ಹೆಚ್ಚು ಅವಧಿಯ ದುಡಿಮೆ ಗುಣಮಟ್ಟಕ್ಕೆ ಕುತ್ತು

ಭಾರತ ಕಮ್ಯುನಿಸ್ಟ್ ಪಕ್ಷ, ಎಐಟಿಯುಸಿ ಜಿಲ್ಲಾ ಮಂಡಳಿ ಸಹಯೋಗದಲ್ಲಿ ದಾವಣಗೆರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮೇ ದಿನಾಚರಣೆಯಲ್ಲಿ ಎಐಟಿಯುಸಿ ರಾಜ್ಯಾಧ್ಯಕ್ಷ ಬಾಬು ಮ್ಯಾಥ್ಯೂ, ಆವರಗೆರೆ ಚಂದ್ರು ಎಚ್.ಜಿ.ಉಮೇಶ್, ಯೋಗೇಶ್, ಮಾದಿಹಳ್ಳಿ ಮಂಜುನಾಥ್, ವಿ. ಲಕ್ಷ್ಮಣ್, ಎಸ್.ಎಸ್.ಮಲ್ಲಮ್ಮ ಇತರರಿದ್ದರು
ಭಾರತ ಕಮ್ಯುನಿಸ್ಟ್ ಪಕ್ಷ, ಎಐಟಿಯುಸಿ ಜಿಲ್ಲಾ ಮಂಡಳಿ ಸಹಯೋಗದಲ್ಲಿ ದಾವಣಗೆರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮೇ ದಿನಾಚರಣೆಯಲ್ಲಿ ಎಐಟಿಯುಸಿ ರಾಜ್ಯಾಧ್ಯಕ್ಷ ಬಾಬು ಮ್ಯಾಥ್ಯೂ, ಆವರಗೆರೆ ಚಂದ್ರು ಎಚ್.ಜಿ.ಉಮೇಶ್, ಯೋಗೇಶ್, ಮಾದಿಹಳ್ಳಿ ಮಂಜುನಾಥ್, ವಿ. ಲಕ್ಷ್ಮಣ್, ಎಸ್.ಎಸ್.ಮಲ್ಲಮ್ಮ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಸಂಪತ್ತು ಸಾರ್ವಜನಿಕವಾಗಿ ಹಂಚಿಕೆಯಾಗಲಿ
  • ಎಐಟಿಯುಸಿ ರಾಜ್ಯಾಧ್ಯಕ್ಷ ಬಾಬು ಮ್ಯಾಥ್ಯೂ ಅನಿಸಿಕೆ
  • ಸಿಪಿಐ, ಎಐಟಿಯುಸಿಯಿಂದ ಮೇ ದಿನಾಚರಣೆ
ದಾವಣಗೆರೆ: ಕಾರ್ಮಿಕರ ಮೇಲೆ ಚಾಟಿ ಬೀಸಿ, ಶೋಷಣೆ ಮಾಡಿ 8 ತಾಸಿಗಿಂತ ಹೆಚ್ಚು ಅವಧಿಗೆ ದುಡಿಸಿಕೊಂಡರೆ ಉತ್ಪಾದನೆಯ ಗುಣಮಟ್ಟ ಕುಸಿಯಬಹುದು ಎಐಟಿಯುಸಿ ರಾಜ್ಯಾಧ್ಯಕ್ಷ ಬಾಬು ಮ್ಯಾಥ್ಯೂ ಅಭಿಪ್ರಾಯ ಪಟ್ಟರು.
ಭಾರತ ಕಮ್ಯುನಿಸ್ಟ್ ಪಕ್ಷ, ಎಐಟಿಯುಸಿ ಜಿಲ್ಲಾ ಮಂಡಳಿ ಸಹಯೋಗದಲ್ಲಿ ಇಲ್ಲಿನ ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ ರಸ್ತೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮೇ ದಿನಾಚರಣೆ ಹಾಗೂ ಹುತಾತ್ಮರ 56ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಕಾರ್ಮಿಕರನ್ನು 12 ತಾಸು ದುಡಿಸಿಕೊಂಡರೆ ದೇಶ ಅಭಿವೃದ್ಧಿಯಾಗಲಿದೆ ಎಂಬ ಹೇಳಿಕೆ ಕೇಳಿಬರುತ್ತಿದೆ. ಆದರೆ, ಕಾರ್ಮಿಕರನ್ನು ದಿನದಲ್ಲಿ 6 ಗಂಟೆಗೆ ದುಡಿಸಿಕೊಳ್ಳುವ ಫ್ರಾನ್ಸ್ ರಾಷ್ಟ್ರ ಇತರೆ ದೇಶಗಳಿಗಿಂತಲೂ ಪ್ರಗತಿ ಸಾಧಿಸಿದೆ ಎಂದು ಹೇಳಿದರು.
ಅಂಬೇಡ್ಕರ್ ಅವರು ಕಾರ್ಖಾನೆ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಅದರನ್ವಯ ಕಾರ್ಮಿಕರನ್ನು 8 ಗಂಟೆಗೂ ಮೀರಿ ಕೆಲಸ ಮಾಡಿಸುವಂತಿಲ್ಲ. ಆದರೆ ಇಂದು ಕೇಂದ್ರ, ರಾಜ್ಯ ಸರ್ಕಾರಗಳು 12 ತಾಸಿಗೆ ದುಡಿಸಿಕೊಳ್ಳಲು ಹೊರಟಿವೆ. ಹಾಗೆ ದುಡಿಸಿಕೊಂಡರೆ ಓವರ್ ಟೈಂ ಹಣ ಪಡೆದುಕೊಳ್ಳಬೇಕು ಎಂದೂ ಹೇಳಿದರು.
ದಾವಣಗೆರೆ ನಗರಸಭೆ ಮೊದಲು ಕಮ್ಯುನಿಸ್ಟರ ಆಡಳಿತದಲ್ಲಿತ್ತು. ಪಂಪಾಪತಿ ಹಾಗೂ ಇತರರು ನಾಯಕತ್ವ ವಹಿಸಿದ್ದರು. ಕಾರ್ಮಿಕ ವರ್ಗದ ಕಾರಣಕ್ಕೆ ದಾವಣಗೆರೆಯಲ್ಲಿ ದೊಡ್ಡ ಬದಲಾವಣೆ ಆಗಿತ್ತು. ಆದರೆ ಆರ್ಥಿಕ ನೀತಿ ಕಾರಣಕ್ಕೆ ಇಲ್ಲಿದ್ದ 10 ಜವಳಿ ಮಿಲ್‌ಗಳೂ ಇಂದು ಉಳಿದಿಲ್ಲ ಎಂದರು.
ದೇಶದಲ್ಲಿ ಎಲ್ಲರಿಗೂ ಉದ್ಯೋಗ ದೊರಕಲು ಆಡಳಿತಗಾರರಲ್ಲಿ ಸರಿಯಾದ ಆರ್ಥಿಕ ನೀತಿ ಇರಬೇಕು. ಕೃಷಿ, ಕೈಗಾರಿಕೆ ಇನ್ನಿತರೆ ಮೂಲದಿಂದ ದೇಶದಲ್ಲಿ ಸಂಪತ್ತಿನ ಸುಧಾರಣೆ ಆದರೆ ಸ್ವಾಗತಾರ್ಹ. ಆದರೆ ಈ ಸಂಪತ್ತು ಸಾರ್ವಜನಿಕವಾಗಿ ಹಂಚಿಕೆಯಾಗಬೇಕು. ಕೇವಲ ಕಲ್ಯಾಣ ಯೋಜನೆಗೆ ಬಜೆಟ್ ಸೀಮಿತ ಆಗಬಾರದು ಎಂದೂ ಹೇಳಿದರು.
ಮೇ ದಿನ ಎಂಬುದು ಒಂದು ಜಾತಿ-ಮತದ ಆಧಾರದಡಿ ನಡೆಸುವ ಆಚರಣೆಯಲ್ಲ. ಕಾರ್ಮಿಕರ ನಡುವೆ ಏಕತೆ ಬೆಳೆಸುವ ಇದು ವಿಶ್ವದ ಹಬ್ಬವಾಗಿದೆ ಎಂದು ವಿಶ್ಲೇಷಿಸಿದ ಅವರು, ಇಂದು ಕೈಗಾರಿಕಾ ಎಸ್ಟೇಟ್‌ಗಳು ಹೆಚ್ಚಿ ಎಲ್ಲರಿಗೂ ಉದ್ಯೋಗ ಕಲ್ಪಿಸಬೇಕಿದೆ. ಆದರೆ ಇಂದಿನ ಐಟಿ ಉದ್ಯಮಗಳಲ್ಲಿ ಎಐ ಪ್ರವೇಶದಿಂದಾಗಿ ಅನೇಕ ಕೆಲಸಗಳು ಕಡಿತಗೊಳ್ಳುತ್ತಿವೆ. ಕಾರ್ಮಿಕರ ಹಕ್ಕುಗಳು ನಾಶವಾಗುತ್ತಿವೆ. ಇಂತಹ ಪ್ರಸ್ತುತ ವಿಷಯಗಳ ಬಗ್ಗೆ ಇಫ್ಟಾ ತಂಡಗಳು ನಾಟಕ ಪ್ರದರ್ಶಿಸಬೇಕು ಎಂದೂ ಆಶಿಸಿದರು.
ಅಮೆರಿಕ-ಇಸ್ರೇಲ್ ದೇಶಗಳು ಇರಾನ್ ರಾಷ್ಟ್ರದ ಮೇಲೆ 86 ದಿನಗಳ ಕಾಲ ನಡೆಸಿದ ಯುದ್ಧ ಅನೇಕ ಪರಿಣಾಮ ಬೀರಿದೆ. ಇಂಧನ ಬೆಲೆ ಹೆಚ್ಚಳದಂತಹ ದುಷ್ಪರಿಣಾಮಗಳ ಬಗ್ಗೆ ಮಕ್ಕಳಿಗೆ ತಿಳಿಸಬೇಕು. ಆಹಾರದ ಸುರಕ್ಷತೆಯಡಿ ಭಾರತದಲ್ಲಿ ಮೊದಲು 55 ಟನ್ ಆಹಾರ ಧಾನ್ಯ ಉತ್ಪಾದನೆ ಆಗುತ್ತಿದ್ದರೆ, ಹಸಿರುಕ್ರಾಂತಿ ಬಳಿಕ 350 ಟನ್ ಬೆಳೆಯಲಾಗುತ್ತಿದೆ. ಹೀಗಾಗಿ ನಮ್ಮಲ್ಲಿ ಆಹಾರಧಾನ್ಯಕ್ಕೆ ಕೊರತೆ ಇಲ್ಲ. ಸಾರ್ವಜನಿಕ ಪಡಿತರ ವ್ಯವಸ್ಥೆ ಉತ್ತಮವಾಗಬೇಕು ಎಂದರು.
ಎಐಎಸ್‌ಎಫ್‌ನ ಬೆಂಗಳೂರು ಮುಖಂಡ ಯೋಗೇಶ್ ಮಾತನಾಡಿ ರಾಜ್ಯ ಸರ್ಕಾರ ಮ್ಯಾಗ್ನೆಟ್ ಯೋಜನೆ ಮೂಲಕ ಸರ್ಕಾರಿ ಶಾಲೆಗಳನ್ನು ವಿಲೀನ ಮಾಡುವ ಮೂಲಕ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಕಲ್ಲು ಹಾಕಲು ಹೊರಟಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಂಡವಾಳಶಾಹಿ ಶೋಷಣೆಯಲ್ಲಿ ಒಂದೇ ನಾಣ್ಯದ ಎರಡು ಮುಖಗಳು ಎಂದೂ ಟೀಕಿಸಿದರು.
ಪ್ರಾಸ್ತಾವಿಕ ಮಾತನಾಡಿದ ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ. ರಾಘವೇಂದ್ರ ನಾಯರಿ, ದಾವಣಗೆರೆಯಲ್ಲಿ ಕಮ್ಯುನಿಸ್ಟ್ ಹೋರಾಟದ ಆರಂಭದ ದಿನಗಳು ಕೆಂಪುಮಯವಾಗಿದ್ದವು. ಜಾಗತೀಕರಣ, ಖಾಸಗೀಕರಣದಿಂದ ಕಾರ್ಖಾನೆಗಳು ಮುಚ್ಚಿದ ನಂತರ ಮೇ ದಿನಾಚರಣೆ ಸಾಂಕೇತಿಕವಾಗಿದೆ. ಆದರೂ ಸಿಪಿಐ ತನ್ನ ಸಿದ್ಧಾಂತದಲ್ಲಿ ಹಿಂದೆ ಬಿದ್ದಿಲ್ಲ. ಕಾರ್ಮಿಕ ವಿರೋಧಿ ಸರ್ಕಾರಗಳ ನೀತಿ ವಿರುದ್ಧದ ಹೋರಾಟದಲ್ಲೂ ಹಿಂದೆ ಉಳಿದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಎಐಟಿಯುಸಿ ಜಿಲ್ಲಾ ಪ್ರ.ಕಾರ್ಯದರ್ಶಿ ಎಚ್.ಜಿ.ಉಮೇಶ್, ಮುಖಂಡರಾದ ಜಿ.ಯಲ್ಲಪ್ಪ, ಕೆ.ಜಿ.ಶಿವಮೂರ್ತಿ, ಎಚ್.ಕೆ. ಕೊಟ್ರಪ್ಪ, ಬಿ.ಸಿ. ಹನುಮನಗೌಡ, ಕಲಿಗಾರ ರಫಿವುಲ್ಲಾ, ಮಾದಿಹಳ್ಳಿ ಮಂಜುನಾಥ್, ಕೆರನಹಳ್ಳಿ ರಾಜು, ವಿ. ಲಕ್ಷ್ಮಣ್, ಎಸ್.ಎಸ್.ಮಲ್ಲಮ್ಮ, ಜಯಪ್ಪ, ಜೈನುಲ್ಲಾಖಾನ್, ಸರೋಜಾ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ಕಾರ್ಮಿಕರ ಮೆರವಣಿಗೆ ನಡೆಸಲಾಯಿತು. ಐರಣಿ ಚಂದ್ರು ಸಂಗಡಿಗರು ಕ್ರಾಂತಿ ಗೀತೆಗಳನ್ನು ಹಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net