ಹುಚ್ಚವ್ವನಹಳ್ಳಿ ರೈತ ಉತ್ಪಾದಕ ಕಂಪನಿಗಳಿಗೆ ಬೀಗ

ಪೊದೆಗಳಲ್ಲಿ ಬಿದ್ದಿರುವ ಸಲಕರಣೆಗಳು.farmer's producer company
ಪೊದೆಗಳಲ್ಲಿ ಬಿದ್ದಿರುವ ಸಲಕರಣೆಗಳು.farmer's producer company
Published on

ಪ್ರಮುಖ ಮುಖ್ಯಾಂಶಗಳು

  • ತುಕ್ಕು ಹಿಡಿಯುತ್ತಿವೆ ಲಕ್ಷಾಂತರ ಮೌಲ್ಯದ ಸಲಕರಣೆಗಳು
  • ಆಡಳಿತ ಮಂಡಳಿ ವೈಫಲ್ಯ ಕಾರಣ?
ಕೃಷ್ಣಮೂರ್ತಿ ಪಿ.ಎಚ್.ಮಾಯಕೊಂಡ
ಸರ್ಕಾರದ ನಿರ್ಲಕ್ಷೃವೋ, ಆಡಳಿತ ಮಂಡಳಿಯ ವೈಫಲ್ಯವೋ ಅಥವಾ ಷೇರುದಾರರ ಬೇಜವಾಬ್ದಾರಿಯೋ ತಿಳಿಯದು. ಆದರೆ ರೈತರ ಅಭಿವೃದ್ಧಿಗೆ ಸ್ಥಾಪನೆಯಾದ ಉತ್ಪಾದಕರ ಕಂಪನಿಗಳು ಯಾವುದೇ ವಹಿವಾಟು ಇಲ್ಲದೇ ಕಳೆದೊಂದು ವರ್ಷದಿಂದ ಬೀಗ ಬಿದ್ದಿದೆ. ಕಂಪನಿಯ ಟ್ರಾೃಕ್ಟರ್‌ಗಳು ಹಾಗೂ ಕೃಷಿ ಸಲಕರಣೆಗಳು ಬಳಕೆಯಿಲ್ಲದೆ ಪೊದೆಗಳಲ್ಲಿ ಬಿದ್ದು ತುಕ್ಕು ಹಿಡಿಯುತ್ತಿದೆ.
ರೈತರಿಗೆ ನೇರವಾಗಿ ಅನುದಾನ ನೀಡುವ ಬದಲು, ರೈತ ಉತ್ಪಾದಕ ಕಂಪನಿಗಳ ಮೂಲಕ ಸಮೂಹ ಅಭಿವೃದ್ಧಿ ಮಾಡುವ ಉದ್ದೇಶದಿಂದ ಸರ್ಕಾರ ಈ ಯೋಜನೆ ಜಾರಿಗೆ ತಂದಿತ್ತು.
ದಾವಣಗೆರೆ ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ ದೇವನಗರಿ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ, ಹೆಬ್ಬಾಳು ಗ್ರಾಮದ ವಿಶ್ವಬಂಧು ರೈತ ಉತ್ಪಾದಕರ ಕಂಪನಿ ಸೇರಿ ಜಿಲ್ಲೆಯಲ್ಲಿ ಹಲವಾರು ರೈತ ಉತ್ಪಾದಕರ ಕಂಪನಿಗಳು ಅಭಿವೃದ್ಧಿ ಕಾಣದೆ ಬಾಗಿಲು ಹಾಕಿವೆ.
2017ರಲ್ಲಿ ಅಂದಿನ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಅವರು ದೇವನಗರಿ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯನ್ನು ಉದ್ಘಾಟಿಸಿದ್ದರು. ಕಂಪನಿಗೆ ಹುಚ್ಚವ್ವನಹಳ್ಳಿ, ಹೆದ್ನೇ, ಎಚ್.ರಾಂಪುರ ಸೇರಿ ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳ ಒಂದು ಸಾವಿರ ರೈತರನ್ನು ಷೇರುದಾರರನ್ನಾಗಿ ಮಾಡಿಕೊಂಡು ಪ್ರತಿ ರೈತರಿಂದ 1000 ರೂ. ಒಟ್ಟು 10 ಲಕ್ಷ ರೂ. ಕ್ರೋಡೀಕರಿಸಿ, ಅಧ್ಯಕ್ಷ, ಉಪಾಧ್ಯಕ್ಷ, 12 ನಿರ್ದೇಶಕರು ಸೇರಿ 14 ಜನರ ಆಡಳಿತ ಮಂಡಳಿ ರಚಿಸಿಲಾಯಿತು.
ಕಳೆದ 6-7 ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಕಂಪನಿಯು ರೈತರಿಗೆ ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರ, ಪ್ಲಾಸ್ಟಿಕ್ ಪೈಪ್‌ಗಳು ಹಾಗೂ ಹಾರ್ಡ್‌ವೇರ್ ಸಾಮಗ್ರಿಗಳನ್ನು ಒದಗಿಸುತ್ತಿತ್ತು. ಆದರೆ, ಕಳೆದೊಂದು ವರ್ಷದಿಂದ ಏಕಾಏಕಿ ವಹಿವಾಟು ಸ್ಥಗಿತಗೊಂಡಿದ್ದು, ಕಂಪನಿಗೆ ಬೀಗ ಬಿದ್ದಿದೆ.  ಪರಿಣಾಮವಾಗಿ, ಲಕ್ಷಾಂತರ ರೂ. ವೆಚ್ಚದಲ್ಲಿ ಖರೀದಿಸಲಾದ ರೋಟ ವೇಟರ್, ಕಲ್ಟಿವೇಟರ್, ನೇಗಿಲು, ವಾಟರ್ ಟ್ಯಾಂಕರ್ ಸೇರಿ ಇತರ ಸಲಕರಣೆಗಳು ಅನಾಥವಾಗಿ ಬಿದ್ದಿವೆ.

ದೇವನಗರಿ ಕಂಪನಿ ಸುಮಾರು 6 ವರ್ಷಗಳ ಕಾಲ ಕಂಪನಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಕೆಲವು ರೈತರು ಸಾಲ ಪಡೆದು ನಿಗದಿತ ಸಮಯಕ್ಕೆ ಹಣ ಮರುಪಾವತಿಸದ ಕಾರಣ ನಷ್ಟ ಉಂಟಾಗಿ ಕಂಪನಿ ಬಂದ್ ಮಾಡಬೇಕಾಯಿತು. ಸರ್ಕಾರ ಹೆಚ್ಚಿನ ಅನುದಾನ ನೀಡಿದರೆ ಪುನಃ ಆರಂಭಿಸುತ್ತೇವೆ.

ರೈತ ಉತ್ಪಾದಕ ಕಂಪನಿಗಳು ಕಂಪನಿ ಕಾಯ್ದೆಯಡಿ ಬರುತ್ತವೆ. ಇವು ಸರ್ಕಾರ ಅಥವಾ ತೋಟಗಾರಿಕೆ ಇಲಾಖೆಗಳ ನಿಯಂತ್ರಣದಲ್ಲಿರುವುದಿಲ್ಲ. ಆಡಳಿತ ಮಂಡಳಿ ಮತ್ತು ಷೇರುದಾರರು ಚರ್ಚಿಸಿ ಕಂಪನಿ ಅಭಿವೃದ್ಧಿಗೆ ಮುಂದಾಗಬೇಕು.

ನಾನು ಸದಸ್ಯತ್ವ ಪಡೆದು ಹಣ ಹೂಡಿಕೆ ಮಾಡಿದ್ದೇನೆ. ವರ್ಷದಿಂದ ಕಂಪನಿ ಬಂದ್ ಆಗಿರುವುದು ಬೇಸರದ ಸಂಗತಿ. ಸರ್ಕಾರ ಕೂಡಲೇ ಕಂಪನಿಯನ್ನು ಪುನಶ್ಚೇತನಗೊಳಿಸಲು ಕ್ರಮ ಕೈಗೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net