ಹೆಚ್ಚಾಗಲಿ ಅನುದಾನ, ತಲುಪಲಿ ಸೌಲಭ್ಯ

ದಾವಣಗೆರೆ ಜಿ.ಪಂ. ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅಲ್ಪಸಂಖ್ಯಾತರ ಕುಂದುಕೊರತೆ ವಿಚಾರಣೆ ಸಭೆಯಲ್ಲಿ ಯು. ನಿಸಾರ್ ಅಹಮದ್ ಮಾತನಾಡಿದರು. ಗಿತ್ತೆ ಮಾಧವ ವಿಠ್ಠಲರಾವ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧಿಕಾರಿಗಳು ಇದ್ದರು.
ದಾವಣಗೆರೆ ಜಿ.ಪಂ. ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅಲ್ಪಸಂಖ್ಯಾತರ ಕುಂದುಕೊರತೆ ವಿಚಾರಣೆ ಸಭೆಯಲ್ಲಿ ಯು. ನಿಸಾರ್ ಅಹಮದ್ ಮಾತನಾಡಿದರು. ಗಿತ್ತೆ ಮಾಧವ ವಿಠ್ಠಲರಾವ್, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧಿಕಾರಿಗಳು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆಯೋಗದ ಮುಂದೆ ಅಹವಾಲು
  • ಅಲ್ಪಸಂಖ್ಯಾತರ ಕುಂದುಕೊರತೆ ವಿಚಾರಣೆ
ದಾವಣಗೆರೆ : ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಭಾಗದ ಅಲ್ಪಸಂಖ್ಯಾತರಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ. ಯೋಜನೆಗಳ ಬಗ್ಗೆ ಹಳ್ಳಿ ಜನರಿಗೆ ಹೆಚ್ಚಿನ ಅರಿವಿಲ್ಲ. ಸಮುದಾಯದ ಯುವಕರ ಕೌಶಲಾಭಿವೃದ್ಧಿಗೆ ಗಮನ ಹರಿಸಬೇಕು. ಸಮುದಾಯದ ಜನರಿಗೆ ಬ್ಯಾಂಕುಗಳಲ್ಲಿ ಸಮರ್ಪಕವಾಗಿ ಸಾಲ ಸಿಗಬೇಕು. ಸರ್ಕಾರ ಅನುದಾನದ ಪ್ರಮಾಣವನ್ನು ಹೆಚ್ಚಿಸಬೇಕು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಅಲ್ಪಸಂಖ್ಯಾತರ ಕುಂದುಕೊರತೆ ವಿಚಾರಣೆ ಸಭೆಯಲ್ಲಿ ಸಮುದಾಯದ ಜನರಿಂದ ವ್ಯಕ್ತವಾದ ಅಹವಾಲುಗಳಿವು.
ಸರ್ಕಾರ ನಿಗಮಕ್ಕೆ ನೀಡುತ್ತಿರುವ ಅನುದಾನ ಹೆಚ್ಚಿಸಬೇಕು, ಆ ಮೂಲಕ ಸಮುದಾಯಕ್ಕೆ ಹೆಚ್ಚು ಸೌಲಭ್ಯಗಳು ಸಿಗಬೇಕು. ಸರ್ಕಾರದಿಂದ ನೀಡುವ ಸಾಲ ಆಟೋ, ಟ್ಯಾಕ್ಸಿ ಮುಂತಾದ ವಾಹನಗಳನ್ನು ಕೊಳ್ಳಲು ಸೀಮಿತವಾಗದೇ, ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಸ್ಟಾರ್ಟಪ್, ಇನ್‌ಕ್ಯುಬೇಶನ್ ಸೆಂಟರ್‌ನಂಥ ತಂತ್ರಜ್ಞಾನ ಆಧಾರಿತ ಯೋಜನೆಗಳಿಗೆ ಆದ್ಯತೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿತು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಇರುವಂತೆ ಅಲ್ಪಸಂಖ್ಯಾತ ಕ್ರೀಡಾಪಟುಗಳಿಗೂ ಪ್ರೋತ್ಸಾಹಧನ ನೀಡಬೇಕು. ತರಬೇತಿ ಕಲ್ಪಿಸಿ ಉಪಕರಣ ಒದಗಿಸಬೇಕು ಎಂದು ಬೇಡಿಕೆ ವ್ಯಕ್ತವಾಯಿತು.
ಹಳ್ಳಿಗಳಲ್ಲಿ ಉರ್ದು ಶಾಲೆಗಳಿಗೆ ಜಾಗವಿಲ್ಲ. ಗ್ರಾಮ ಠಾಣೆ ವ್ಯಾಪ್ತಿಯನ್ನು ವಿಸ್ತರಿಸಬೇಕು. ಬಾಲಕ, ಬಾಲಕಿಯರಿಗಾಗಿ ಸಿಬಿಎಸ್‌ಇ ಶಾಲೆ ಆರಂಭಿಸಬೇಕು. ಮಂಡಕ್ಕಿ ಭಟ್ಟಿ ಕಾರ್ಮಿಕರಿಗೆ ಸೌಲಭ್ಯ ಒದಗಿಸಬೇಕು. ಶಾಲೆಗಳಿಗೆ ಶುದ್ಧ ಕುಡಿಯುವ ನೀರು ಸೇರಿ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಶಾಲೆಯಿಂದ ಹೊರಗುಳಿಯದಿರಲಿ

ಜಿಲ್ಲೆಯಲ್ಲಿ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಮಾಡುವ ಗುರಿ ಇದೆ ಎಂದು ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಹೇಳಿದರು.
ಅಲ್ಪಸಂಖ್ಯಾತ ಸಮುದಾಯದವರು ವಾಸಿಸುವ ಪ್ರದೇಶಗಳಲ್ಲಿ ಬಾಲಕಿಯರು ಶಾಲೆಯಿಂದ ಹೊರಗುಳಿಯುವುದು ಕಂಡುಬಂದಿದೆ. ಪಾಲಕರು ಹೆಣ್ಣು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ 143 ಸರ್ಕಾರಿ ಉರ್ದು ಶಾಲೆಗಳಿವೆ. 108 ಶಾಲೆಗಳಿಗೆ ಸ್ವಂತ ಕಟ್ಟಡವಿದೆ, 35 ಬಾಡಿಗೆ ಕಟ್ಟಡದಲ್ಲಿವೆ. ಶೀಘ್ರವೇ ಅವುಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಫಲಾನುಭವಿಗಳಿಗೆ ಸಾಲ ನೀಡುವಾಗ ಬ್ಯಾಂಕ್‌ನವರು ಭದ್ರತೆ ಕೇಳುವಂತಿಲ್ಲ. ಹಾಗೇನಾದರೂ ಮಾಡಿದರೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ದುಸ್ಥಿತಿಯ ಉರ್ದು ಶಾಲೆಗಳಿಗೆ ಕಾಯಕಲ್ಪ

ನಗರದ ಕೆಲವು ಸರ್ಕಾರಿ ಉರ್ದು ಶಾಲೆಗಳು ದುಸ್ಥಿತಿಯಲ್ಲಿದ್ದು ಅದನ್ನು ಸರಿಪಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್ ಹೇಳಿದರು.
ಬುಧವಾರ ಇಲ್ಲಿನ ಹಿಂದುಳಿದ, ಕೊಳಚೆ ಪ್ರದೇಶಗಳಲ್ಲಿರುವ ಅಂಗನವಾಡಿ ಮತ್ತು ಉರ್ದು ಶಾಲೆಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರದಲ್ಲಿ ನಾವು ಭೇಟಿ ನೀಡಿದ್ದ ಒಂದು ಉರ್ದು ಶಾಲೆಯಲ್ಲಿ ಪೀಠೋಪಕರಣಗಳಿಲ್ಲದೆ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಪಾಠ ಕೇಳುವ ಪರಿಸ್ಥಿತಿ ಇದೆ. ಛಾವಣಿ ಬೀಳುವ ಸ್ಥಿತಿಯಲ್ಲಿದೆ. ಶೌಚಗೃಹವಿಲ್ಲ ಎಂದು ತಿಳಿಸಿದರು.
ಯಾವಾಗಿನಿಂದ ಹೀಗಿದೆ, ಏಕೆ ಸರಿಪಡಿಸಿಲ್ಲ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜತೆಗೆ ಚರ್ಚಿಸಿ ಸರಿಪಡಿಸಲಾಗುವುದು. ಮಂಡಕ್ಕಿ ಭಟ್ಟಿಯ ಉರ್ದು ಶಾಲೆಯ ಸ್ಥಿತಿಯೂ ಚೆನ್ನಾಗಿಲ್ಲ. ಮಳೆ ಬಂದಾಗ ನೀರು ನುಗ್ಗುತ್ತದೆ. ಕೆಲವು ಶಾಲೆಗಳಿಗೆ ಕಾಂಪೌಂಡ್ ಇಲ್ಲ, ಕಟ್ಟಡಗಳು ಸರಿಯಾಗಿಲ್ಲ, ಅಪಾಯಕರ ಸ್ಥಿತಿ ಇದೆ. ಈ ಬಗ್ಗೆ ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಗಮನಕ್ಕೆ ತಂದಿರುವೆ. ಇನ್ನೊಂದು ಜೂನಿಯರ್ ಕಾಲೇಜಿನಲ್ಲಿ ಸ್ಮಾರ್ಟ್ ಕ್ಲಾಸ್, ಅತ್ಯುತ್ತಮ ಪ್ರಯೋಗಾಲಯ ಇರುವುದನ್ನೂ ಗಮನಿಸಿದ್ದೇವೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net