ಇತರರಿಗಾಗಿ ಬದುಕುವುದು ಸಾರ್ಥಕ್ಯ

ದಾವಣಗೆರೆಯಲ್ಲಿ ಮಂಗಳವಾರ ಜಿಲ್ಲಾ ಕದಳಿ ಮಹಿಳಾ ಸಮಾವೇಶವನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಡಾ. ಸಿ. ಸೋಮಶೇಖರ, ಕೆ.ಎಂ. ವೀರೇಶ್, ಸೋಮಶೇಖರ್, ಪ್ರೊ. ಟಿ. ನೀಲಾಂಬಿಕೆ, ಕೆ.ಬಿ. ಪರಮೇಶ್ವರಪ್ಪ, ಮಮತಾ ನಾಗರಾಜ್, ಪ್ರಮೀಳಾ ನಟರಾಜ್, ಯಶಾ ದಿನೇಶ್, ನಿರ್ಮಲಾ, ರೂಪಾ, ಡಾ. ಪ್ರತಿಮಾ, ಅಂಬಿಕಾ, ಪ್ರೇಮಾ, ಗೌರಮ್ಮ ಇದ್ದರು.
ದಾವಣಗೆರೆಯಲ್ಲಿ ಮಂಗಳವಾರ ಜಿಲ್ಲಾ ಕದಳಿ ಮಹಿಳಾ ಸಮಾವೇಶವನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ಡಾ. ಸಿ. ಸೋಮಶೇಖರ, ಕೆ.ಎಂ. ವೀರೇಶ್, ಸೋಮಶೇಖರ್, ಪ್ರೊ. ಟಿ. ನೀಲಾಂಬಿಕೆ, ಕೆ.ಬಿ. ಪರಮೇಶ್ವರಪ್ಪ, ಮಮತಾ ನಾಗರಾಜ್, ಪ್ರಮೀಳಾ ನಟರಾಜ್, ಯಶಾ ದಿನೇಶ್, ನಿರ್ಮಲಾ, ರೂಪಾ, ಡಾ. ಪ್ರತಿಮಾ, ಅಂಬಿಕಾ, ಪ್ರೇಮಾ, ಗೌರಮ್ಮ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರ ಹೇಳಿಕೆ
  • ಜಿಲ್ಲಾ ಕದಳಿ ಮಹಿಳಾ ಸಮಾವೇಶ
  • ವಚನ ಸಾಹಿತ್ಯ ಪ್ರಚಾರ
ದಾವಣಗೆರೆ : ಇತರರಿಗಾಗಿ ಬದುಕಿದವರು ಇತಿಹಾಸದ ಭಾಗವಾಗುತ್ತಾರೆ. ಬಸವಾದಿ ಶರಣರ ಚಿಂತನೆಯೂ ಅದೇ ಆಗಿತ್ತು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಕದಳಿ ಮಹಿಳಾ ವೇದಿಕೆ ವತಿಯಿಂದ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಕದಳಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದರು.
ಇತ್ತೀಚೆಗೆ ನಿಧನರಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿದ್ದ ಡಾ. ಶಾಮನೂರು ಶಿವಶಂಕರಪ್ಪ ಅವರ ಬದುಕನ್ನು ಉದಾಹರಿಸಿ, ಅವರು ಲೋಕಕ್ಕಾಗಿ ಬದುಕಿದರು ಎಂದು ಬಣ್ಣಿಸಿದರು.
ಶರಣರಿಗೆ ಅಧಿಕಾರ, ಸಂಪತ್ತು ಮುಂತಾದ ಲೌಕಿಕ ವಿಷಯಗಳು ಬೇಕಿರಲಿಲ್ಲ. ಅವರ ಚಿಂತನೆಗಳು ಅಲೌಕಿಕವಾಗಿದ್ದವು. ತಮ್ಮ ವಿಚಾರಗಳ ಮೂಲಕ ಜನತ ಬದುಕಿನಲ್ಲಿ ಬದಲಾವಣೆ ತಂದರು, ದೊಡ್ಡ ಕ್ರಾಂತಿಯನ್ನೇ ಮಾಡಿದರು ಎಂದರು.
ಶರಣರು ಸಮಾನತೆಯನ್ನು ಪ್ರತಿಪಾದಿಸಿದರು. ಮೂಢ ನಂಬಿಕೆಗಳನ್ನು ವಿರೋಧಿಸಿದರು. ವಿಶ್ವ ಭ್ರಾತೃತ್ವ ಸಾರಿದರು. ಸ್ತ್ರೀ ಸ್ವಾತಂತ್ರೃದ ಕುರಿತು ಮಾತನಾಡಿದರು. ಸಮಾಜದ ಕೆಳ ಸ್ತರದ ಜನರಿಗೆ ಆತ್ಮವಿಶ್ವಾಸ ತುಂಬಿದರು. ಜಾತ್ಯತೀತ ಪರಿಕಲ್ಪನೆಯನ್ನು ಸಮಾಜದ ಮುಂದಿಟ್ಟರು. ಕಾಯಕ ಸಿದ್ಧಾಂತದ ಮೂಲಕ ದುಡಿಮೆಯ ಮಹತ್ವವನ್ನು ತಿಳಿಸಿದರು ಎಂದು ವಿವರಿಸಿದರು.
1986ರಲ್ಲಿ ಸ್ಥಾಪನೆಯಾದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವಚನ ಸಾಹಿತ್ಯವನ್ನು ಜಗತ್ತಿಗೆ ಪಸರಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಮತಾ ನಾಗರಾಜ್ ಮಾತನಾಡಿ, ಕದಳಿ ವೇದಿಕೆ ಸ್ಥಾಪನೆಯಾಗಿ 17 ವರ್ಷಗಳಾಗಿವೆ. 650ಕ್ಕೂ ಹೆಚ್ಚು ಸದಸ್ಯರಿದ್ದಾರೆ. 150ಕ್ಕೂ ಹೆಚ್ಚು ಮಹಿಳೆಯರು ವಚನ ಕಲಿಕೆ ಮಾಡುತ್ತಿದ್ದಾರೆ. ಸೇವಾ ಕಾರ್ಯಗಳು, ಪ್ರತಿಭಾ ಪುರಸ್ಕಾರ ಮುಂತಾದ ಚಟುವಟಿಕೆಗಳನ್ನು ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ವೇದಿಕೆಯ ರಾಜ್ಯ ಉಪ ಸಂಚಾಲಕಿ ಪ್ರಮೀಳಾ ನಟರಾಜ್ ಮಾತನಾಡಿದರು. ನಿವೃತ್ತ ಪ್ರಾಚಾರ್ಯೆ ಪ್ರೊ. ಟಿ. ನೀಲಾಂಬಿಕೆ ಸರ್ವಾಧ್ಯಕ್ಷತೆ ವಹಿಸಿದ್ದರು. ರಾಜ್ಯ ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಕೆ.ಎಂ. ವೀರೇಶ್, ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಕದಳಿ ಮಹಿಳಾ ವೇದಿಕೆ ಗೌರವ ಸಲಹೆಗಾರರಾದ ಯಶಾ ದಿನೇಶ್, ತಾಲೂಕು ಘಟಕಗಳ ಅಧ್ಯಕ್ಷರಾದ ನಿರ್ಮಲಾ, ರೂಪಾ, ಡಾ. ಪ್ರತಿಮಾ, ಅಂಬಿಕಾ, ಪ್ರೇಮಾ, ಗೌರಮ್ಮ ಇದ್ದರು.
...
(ಬಾಕ್ಸ್)
ಅಂತರಂಗ ಶುದ್ಧಿ
ವಚನ ಸಾಹಿತ್ಯವನ್ನು ಮನನ ಮಾಡಿಕೊಂಡರೆ ನಮ್ಮ ಅಂತರಂಗ ಶುದ್ಧಿಯಾಗುತ್ತದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಈಗಿರುವ ಸಂಸತ್ತಿನ ಪರಿಕಲ್ಪನೆಯನ್ನು ಶರಣರು 12ನೇ ಶತಮಾನದಲ್ಲೇ ಅನುಭವ ಮಂಟಪದ ರೂಪದಲ್ಲಿ ಪರಿಚಯಿಸಿದ್ದರು. ಉತ್ತಮ ಸಮಾಜವನ್ನು ರೂಪಿಸುವ ಕುರಿತು ಅಲ್ಲಿ ಚರ್ಚೆ ನಡೆಯುತ್ತಿತ್ತು ಎಂದು ತಿಳಿಸಿದರು.
ವಚನ ಸಾಹಿತ್ಯ ನಮ್ಮ ಜೀವನದ ಪಾಠವಾಗಿದೆ. ಸಮಾನತೆ, ಅಂತರಂಗ, ಬಹಿರಂಗ ಶುದ್ಧಿ, ಕಾಯಕ ಮುಂತಾದ ಉನ್ನತ ವಿಚಾರಗಳನ್ನು ಶರಣರು ಬೋಧಿಸಿದರು. ಜಾತಿ, ಧರ್ಮ, ವರ್ಗ, ಲಿಂಗ ಭೇದವಿಲ್ಲದ ಸಮಾಜವನ್ನು ತರಲು ಪ್ರಯತ್ನಿಸಿದರು ಎಂದು ಹೇಳಿದರು. ಡಾ. ಶಾಮನೂರು ಶಿವಶಂಕರಪ್ಪ ಅವರು ಶರಣರ ವಿಚಾರಗಳನ್ನು ಜೀವನದಲ್ಲಿ ಪಾಲಿಸಿದರು ಎಂದು ನೆನಪು ಮಾಡಿಕೊಂಡರು.
ವಚನ ಸಾಹಿತ್ಯದ ಮೂಲಕ ಸ್ಥಿತಪ್ರಜ್ಞತೆ ಕಲಿಯಬಹುದು. ಜೀವನದ ಆತ್ಮಾವಲೋಕನ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಶಿಸ್ತುಬದ್ಧ ಜೀವನ ಶೈಲಿಯನ್ನು ಬೆಳೆಸಿಕೊಳ್ಳಬೇಕು. ಮೊಬೈಲ್ ವ್ಯಸನದಿಂದ ದೂರವಿರಬೇಕು. ಪಾಲಕರು ಮಕ್ಕಳಿಗಾಗಿ ಸಮಯ ಕೊಡಬೇಕು ಎಂದು ಸಲಹೆ ನೀಡಿದರು.
...
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net