ಆನಗೋಡು ಹೋಬಳಿಯ ಹೆಬ್ಬಾಳು ಗ್ರಾಮದಲ್ಲಿ ಮಹಾಂತರುದ್ರೇಶ್ವರ ವಿರಕ್ತಮಠದ ಗೋಶಾಲೆಯ ಜಾನುವಾರಗಳಿಗೆ ಹೆಬ್ಬಾಳು ಪಶು ಚಿಕಿತ್ಸಾಲಯದಿಂದ ಕಾಲುಬಾಯಿ ಲಸಿಕಾ ಚುಚ್ಚುಮದ್ದು ನೀಡಲಾಯಿತು. ಡಾ. ಎನ್ ಮಂಜುನಾಥ್, ಜಿ.ಎಸ್. ನರೇಶ್ವರ್, ಟಿ.ಕೆ. ಲೋಕೇಶ್ವರ್, ಬಿ. ದ್ಯಾಮಪ್ಪ ಇದ್ದರು.
ಮಾಯಕೊಂಡ: ಜಾನುವಾರುಗಳಿಗೆ ಕಡ್ಡಾಯವಾಗಿ ಕಾಲುಬಾಯಿ ರೋಗ ನಿರೋಧಕ ಚುಚ್ಚುಮದ್ದು ಹಾಕಿಸಬೇಕು ಎಂದು ಹೆಬ್ಬಾಳು ಪಶು ಚಿಕಿತ್ಸಾಲಯದ ಹಿರಿಯ ಮತ್ತು ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎನ್. ಮಂಜುನಾಥ್ ರೈತರಿಗೆ ಸಲಹೆ ನೀಡಿದರು.
ಹೆಬ್ಬಾಳು ಗ್ರಾಮದಲ್ಲಿ ಬುಧವಾರ ಹೆಬ್ಬಾಳು ಶ್ರೀ ಮಹಾಂತರುದ್ರೇಶ್ವರ ವಿರಕ್ತಮಠದ ಗೋಶಾಲೆಯ ಜಾನುವಾರುಗಳಿಗೆ ಕಾಲುಬಾಯಿ ಚುಚ್ಚುಮದ್ದು ನೀಡಿ ಮಾತನಾಡಿ, ದನಕರುಗಳಿಗೆ ಬರುವ ಮಾರಣಾಂತಿಕ ರೋಗಗಳು ಮತ್ತು ಅವುಗಳ ನಿವಾರಣೆಗೆ ನೀಡುವ ಲಸಿಕೆ ಬಗ್ಗೆ ಮಾಹಿತಿ ನೀಡಿದರು.
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ನ.31 ರಿಂದ ಡಿ.2ರವರೆಗೆ ನಡೆಯಲಿರುವ 8ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನದಲ್ಲಿ ಹೆಬ್ಬಾಳು ಪಶು ಚಿಕಿತ್ಸಾ ಕೆಂದ್ರ ಹಾಗೂ ಸಮೀಪದ ಹಾಲವರ್ತಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದಿಂದ ಲಸಿಕೆ ನೀಡಲಾಗುತ್ತದೆ ಎಂದರು.
8-9 ತಿಂಗಳಿನ ಗರ್ಭ ಧರಿಸಿದ ಹಸು- ಎಮ್ಮೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ರಾಸುಗಳಿಗೆ ಕಡ್ಡಾಯವಾಗಿ ಚುಚ್ಚುಮದ್ದು ನೀಡಲಾಗುತ್ತದೆ. ಹುಚ್ಚುನಾಯಿ ಕಡಿತದಿಂದ ಬರುವ ರೇಬೀಸ್ ಮತ್ತು ಚರ್ಮಗಂಟು ರೋಗನಿರೋಧಕ ಲಸಿಕೆ ನೀಡಲಾಗಿದೆ. ರಾಸುಗಳಿಗೆ ಯಾವುದೇ ಕಾಯಿಲೆಗಳು ಕಂಡುಬಂದಲ್ಲಿ ಕೂಡಲೇ ಪಶು ಆಸ್ಪತ್ರೆಗೆ ಭೇಟಿ ನೀಡಿ ಚುಚ್ಚುಮದ್ದು ಕೊಡಿಸಬೇಕು ಎಂದು ತಿಳಿಸಿದರು.
ಹೆಬ್ಬಾಳು ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ ಮಾತನಾಡಿ, ರಾಸುಗಳಿಗೆ ತಗಲುವ ಮಾರಕ ಕಾಯಿಲೆಗಳನ್ನು ನಿಯಂತ್ರಿಸಲು ಪಶು ವೈದ್ಯಕೀಯ ಇಲಾಖೆ ಹಲವಾರು ಸೂಕ್ಷ್ಮ ಚುಚ್ಚುಮದ್ದುಗಳನ್ನು ನೀಡುತ್ತಿದೆ ಎಂದರು.
ಚುಚ್ಚುಮದ್ದು ನೀಡುವ ತಂಡದಲ್ಲಿ ಹೆಬ್ಬಾಳು ಹಿರಿಯ ಪಶು ವೈದ್ಯಕೀಯ ಪರೀಕ್ಷಕರಾದ ಜಿ.ಎಸ್. ನರೇಶ್ವರ್, ಟಿ.ಕೆ. ಲೋಕೇಶ್ವರ್, ಬಿ. ದ್ಯಾಮಪ್ಪ, ಕಿರಿಯ ಪಶು ವೈದ್ಯಕೀಯ ಪರೀಕ್ಷಕ ರಾಜೇಶ್, ಸಿಬ್ಬಂದಿಯಾದ ಸಿದ್ದಪ್ಪ, ಕೆ.ಎಸ್. ಲೋಕೇಶ್, ಕೆಬಿ ರುದ್ರೇಶ್ ಮಹಾಂತೇಶ್ ಹಾಗೂ ರೈತರು ಇದ್ದರು.