ಜುನ್, ಡಾ. ಬಿ.ಇ. ರಂಗಸ್ವಾಮಿ, ಮೋಹನ್ ಕುಮಾರ್ ಎಸ್, ವರುಣ್ ಗೌಡ, ವೀರೇಶ್ ಪಟೇಲ್ ಇದ್ದರು.
ದಾವಣಗೆರೆ :ಪ್ರತಿಯೊಬ್ಬರಲ್ಲೂ ಗುರಿ ಎಂಬ ದೀಪವಿರುತ್ತದೆ, ಅದು ಆರದಂತೆ ಕಾಪಾಡಿಕೊಂಡು ಯಶಸ್ಸಿನತ್ತ ಸಾಗಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಲಹೆ ನೀಡಿದರು.
ಎಸ್.ಎಸ್. ಕೇರ್ ಟ್ರಸ್ಟ್, ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಐಎಎಸ್ ಬಾಬಾ ಸಂಸ್ಥೆ ಸಹಯೋಗದಲ್ಲಿ ನಗರದ ಬಿಐಇಟಿ ಕಾಲೇಜಿನ ಎಸ್‌ಎಸ್ ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ‘ಸಂಕಲ್ಪ 2’ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಶಿಸ್ತು ಹಾಗೂ ನಿರಂತರ ಪರಿಶ್ರಮದೊಂದಿಗೆ ಕನಸುಗಳನ್ನು ಸಾಕಾರಗೊಳಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು ತರಗತಿಗಳಿಗೆ ನಿಯಮಿತವಾಗಿ ಹಾಜರಾಗಬೇಕು. ಸ್ವಯಂ ಅಧ್ಯಯನಕ್ಕೆ ಆದ್ಯತೆ ನೀಡಬೇಕು. ತಮ್ಮ ಸಾಮರ್ಥ್ಯ, ದೌರ್ಬಲ್ಯವನ್ನು ಪರೀಕ್ಷಿಸಿಕೊಂಡು ಅದಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಓದಿನ ಜತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ದಿನದಲ್ಲಿ ಸ್ವಲ್ಪ ಸಮಯವನ್ನು ನಮಗಾಗಿ ಮೀಸಲಿಡಬೇಕು. ಅನುಭವದ ಆಧಾರದಲ್ಲಿ ಸಂಕಲ್ಪ 2ನ್ನು ಇನ್ನಷ್ಟು ವಿದ್ಯಾರ್ಥಿ ಕೇಂದ್ರಿತವಾಗಿ ರೂಪಿಸಲಾಗುತ್ತಿದೆ ಎಂದರು.
ಸರ್ಕಾರಿ ಉದ್ಯೋಗಗಳಿಗೆ ಸಾಕಷ್ಟು ಅವಕಾಶಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಯೋಜಿತವಾಗಿ ಮತ್ತು ಸಮರ್ಪಕವಾಗಿ ಸಿದ್ಧತೆ ನಡೆಸಿದರೆ ವಿದ್ಯಾರ್ಥಿಗಳು ಯಶಸ್ಸು ಸಾಧಿಸಬಹುದು. ಬದಲಾಗುತ್ತಿರುವ ಜಾಗತಿಕ ಉದ್ಯೋಗ ಮಾರುಕಟ್ಟೆಗೆ ಅನುಗುಣವಾಗಿ ಕೌಶಲವರ್ಧನೆ ಮತ್ತು ಮರುಕೌಶಲ ತರಬೇತಿಗೂ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಇ. ರಂಗಸ್ವಾಮಿ, ಐಎಎಸ್ ಬಾಬಾ ಸಂಸ್ಥಾಪಕ ಮೋಹನ್ ಕುಮಾರ್ ಎಸ್, ಈ ಬಾರಿಯ ಯುಪಿಎಸ್ಸಿ ಪರೀಕ್ಷೆಯ ಸಾಧಕ ವರುಣ್ ಗೌಡ ಇದ್ದರು. ವೀರೇಶ್ ಪಟೇಲ್ ಸ್ವಾಗತಿಸಿದರು. ನಮನ ಅಕಾಡೆಮಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು.
ಅವಕಾಶಗಳನ್ನು ಬಾಚಿಕೊಳ್ಳಿ
ಸರ್ಕಾರಿ ಹುದ್ದೆಗಳು ಸೇರಿ ಅನೇಕ ಅವಕಾಶಗಳಿವೆ, ಅವುಗಳನ್ನು ಬಳಸಿಕೊಂಡು ಬದುಕು ರೂಪಿಸಿಕೊಳ್ಳಿ ಎಂದು ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಎನ್. ಮಂಜುಳಾ ವಿದ್ಯಾರ್ಥಿಗಳಿಗೆ ತಿಳಿಸಿದರು.
ರಾಜ್ಯ ಸರ್ಕಾರ ಸಾವಿರಾರು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ನೂರು ದಿನಗಳ ಕಾರ್ಯಕ್ರಮವನ್ನು ರೂಪಿಸಿದೆ. ಈ ಕುರಿತು ಸಿಎಂ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಘೋಷಣೆ ಮಾಡಿದ್ದಾರೆ. ಅದಲ್ಲದೇ ಬ್ಯಾಂಕಿಂಗ್ ಕ್ಷೇತ್ರ, ಯುಪಿಎಸ್‌ಸಿ, ಇತರ ರಾಜ್ಯಗಳಲ್ಲಿರುವ ಅವಕಾಶಗಳನ್ನೂ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳು ಇತರ ಪರೀಕ್ಷೆಗಳಂತೆ ಅಲ್ಲ. ಕೇವಲ ಪಾಸ್ ಆದರೆ ಸಾಲದು, ಟಾಪರ್ ಆಗುವ ಗುರಿ ಇರಬೇಕು. ಅದನ್ನು ಸಾಧಿಸುವ ತುಡಿತವಿರಬೇಕು. ಒಮ್ಮೆ ವಿಫಲವಾದರೂ ನಿರಾಸೆ ಬೇಡ, ಮರಳಿ ಯತ್ನ ಮಾಡಿ ಎಂದು ಹೇಳಿದರು.