ದಾವಣಗೆರೆಯ ಮಹಾನಗರ ಪಾಲಿಕೆಯ ವಲಯ ಕಚೇರಿ-1ರಲ್ಲಿ ಗುರುವಾರ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದರು. ಎಸ್ಪಿ ಎಂ.ಎಸ್. ಕೌಲಾಪುರೆ, ಇನ್‌ಸ್ಪೆಕ್ಟರ್‌ಗುರುಬಸವರಾಜ್ ಇದ್ದರು.
ದಾವಣಗೆರೆ :ಆಡಳಿತ ವ್ಯವಸ್ಥೆಯ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಲ್ಲಿನ ರಾಜೀವ್‌ಗಾಂಧಿ ಬಡಾವಣೆಯಲ್ಲಿರುವ ಮಹಾನಗರ ಪಾಲಿಕೆಯ ವಲಯ ಕಚೇರಿ-1ರಲ್ಲಿ ಗುರುವಾರ ಶೋಧ ಕಾರ್ಯಾಚರಣೆ ನಡೆಸಿದರು.
ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದಲ್ಲಿ ಡಿವೈಎಸ್ಪಿ ಕಲಾವತಿ, ಇನ್‌ಸ್ಪೆಕ್ಟರ್‌ಗಳಾದ ಗುರುಬಸವರಾಜ್, ಪ್ರಭು, ಸರಳಾ ಮತ್ತು ವಿಶ್ವನಾಥ್ ಅವರನ್ನು ಒಳಗೊಂಡ ತಂಡ ಭೇಟಿ ನೀಡಿ ಕಂದಾಯ, ಆಡಳಿತ ಮುಂತಾದ ವಿಭಾಗಗಳಲ್ಲಿ ಕಡತಗಳನ್ನು ಪರಿಶೀಲಿಸಿತು.
ಖಾತೆ ಬದಲಾವಣೆ ಸೇರಿ ಸಾರ್ವಜನಿಕರು ಸಲ್ಲಿಸಿದ ವಿವಿಧ ಅರ್ಜಿಗಳು ವರ್ಷಗಳಿಂದ ಬಾಕಿ ಇರುವುದು ಕಂಡುಬಂದಿತು. ವ್ಯವಸ್ಥೆಯ ನಿರ್ವಹಣೆ ಸರಿಯಾಗಿಲ್ಲ. ಬೆಂಕಿ ಅಪಘಾತಗಳನ್ನು ತಡೆಯಲು ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ಬಂದಿತು.
ಸಿಬ್ಬಂದಿ ಹಾಜರಾತಿ, ರಿಜಿಸ್ಟರ್‌ಗಳ ನಿರ್ವಹಣೆ, ಗುರುತಿನ ಚೀಟಿಗಳು, ಮೊಬೈಲ್ ವ್ಯವಹಾರದ ವಿವರಗಳನ್ನು ಪರಿಶೀಲಿಸಲಾಯಿತು. ಖಾತೆ ಬದಲಾವಣೆಗೆ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳನ್ನು ಅಲ್ಲಿನ ಸಿಬ್ಬಂದಿ ವಿಲೇವಾರಿ ಮಾಡದೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ಕಾರ್ಯಾಚರಣೆ ಸಂದರ್ಭದಲ್ಲಿ ಬೆಳಕಿಗೆ ಬಂದಿತು ಎಂದು ಮೂಲಗಳು ತಿಳಿಸಿವೆ.
ಕಚೇರಿಯಲ್ಲಿ ಬೆಳಗ್ಗೆಯಿಂದ ಸಂಜೆಯ ವರೆಗೂ ಕಾರ್ಯಾಚರಣೆ ನಡೆಯಿತು. ಇದು ಸಾರ್ವಜನಿಕರಲ್ಲಿ ಕುತೂಹಲಕ್ಕೆ ಕಾರಣವಾಯಿತು. ಇನ್ನು ಮುಂದಾದರೂ ಪಾಲಿಕೆಯ ಸಿಬ್ಬಂದಿ ಸರಿಯಾಗಿ ಸ್ಪಂದಿಸಲಿ ಎಂದು ಜನರು ಮಾತನಾಡಿಕೊಂಡರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ, ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತರಿಂದ ಶೋಧನಾ ವಾರಂಟ್ ಪಡೆದು ಶೋಧ ಕಾರ್ಯಾಚರಣೆ ನಡೆಸಲಾಯಿತು ಎಂದು ತಿಳಿಸಿದರು.
ಪಾಲಿಕೆ ವಲಯ ಕಚೇರಿಯಲ್ಲಿ ಆಡಳಿತದ ಅವ್ಯವಸ್ಥೆಯ ಬಗ್ಗೆ ದೂರುಗಳಿದ್ದವು. 5 ಜನ ಅಧಿಕಾರಿಗಳು ವಿವಿಧ ವಿಭಾಗಗಳಿಗೆ ತೆರಳಿ ಕಾರ್ಯಾಚರಣೆ ನಡೆಸಿದರು.
ಸಾರ್ವಜನಿಕರಿಗೆ ಸೇವೆ ಒದಗಿಸಲು ವಿಳಂಬ ಮಾಡುವುದು, ನಿರ್ವಹಣೆ ಸರಿಯಾಗಿಲ್ಲ. ಬೆಂಕಿ ಅಪಘಾತಗಳನ್ನು ತಡೆಯಲು ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಆ ವ್ಯವಸ್ಥೆ ಮಾಡಬೇಕಾಗಿದ್ದು ಅವರ ಜವಾಬ್ದಾರಿಯಾಗಿದೆ ಎಂದು ಹೇಳಿದರು.