ಮಾದಿಗ ಸಮಾಜಕ್ಕೆ ಬೇಕು ಶೈಕ್ಷಣಿಕ ಜಾಗೃತಿ

ದಾವಣಗೆರೆ ಜಿಲ್ಲಾ ಮಾದಿಗ ಮಹಾಸಭಾದಿಂದ ಸೋಮವಾರ, ಎಸ್ಸೆಸ್ಸೆಲ್ಸಿ-ಪಿಯುನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಷಡಕ್ಷರಿಮುನಿ ದೇಶೀಕೇಂದ್ರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಬಿ.ಎಚ್. ವೀರಭದ್ರಪ್ಪ, ಎಲ್.ಎಂ. ಹನುಮಂತಪ್ಪ, ರವಿನಾರಾಯಣ್, ಹಲಗೇರಿ ಮಂಜಪ್ಪ ಇದ್ದರು.
ದಾವಣಗೆರೆ ಜಿಲ್ಲಾ ಮಾದಿಗ ಮಹಾಸಭಾದಿಂದ ಸೋಮವಾರ, ಎಸ್ಸೆಸ್ಸೆಲ್ಸಿ-ಪಿಯುನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಷಡಕ್ಷರಿಮುನಿ ದೇಶೀಕೇಂದ್ರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಬಿ.ಎಚ್. ವೀರಭದ್ರಪ್ಪ, ಎಲ್.ಎಂ. ಹನುಮಂತಪ್ಪ, ರವಿನಾರಾಯಣ್, ಹಲಗೇರಿ ಮಂಜಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಳ ಸಮುದಾಯದ ಶರಣರಿಂದ ಸಾಮಾಜಿಕ ಕ್ರಾಂತಿ
  • ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಸ್ವಾಮೀಜಿ ಅನಿಸಿಕೆ
  • ಮಹಾಸಭಾದಿಂದ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ
ದಾವಣಗೆರೆ: ಮಾದಿಗ ಸಮುದಾಯದಲ್ಲಿ ಎಸ್ಸೆಸ್ಸೆಲ್ಸಿ, ಪಿಯು ತೇರ್ಗಡೆ ಆಗುವವರ ಸಂಖ್ಯೆ ತೀರಾ ಕಡಿಮೆ ಇದೆ. ಹೀಗಾಗಿ ಶಿಕ್ಷಣದ ಮಹತ್ವವನ್ನು ಸಮಾಜ ಗ್ರಹಿಸಬೇಕಿದೆ ಎಂದು ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ದಾವಣಗೆರೆ ಜಿಲ್ಲಾ ಮಾದಿಗ ಮಹಾಸಭಾದಿಂದ ಇಲ್ಲಿನ ಜಗದ್ಗುರು ಜಯದೇವ ಸಾಂಸ್ಕೃತಿಕ ಭವನದಲ್ಲಿ ಸೋಮವಾರ, ಎಸ್ಸೆಸ್ಸೆಲ್ಸಿ-ಪಿಯುನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಾಲಕರು ಮಕ್ಕಳನ್ನು ಕೂಲಿ ಇತರೆ ಕೆಲಸಗಳಿಗೆ ಕಳುಹಿಸದೆ ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಮನೆಯಲ್ಲೂ ಓದಲು ಉತ್ತೇಜಿಸಬೇಕು. ಇಲ್ಲವಾದಲ್ಲಿ ಅವರು ಜೀತದಾಳಾಗಿ ಬದುಕುವ ವಾತಾವರಣ ನಿರ್ಮಾಣವಾಗುತ್ತದೆ. ಮಕ್ಕಳ ಸ್ವಾವಲಂಬಿ ಹಾಗೂ ಗೌರವದ ಜೀವನಕ್ಕೆ ಶಿಕ್ಷಣ ಅನಿವಾರ್ಯ. ಉತ್ತಮ ಸಂಸ್ಕಾರ ಕೂಡ ಸಮಗ್ರ ಅಭಿವೃದ್ಧಿಗೆ ಸಹಕರಿಸಲಿದೆ ಎಂದು ಹೇಳಿದರು.
ಜ್ಞಾನದ ಬಲದಿಂದ ಅಜ್ಞಾನದ ಕೇಡನ್ನು ಅಳಿಸಬಹುದೆಂದು ಬಸವಣ್ಣ ಸಾರಿದ್ದಾರೆ. ಹೊನ್ನು, ಹೆಣ್ಣು, ಮಣ್ಣು ಬದಲಾಗಿ ಗಳಿಸುವ ಜ್ಞಾನ ರತ್ನವೇ ನಿಜವಾದ ಸಂಪತ್ತು ಎಂಬುದಾಗಿ ಅಲ್ಲಮ ಪ್ರಭುಗಳು ಹೇಳಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸುವ ದೃಢಸಂಕಲ್ಪದೊಂದಿಗೆ ಅವರಲ್ಲಿನ ಸಾಹಿತ್ಯ, ಸಂಗೀತ, ಕಲಾ ಪ್ರತಿಭೆಗೆ ಪ್ರೋತ್ಸಾಹಿಸಿ. ಆಗ ಅವರು ಅಂಬೇಡ್ಕರರಂತೆ ಜಗತ್ತಿನಲ್ಲಿ ತಲೆಯೆತ್ತಿ ಬಾಳುತ್ತಾರೆ ಎಂದರು.
12ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿ ತಳಸಮುದಾಯದ ಶರಣದಿಂದಲೇ ಯಶಸ್ವಿಯಾಗಿದೆಯೇ ಹೊರತಾಗಿ ಮೇಲ್ವರ್ಗದವರಿಂದಲ್ಲ. ಬಸವಣ್ಣನವರು ದಲಿತ, ತಳ ಸಮುದಾಯದವರಿಗೆ ಗೌರವದ ಜತೆಗೆೆ ಅನುಭವಮಂಟಪ ಮೂಲಕ ಸಮಾನತೆಯ ಅವಕಾಶ ಕಲ್ಪಿಸಿಕೊಟ್ಟರು ಎಂದರು.
ಸಮಾಜದಲ್ಲಿನ್ನೂ ಜಾತಿ ಮನೋಭಾವನೆ ಉಳಿದಿದೆ. ಇದರಿಂದ ಬಡವ-ಶ್ರೀಮಂತರ ನಡುವಿನ ಕಂದಕ ಹೆಚ್ಚಾಗುತ್ತಿದೆ. ವಿದ್ಯಾವಂತರು ಅವಿದ್ಯಾವಂತರನ್ನು ಉಪೇಕ್ಷೆ ಮಾಡುತ್ತಿದ್ದಾರೆ. ಅನೇಕರು ರಾಜಕೀಯ ಸ್ಥಾನಮಾನಗಳಿಂದ ವಂಚಿತರಾಗುತ್ತಿದ್ದಾರೆ ಎಂದೂ ಅವರು ವಿಚಾದಿಸಿದರು.
ಯಾವುದೇ ಸಮುದಾಯದ ಪ್ರಗತಿ,ಯಶಸ್ಸಿಗೆ ಸಂಘಟನೆ, ಶಿಸ್ತು ಮತ್ತು ಅಧ್ಯಯನ ಅತ್ಯಂತ ಅತ್ಯಗತ್ಯ. ಇವುಗಳಿಲ್ಲದೆ ಅಭಿವೃದ್ಧಿ ಕಾಣಲಾಗದು. ಬಸವಣ್ಣನ ನಂತರ ಅಂಬೇಡ್ಕರ್ ಅವರು ಸಮಾಜದ ಜಾಗೃತಿ ಹಾಗೂ ಕ್ರಾಂತಿ ಕೆಲಸ ಮುಂದುವರಿಸಿದರು. ಎಲ್ಲಾ ಜಾತಿಗಳ ನೋವು ಅನುಭವಿಸಿದ ಕಾರಣಕ್ಕೆ ಅವರು ಸಮಾಜ ಸುಧಾರಣೆಗೆ ಶ್ರಮಿಸುವಂತಾಯಿತು ಎಂದು ಅಭಿಪ್ರಾಯಪಟ್ಟರು.
ಸಮಾಜಕ್ಕೆ ಒಬ್ಬ ಸಮರ್ಥ ಸಂಘಟಕನ ಅವಶ್ಯಕತೆ ಇರುತ್ತದೆ. ಹಣ ನೀಡುವುದು ಸುಲಭ. ಆದರೆ ಜನರನ್ನು ಒಟ್ಟುಗೂಡಿಸಿ ಸಂಘಟನೆ ಮಾಡುವುದು ಕಷ್ಟದ ಕೆಲಸ. ಸಂಘಟಕರನ್ನು ಹೊಗಳುವ, ತೆಗಳುವ ಜನರಿದ್ದಾರೆ. ಆದರೆ ನಿಜವಾದ ನಾಯಕ ತನ್ನ ಗುರಿ ಮರೆಯದೆ, ಸಮಾಜದ ಅಗತ್ಯ ಪೂರೈಸುವತ್ತ ಸಾಗಬೇಕು ಎಂದರು.
ಜನರ ಬಯಕೆ ಈಡೇರಿಸುವವನಷ್ಟೇ ನಾಯಕನಲ್ಲ, ಜನರಿಗೆ ಏನನ್ನು ನೀಡಬೇಕು ಎಂದು ಯೋಚಿಸಿ ದೂರದೃಷ್ಟಿಯಿಂದ ಕೆಲಸ ಮಾಡುವವನೇ ನಿಜವಾದ ಮುಖಂಡ. ಇಂದು ಅಂತಹ ನಾಯಕರ ಕೊರತೆ ಎದ್ದು ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹಾಸಭಾದ ಗೌರವಾಧ್ಯಕ್ಷ ಪಿ.ರವಿನಾರಾಯಣ್ ಪ್ರಾಸ್ತಾವಿಕ ಮಾತನಾಡಿ, ಅತಿ ಹೆಚ್ಚು ಜನಸಂಖ್ಯೆಯುಳ್ಳ ಮಾದಿಗ ಸಮಾಜ, ಶೋಷಣೆಯಿಂದ ಮುಕ್ತಿ ಪಡೆದಿಲ್ಲ. ಶೋಷಣೆ ಮುಕ್ತಿಗೆ ಶಿಕ್ಷಣವೇ ಅಸ್ತ್ರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಕೋಡಿಹಳ್ಳಿ ಮಠದ ಶ್ರೀ ಷಡಕ್ಷರಿಮುನಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಜಿಲ್ಲಾ ಮಾದಿಗ ಮಹಾಸಭಾ ಅಧ್ಯಕ್ಷ ಬಿ.ಎಚ್.ವೀರಭದ್ರಪ್ಪ, ಉಪಾಧ್ಯಕ್ಷ ಎಲ್.ಎಂ. ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಹೆಗ್ಗೆರೆ ರಂಗಪ್ಪ, ಸಂಘಟನಾ ಕಾರ್ಯದರ್ಶಿ ಎಲ್.ಎಚ್. ಸಾಗರ್, ಜಿ.ರಾಕೇಶ್, ಸುರೇಶ್ ಕುಣಿಬೆಳಕೆರೆ, ಜಿ. ರಾಕೇಶ್, ಹಲಗೇರಿ ಮಂಜಪ್ಪ, ಮಲ್ಲೇಶ್, ಎಸ್. ಮಲ್ಲಿಕಾರ್ಜುನ್, ಪರಶುರಾಂ ದೊಡ್ಮನಿ, ಜಿ.ಆರ್. ಶಿವಮೂರ್ತಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net