

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಇಡೀ ಜಿಲ್ಲೆ ಬರಪೀಡಿತ ಎಂದು ಘೋಷಣೆಯಾಗಿದೆ. ಭಾನುವಾರವಷ್ಟೇ ಕೇಂದ್ರದ ಅಧಿಕಾರಿಗಳ ತಂಡ ಜಿಲ್ಲೆಗೆ ಭೇಟಿ ನೀಡಿ ಬರ ಪರಿಸ್ಥಿತಿ ಅಧ್ಯಯನ ಮಾಡಿದೆ. ಈ ಪರಿಸ್ಥಿತಿಯಲ್ಲೂ ಅಲ್ಲೊಂದು, ಇಲ್ಲೊಂದು ಒಳ್ಳೆಯ ಸುದ್ದಿಗಳು ಕಿವಿಗೆ ಬೀಳುತ್ತಿವೆ. ದಾವಣಗೆರೆ ತಾಲೂಕಿನ ಆನಗೋಡು, ಮಾಯಕೊಂಡ ಹೋಬಳಿಗಳ ವಿವಿಧ ಗ್ರಾಮಗಳ ಜಮೀನುಗಳಲ್ಲಿ ಚಂಡು ಹೂವಿನ ಮೊಗ್ಗುಗಳು ರೈತರಲ್ಲಿ ಒಂದಷ್ಟು ಭರವಸೆ ಮೂಡಿಸಿವೆ. ನವರಾತ್ರಿ ವೇಳೆಗೆ ಹೂಗಳು ಅರಳಲಿದ್ದು, ಬಂಪರ್ ಇಳುವರಿ ಅಷ್ಟೇ ಅಲ್ಲ, ಬಂಪರ್ ಬೆಲೆಯ ಆಸೆಯನ್ನು ಮೂಡಿಸಿವೆ.
ಪ್ರಸಕ್ತ ರ‍್ಷದ ಮುಂಗಾರು ಹಂಗಾಮಿನ ಕನಿಷ್ಟ ಮಳೆಗಾಲದಲ್ಲೂ ರೈತರು ಬೋರ್‌ವೆಲ್ ಆಶ್ರಿತ ಜಮೀನುಗಳಲ್ಲಿ ಚಂಡು ಹೂವಿನ ಕೃಷಿ ಮಾಡಿದ್ದು, ಅವರ ನಿರೀಕ್ಷೆ ಹುಸಿಯಾಗಿಲ್ಲ. ಈಗಾಗಲೇ ಮೊಗ್ಗುಗಳು ಬಿಟ್ಟಿದ್ದು ದಸರಾ ವೇಳೆಗೆ ಹೂವು ಕಟಾವಿಗೆ ಬರಲಿವೆ.
ದಾವಣಗೆರೆ ತಾಲೂಕಿನ ವಿವಿಧ ಗ್ರಾಮಗಳ ರೈತರು ಸಣ್ಣ ಅಡಕೆ ಸಸಿಗಳ ಮಧ್ಯೆ, ಹಾಗೂ ಖಾಲಿ ಜಮೀನುಗಳಲ್ಲಿ 3 ಸಾವಿರ, ೫ ಸಾವಿರ, 10 ಸಾವಿರಗಳಷ್ಟು ಸಸಿ ನಾಟಿ ಮಾಡಿದ್ದಾರೆ. ಈಗಿನ ಸ್ಥಿತಿ ಗಮನಿಸಿದರೆ ಇಳುವರಿಯೂ ಬಂಪರ್ ಬರಬಹುದು. ಹಬ್ಬದ ಸಮಯವಾದ ಕಾರಣ ಬೆಲೆ ಕೂಡ ಬಂಪರ್ ಸಿಗುವ ಸಾಧ್ಯತೆ ಇದೆ. ಹೂವಿನ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಪ್ರಸ್ತುತ ಸಗಟು ದರ 45 ರಿಂದ 50 ರೂಗಳಿದ್ದು ದಸರಾ ಹಬ್ಬದ ಸಮಯಕ್ಕೆ 80 ರಿಂದ 100 ರೂ. ಗಡಿ ತಲುಪಬಹುದು ಎಂದು ರೈತರು ಅಂದಾಜು ಮಾಡಿದ್ದಾರೆ.
ತಾಲೂಕಿನ ಆನಗೋಡು ಮಾಯಕೊಂಡ ಅಣಜಿ ಹೋಬಳಿಗಳ ಹಲವು ಗ್ರಾಮಗಳ ರೈತರು ಬೋರ್‌ವೆಲ್ ಆಶ್ರಿತ ಭೂಮಿಯಲ್ಲಿ ತರಕಾರಿ, ಹಣ್ಣು, ಹೂವು ಬೆಳೆಯುತ್ತಿದ್ದಾರೆ. ಒಮ್ಮೊಮ್ಮೆ ತರಕಾರಿ ಬೆಲೆ ಕುಸಿದು ಕೈ ಸುಟ್ಟುಕೊಳ್ಳುವ ಪರಿಸ್ಥಿತಿ ಬಂದರೆ ಕೆಲವೊಮ್ಮೆ ಬಂಪರ್ ಬೆಲೆ ಸಿಗುತ್ತದೆ. ಕೆಲವು ದಿನಗಳ ಹಿಂದೆ ಟೊಮ್ಯಾಟೋ ಬೆಲೆ ಪಾತಾಳಕ್ಕೆ ಕುಸಿದಿದ್ದರೆ ಈಗ ಒಳ್ಳೆಯ ರೇಟ್ ಸಿಗುತ್ತಿದೆ.
ಚಂಡು ಹೂವು ಬೆಳೆಯಲು ದುಬಾರಿ ಖರ್ಚುಬರುತ್ತದೆ. 1 ಎಕರೆ ಪ್ರದೇಶದಲ್ಲಿ ಸುಮಾರು 8 ಸಾವಿರ ಸಸಿಗಳನ್ನು ನಾಟಿ ಮಾಡಲಾಗುತ್ತದೆ. ಪ್ರತಿ ಸಸಿಗೆ 2.50 ರೂ. ಬೆಲೆ ಇದ್ದು, ಒಂದು ಎಕರೆಗೆ ಒಟ್ಟು 40 ರಿಂದ 50 ಸಾವಿರ ಖರ್ಚು ಬರುತ್ತದೆ, ಉತ್ತಮ ದರ ಸಿಕ್ಕರೆ ಅಧಿಕ ಲಾಭ ಬರುತ್ತದೆ ಎನ್ನುತ್ತಾರೆ ರೈತರು. ಹುಚ್ಚವ್ವನಹಳ್ಳಿ ಯುವ ರೈತ ಹರೀಶ್ ಎಂಬುವರು 7 ಸಾವಿರ ಚಂಡು ಹೂವಿನ ಸಸಿ ನಾಟಿ ಮಾಡಿದ್ದು ಮುಂದಿನ ವಾರದ ದಸರಾ ಹಬ್ಬಕ್ಕೆ ಕಟಾವಿಗೆ ಬರಲಿವೆ. ಚಂಡು ಹೂವು ಬೆಳೆಯಲು 30 ಸಾವಿರ ಖರ್ಚು ಆಗಿದ್ದು ಉತ್ತಮ ದರ ಸಿಕ್ಕರೆ ಅಧಿಕ ಲಾಭ ಸಿಗುವ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ.