ಕಳೆಗಟ್ಟಿದ ಬಸಾಪುರದ ಮಹೇಶ್ವರ ಸ್ವಾಮಿ ಜಾತ್ರೆ

  ದಾವಣಗೆರೆ ಹೊರವಲಯದ ಬಸಾಪುರ ಜಾತ್ರೆಯಲ್ಲಿ ಪೂಜಾ ಬಾವಿಗೆ ಬಾಳೆಹಣ್ಣಿನ ಚಿಪ್ಪನ್ನು ಬಿಟ್ಟಿರುವುದು.
ದಾವಣಗೆರೆ ಹೊರವಲಯದ ಬಸಾಪುರ ಜಾತ್ರೆಯಲ್ಲಿ ಪೂಜಾ ಬಾವಿಗೆ ಬಾಳೆಹಣ್ಣಿನ ಚಿಪ್ಪನ್ನು ಬಿಟ್ಟಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಅನ್ನ ಪ್ರಸಾದಕ್ಕೆ 25 ಕ್ವಿಂ. ಅಕ್ಕಿ, 2 ಕ್ವಿಂ. ಬೇಳೆ ಬಳಕೆ
  • ಗದ್ದಿಗೆ ದರ್ಶನ ಪಡೆಯುವ 25 ಸಾವಿರ ಭಕ್ತರ ದಂಡು
  • ದಾನದ ಊರಿನಲ್ಲಿ ದಾನಿಗಳ ದೇಣಿಗೆಯ ಮಹಾಪೂರ
ದಾವಣಗೆರೆ: ಜಿಲ್ಲೆಯ ವಿವಿಧೆಡೆ ಮಂಗಳವಾರ ಮಹೇಶ್ವರ ಸ್ವಾಮಿ ಜಾತ್ರೆ ಸಡಗರ ಶುರುವಾಗಿದೆ. ದೇವರ ರಥೋತ್ಸವ ನಡೆಯುವ ಹಾಗೂ ಬೆಂಡು-ಬತ್ತಾಸು, ಮಂಡಕ್ಕಿ-ಖಾರಾ ಖರೀದಿಯ ಜಾತ್ರೆ ಇದಲ್ಲ. ಬದಲಾಗಿ ಮಹೇಶ್ವರ ಸ್ವಾಮಿಯ ಭಕ್ತಿ ಹೆಸರಲ್ಲಿ ನಡೆಯುವ ಅನ್ನದ ಜಾತ್ರೆಯಿದು.
ನಗರದ ಹೊರವಲಯದ ಬಸಾಪುರ ಗ್ರಾಮದಲ್ಲೂ ಐತಿಹಾಸಿಕ ಜಾತ್ರೆ ಸದ್ದು ಮಾಡಿದೆ. ಪುಷ್ಪಾಲಂಕೃತ, ಇಲ್ಲಿನ ಮಹೇಶ್ವರ ಸ್ವಾಮಿ ಗದ್ದಿಗೆ ಭಕ್ತರನ್ನು ಆಕರ್ಷಿಸುತ್ತಿದೆ. ಅವಿಭಜಿತ ಚಿತ್ರದುರ್ಗ ಜಿಲ್ಲೆ ಇದ್ದಾಗಿನಿಂದಲೂ ಚಾಲ್ತಿಯಲ್ಲಿರುವ ಈ ಜಾತ್ರೆಯಲ್ಲಿ ವಿವಿಧೆಡೆಗಳಿಂದ ಭಕ್ತರ ದಂಡು ಹರಿದುಬರುತ್ತದೆ.
ಕಾರ್ತಿಕ ಮಾಸದ ಎರಡು ದಿನದ ಜಾತ್ರೆಯಲ್ಲಿ 25ರಿಂದ 30 ಸಾವಿರ ಭಕ್ತರು ಭಾಗಿಯಾಗಿ ಪ್ರಸಾದ ಸವಿಯುತ್ತಾರೆ. ಜಾತ್ರೆಗೆ ಬೇಕಾದ ಧಾನ್ಯ, ತರಕಾರಿ, ಹಾಲು ಎಲ್ಲವನ್ನೂ ಜನರೇ ದಾನವಾಗಿ ನೀಡುತ್ತಾರೆ. ಅಂಗಡಿ ಕುಟುಂಬದವರು ಗ್ರಾಮದ ಹೊರವಲಯದಲ್ಲಿ ಅಂಗಡಿ ಬಸವಲಿಂಗಪ್ಪ, ಅಂಗಡಿ ಕೆಂಚಬಸಪ್ಪ ಅವರ ಜಮೀನಿನಲ್ಲಿ ಮೀಸಲಿಟ್ಟ 1.5 ಎಕರೆ ವಿಸ್ತೀರ್ಣದ ಜಾಗದಲ್ಲಿ ಅನ್ನ ಪ್ರಸಾದ ಬಡಿಸಲಾಗುತ್ತದೆ.
ತಗುಲುವ ವೆಚ್ಚವೇ 4 ಲಕ್ಷ ರೂ.
ದಾವಣಗೆರೆ ಅಲ್ಲದೆ ಅಕ್ಕಪಕ್ಕದ ಗ್ರಾಮಸ್ಥರು ಬಾಳೆಎಲೆಯಿಂದ ಹಿಡಿದು ಜಾತ್ರೆಗೆ ಬೇಕಾದ ಧಾನ್ಯ, ತರಕಾರಿ ಮೊದಲಾದವನ್ನು ದಾನವಾಗಿ ನೀಡುತ್ತಾರೆ. ಎರಡು ದಿನದಲ್ಲಿ ಸುಮಾರು 25 ಕ್ವಿಂಟಾಲ್ ಅಕ್ಕಿ, 3.5 ಕ್ವಿಂ. ಬೋರಾ ಸಕ್ಕರೆ (ಬೆಲ್ಲದ ಪುಡಿ), 2 ಕ್ವಿಂ. ತೊಗರಿಬೇಳೆ, 1500 ಲೀ. ಹಾಲು ಬಳಕೆಯಾಗುತ್ತದೆ.
ಮೊದಲೆಲ್ಲ ಅಡುಗೆ ಅನಿಲ ಬಳಸಿ ಅಡುಗೆ ತಯಾರಿಸಲಾಗುತ್ತಿತ್ತು. ಈಗೆಲ್ಲ ಉರುವಲು ಕಟ್ಟಿಗೆ ಬಳಸಲಾಗುತ್ತಿದ್ದು ಈ ಬಾರಿ 16 ಟನ್ ಪ್ರಮಾಣದ ಕಟ್ಟಿಗೆ ಸಂಗ್ರಹಿಸಲಾಗಿದೆ. ಅನ್ನ-ಸಾರು ತಯಾರಿಸುವ ಕೆಲವು ದೊಡ್ಡ ಪಾತ್ರೆಗಳನ್ನು ಸಮಿತಿ ಸ್ವಂತವಾಗಿ ಹೊಂದಿದೆ. ರೈತರೇ ನೇರವಾಗಿ ಡೇರಿಗೆ ಹಾಕಬೇಕಾದ ಹಾಲನ್ನು ಇಲ್ಲಿಗೆ ಧಾರೆ ಎರೆಯುತ್ತಾರೆ. ಸಮಿತಿಯವರೇ ಹೇಳುವಂತೆ ಒಂದು ಜಾತ್ರೆಗೆ 3ರಿಂದ 4 ಲಕ್ಷ ರೂ. ವೆಚ್ಚವಾಗಲಿದೆ.
ಎರಡು ಬಾಳೆಚಿಪ್ಪಿನ ಕಥೆ
ಈ ಜಾತ್ರೆಯಲ್ಲೊಂದು ವಿಶೇಷತೆ ಇದೆ. ಜಾತ್ರೆಯ ಮೊದಲದಿನ, ಪ್ರತೀತಿಯಂತೆ ಜಂಗಮರ ಪೂಜೆ ಬಳಿಕ ಜಂಗಮರ ಕಡೆಯವರು ಸ್ವಾಮಿಯ ಗದ್ದಿಗೆ ಸಮೀಪದ ಪೂಜಾ ಬಾವಿಯಲ್ಲಿ ಮುಳುಗೇಳುತ್ತಾರೆ.
ಇದೇ ವೇಳೆ ಬಾವಿಗೆ ಬಾಳೆಹಣ್ಣಿನ ಎರಡು ಚಿಪ್ಪನ್ನು ನೀರಿಗೆ ಬಿಡಲಾಗುತ್ತದೆ. ಎರಡೂ ಮುಳುಗಿದರೆ ಅನರ್ಥವಾಗಲಿದೆ, ಒಂದು ಅಥವಾ ಎರಡು ಮೇಲೆದ್ದರೆ ಒಳಿತಾಗಲಿದೆ ಎಂಬ ನಂಬಿಕೆ ಇದೆ. ಈ ಸಲ ಎರಡೂ ಚಿಪ್ಪು ಮೇಲೆ ತೇಲಿದವು ಎಂದು ಟ್ರಸ್ಟ್‌ನ ಟ್ರಸ್ಟಿ ಆಲದಹಳ್ಳಿ ಸಿದ್ದರಾಮೇಶ್ವರ ವಿವರಿಸಿದರು.
ಸೋಮವಾರ ಸಂಜೆ ವಾಡಿಕೆಯಂತೆ ಬಸಾಪುರದ ಗುರು ಸಿದ್ದೇಶ್ವರರ ಕಾರ್ತಿಕ ತರುವಾಯ, ಆನೆಕೊಂಡದ ಬಸವೇಶ್ವರ ಸ್ವಾಮಿ, ಹಾಲಸ್ವಾಮಿ, ಗುರುಸಿದ್ದೇಶ್ವರ ಸ್ವಾಮಿ ಉತ್ಸವಮೂರ್ತಿಗಳನ್ನು ಹಾಗೂ ಜಾತ್ರೆಗೆ ಬೇಕಾದ ಎಲ್ಲ ಸರಂಜಾಮುಗಳನ್ನು ಪಲ್ಲಕ್ಕಿ ಮೂಲಕ ಮಹೇಶ್ವರ ಸ್ವಾಮಿಯ ಗದ್ದಿಗೆ ಇರುವ ಸ್ಥಳಕ್ಕೆ ತರಲಾಯಿತು.
ಪ್ರತಿ ವರ್ಷ ನಡೆಯುವ ಜಾತ್ರೆಗೆ ಕೆಲವು ದಿನಗಳ ಮುನ್ನವೇ ಸಿದ್ಧತೆ ನಡೆಯುತ್ತದೆ. ಅಲ್ಲಿನ ಕಳೆ ಸ್ವಚ್ಛಗೊಳಿಸಿ ಔಷಧ ಸಿಂಪಡಣೆ ಮಾಡಿ ನೆಲಕ್ಕೆ ಸಗಣಿಯಿಂದ ಸಾರಿಸಲಾಗುತ್ತದೆ. ಇದೇ ನೆಲದ ಮೇಲೆಯೇ ಪ್ರತಿಬಾರಿ ಪ್ರಸಾದ ವಿತರಣೆ ಕಾರ್ಯ ನಡೆಯುತ್ತ ಬಂದಿದೆ. ಜಾತ್ರೆ ಮುಗಿದ ನಂತರದಲ್ಲಿ ರಾತ್ರಿಯಿಡೀ ಮೆರವಣಿಗೆ ಆನೆಕೊಂಡ ಗ್ರಾಮಕ್ಕೆ ಬಸವೇಶ್ವರ ಸ್ವಾಮಿಯನ್ನು ಕಳುಹಿಸಲಾಗುತ್ತದೆ.
ರಾತ್ರಿ 9ರವರೆಗೂ ಅನ್ನದಾನ
ಮೊದಲ ದಿನ (ಮಂಗಳವಾರ) ಬೆಳಗ್ಗೆ 7-30ರಿಂದ ಅನ್ನ-ಹಾಲು, ಬಾಳೆಹಣ್ಣು, ಬೋರಾ ಸಕ್ಕರೆ ಪ್ರಸಾದ ವ್ಯವಸ್ಥೆ ಇತ್ತು. ಬೆಳಗ್ಗೆ 7-30ರಿಂದ ರಾತ್ರಿ 9ರವರೆಗೂ ಈ ಸೇವೆ ನಡೆಯಿತು. ಪೂಜಾಬಾವಿಯಲ್ಲಿ ಮುಖ ತೊಳೆದ ಭಕ್ತರು ಗದ್ದಿಗೆ ಕಟ್ಟೆಗೆ ಬಂದು, ದೇವರುಗಳಿಗೆ ನಮಸ್ಕರಿಸಿ, ವಿಭೂತಿ ಧರಿಸಿ ಪ್ರಸಾದಕ್ಕೆ ಅಣಿಯಾಗುತ್ತಾರೆ. ಇದೇ ವೇಳೆ ಭಕ್ತರಿಗೆ ದಾನಿಗಳು ರುದ್ರಾಕ್ಷಿಗಳನ್ನು ವಿತರಿಸುತ್ತಾರೆ. ಸಣ್ಣ ಮಕ್ಕಳಿಂದ ಹಿಡಿದು 50 ವರ್ಷದವರೆಗಿನವರೂ ಭಾಗಿಯಾಗಿ ಸ್ವಯಂಪ್ರೇರಿತವಾಗಿ ವಿವಿಧ ಸೇವೆ ಸಲ್ಲಿಸುತ್ತಾರೆ.
ಬುಧವಾರ ಬೆಳಗ್ಗೆ 11ರಿಂದ ಅನ್ನ-ಸಾಂಬಾರು, ಮಜ್ಜಿಗೆ ಸಾರು ಪ್ರಸಾದ ಇರಲಿದೆ. ಜಾತ್ರೆ ಸ್ಥಳದಲ್ಲೇ ಬೀಡುಬಿಟ್ಟ ಗೂಡಂಗಡಿಗಳಿಂದ ಹತ್ತಿಕಾಯಿ-ಮೆಣಸಿನಕಾಯಿ ಖರೀದಿಸಿ ತಂದು ಒಟ್ಟಿಗೆ ಸೇವಿಸುತ್ತಾರೆ. ಇದರ ಜತೆಗೆ ಬೀಡಾ, ಸೋಡಾ, ಪಾನಿಪುರಿ, ಐಸ್‌ಕ್ರೀಂ ಮಾರಾಟಗಾರರು ಇಲ್ಲಿ ಕಾಣಸಿಗುತ್ತಾರೆ.

ಎಸ್ಸೆಸ್ ಇಲ್ಲದ ಜಾತ್ರೆ! ಬಸಾಪುರ ಮಹೇಶ್ವರ ಸ್ವಾಮಿ ಎಂದರೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರಿಗೆ ಭಾರೀ ಭಕ್ತಿ. ವಿಧಾನಸಭೆ ಕಲಾಪ ಇದ್ದರೂ ಹೆಲಿಕಾಪ್ಟರ್ ಮೂಲಕ ಬಂದಾದರೂ ಒಂದು ದಿನ ಪ್ರಸಾದ ಸೇವಿಸುತ್ತಿದ್ದರು. ಈ ಬಾರಿ ಅವರಿಲ್ಲದೆ ಜಾತ್ರೆ ನಡೆಯುತ್ತಿದೆ ಎಂಬುದೇ ವಿಷಾದದ ಸಂಗತಿ.

ನಾನು ದಾವಣಗೆರೆ ಮೂಲದ ಕಲಾವಿದ. ಬೆಂಗಳೂರಿನಲ್ಲಿ ವಾಸವಿದ್ದರೂ ಬಸಾಪುರ ಮಹೇಶ್ವರ ಜಾತ್ರೆಗೆ ಕೆಲವು ವರ್ಷದಿಂದ ಬರುತ್ತಿದ್ದೇನೆ. ಇಲ್ಲಿ ಅಚ್ಚುಕಟ್ಟಾದ ಪ್ರಸಾದ ವ್ಯವಸ್ಥೆ ಇರುತ್ತದೆ. ದೇವರ ಮೇಲೆ ಜನರಿಗೆ ಭಕ್ತಿ-ನಂಬಿಕೆ ಉಳಿದಿದೆ ಎಂಬುದಕ್ಕೆ ಇಲ್ಲಿ ಬರುವ ಜನರ ಸಂಖ್ಯೆಯೇ ಸಾಕ್ಷಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net