ದಾವಣಗೆರೆಯಲ್ಲಿ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಹುಬ್ಬಳ್ಳಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಮೆಕ್ಯಾನಿಕಲ್ ಇಂಜಿನಿಯರ್ ಸಿದ್ದೇಶ್ವರ ಎನ್. ಹೆಬ್ಬಾಳ ಅವರ ಬಳಿ ದೊರೆತ ಆಭರಣಗಳು ಹಾಗೂ ನಗದು.
ದಾವಣಗೆರೆ :ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ನಡೆಸಿದ ದಾಳಿಯ ವೇಳೆ, ಮೂವರು ಅಧಿಕಾರಿಗಳ ಆದಾಯಕ್ಕಿಂತ ಹೆಚ್ಚಿನ ಆಸ್ತಿಯನ್ನು ಪತ್ತೆಹಚ್ಚಿದ್ದಾರೆ.
ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ 15 ತಂಡಗಳು ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಹುಬ್ಬಳ್ಳಿ, ಬೆಳಗಾವಿ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ ನಗದು, ಆಭರಣಗಳು ಹಾಗೂ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡರು.
ಹುಬ್ಬಳ್ಳಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಮೆಕ್ಯಾನಿಕಲ್ ಇಂಜಿನಿಯರ್ ಸಿದ್ದೇಶ್ವರ ಎನ್. ಹೆಬ್ಬಾಳ ಅವರ ಹುಬ್ಬಳ್ಳಿ ಕಚೇರಿ, ದಾವಣಗೆರೆಯ ಆಂಜನೇಯ ಬಡಾವಣೆಯಲ್ಲಿರುವ ಮನೆ ಇನ್ನಿತರ ಕಡೆಗಳಲ್ಲಿ ದಾಳಿ ನಡೆಸಲಾಯಿತು. ಈ ವೇಳೆ ಅವರು ಆದಾಯಕ್ಕಿತ ಹೆಚ್ಚಿನ 2.61 ಕೋಟಿ ರೂ.ಗಳ (ಶೇ. 124) ಆಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ.
ಸಿದ್ದೇಶ್ವರ ಅವರು 1.62 ಕೋಟಿ ರೂ.ಗಳ ಸ್ಥಿರಾಸ್ತಿ, 2 ಕೋಟಿ ರೂ.ಗಳ ಚರಾಸ್ತಿ ಹೊಂದಿದ್ದಾರೆ. 1.60 ಕೋಟಿ ಮೌಲ್ಯದ 2 ಮನೆಗಳು, 5.60 ಲಕ್ಷದ ನಿವೇಶನ, 1.23 ಕೋಟಿ ರೂ.ಗಳ ಆಭರಣಗಳು ಪತ್ತೆಯಾಗಿದ್ದು ಮನೆಯಲ್ಲಿ 40 ಲಕ್ಷ ರೂ. ನಗದು ದೊರೆತಿದೆ. ದಾಳಿಯ ವೇಳೆ ನಿರೀಕ್ಷೆಗಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಬೆಳಗಾವಿಯ ಕೆಆರ್‌ಐಡಿಎಲ್ ಅಧೀಕ್ಷಕ ಇಂಜಿನಿಯರ್ ಸಣ್ಣ ಕೆಂಚಪ್ಪ ಅವರಿಗೆ ಸೇರಿದ 5 ಕಡೆಗಳಲ್ಲಿ ದಾಳಿ ನಡೆಯಿತು. ಬೆಳಗಾವಿಯ ಮನೆ ಹಾಗೂ ಕಚೇರಿ, ದಾವಣಗೆರೆಯ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಮನೆ, ಹರಪನಹಳ್ಳಿ ತಾಲೂಕು ಕಂಬಟ್ರಹಳ್ಳಿಯಲ್ಲಿರುವ ಮನೆ, ಆನಗೋಡಿನಲ್ಲಿರುವ ವೈನ್ ಶಾಪ್ ಮೇಲೆ ದಾಳಿ ನಡೆಸಲಾಯಿತು.
ಈ ವೇಳೆ 2.54 ಕೋಟಿ ರೂ. ಮೌಲ್ಯದ ಆದಾಯಕ್ಕಿಂತ ಹೆಚ್ಚಿನ (ಶೇ. 156) ಆಸ್ತಿ ಪತ್ತೆಯಾಗಿದೆ. ಅವರಿಗೆ ದಾವಣಗೆರೆ ಮತ್ತು ಬೆಳಗಾವಿಯಲ್ಲಿ 1.38 ಕೋಟಿ ಮೌಲ್ಯದ 3 ಮನೆಗಳಿವೆ. 62.50 ಲಕ್ಷದ ಕೃಷಿ ಭೂಮಿ, 53.90 ಲಕ್ಷದ ಚಿನ್ನಾಭರಣಗಳು, 38 ಸಾವಿರ ರೂ. ಮೌಲ್ಯದ ಬೆಳ್ಳಿ, 1.50 ಲಕ್ಷ ರೂ. ನಗದು, 20.60 ಲಕ್ಷ ಮೌಲ್ಯದ ವಾಹನಗಳು ಪತ್ತೆಯಾಗಿವೆ.
ಬಯಲುಸೀಮೆ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಕೃಷ್ಣಾನಾಯ್ಕ ಅವರಿಗೆ ಸಂಬಂಧಿಸಿದ 4 ಕಡೆಗಳಲ್ಲಿ ದಾಳಿ ನಡೆಯಿತು. ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯಲ್ಲಿರುವ ಮನೆ, ಎಸ್.ಎಸ್. ಬಡಾವಣೆಯಲ್ಲಿರುವ ಮನೆ, ಹೂವಿನಹಡಗಲಿ ತಾಲೂಕು ಅಡವಿ ಮಲ್ಲಮ್ಮ ಕೆರೆ ತಾಂಡಾ ಹಾಗೂ ಚಿತ್ರದುರ್ಗದ ಕಚೇರಿ ಮೇಲೆ ದಾಳಿ ನಡೆಸಲಾಯಿತು.
ದಾಳಿ ಸಂದರ್ಭದಲ್ಲಿ ಅವರು 2.57 ಕೋಟಿ ರೂ. ಮೌಲ್ಯದ, ಆದಾಯಕ್ಕಿಂತ ಹೆಚ್ಚಿನ (ಶೇ. 121) ಆಸ್ತಿ ಹೊಂದಿರುವುದು ಪತ್ತೆಯಾಗಿದೆ. 1.86 ಕೋಟಿ ಮೌಲ್ಯದ ಸ್ಥಿರಾಸ್ತಿ, 83 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ.
ಒಟ್ಟು 1.80 ಕೋಟಿ ಮೌಲ್ಯದ 3 ಮನೆಗಳು, 5 ಲಕ್ಷ ಮೌಲ್ಯದ ನಿವೇಶನ, 6.96 ಲಕ್ಷ ರೂ. ನಗದು, 43 ಲಕ್ಷ ರೂ. ಮೌಲ್ಯದ ಆಭರಣ. 33 ಲಕ್ಷ ಮೌಲ್ಯದ ವಾಹನಗಳು ಪತ್ತೆಯಾಗಿವೆ.