

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಕೊಡಗನೂರು ಗ್ರಾಮ ಪಂಚಾಯಿತಿ ಗ್ರಂಥಾಲಯ ಸ್ವಂತ ಕಟ್ಟಡವಿಲ್ಲದೆ ಕಳೆದ 17 ವರ್ಷಗಳಿಂದ ಗ್ರಾಪಂನ ಕಿರಿದಾದ ಮಳಿಗೆಯಲ್ಲೇ ಕಾರ್ಯನಿರ್ವಹಿಸುತ್ತಿದೆ. 750 ರಿಂದ 800 ಮನೆಗಳಿರುವ, ತಾಲೂಕು ಪಂಚಾಯಿತಿ ಕ್ಷೇತ್ರವನ್ನು ಹೊಂದಿರುವ ದೊಡ್ಡ ಗ್ರಾಮ ಕೊಡಗನೂರು. ಗ್ರಾಮದಲ್ಲಿ ಸರ್ಕಾರಿ ಪಿಯು ಕಾಲೇಜು, ಸರ್ಕಾರಿ ಐಟಿಐ ಕಾಲೇಜು, ಸರ್ಕಾರಿ ಹಾಗೂ ಖಾಸಗಿ ಪ್ರೌಢಶಾಲೆಗಳು ಮತ್ತು ಪ್ರಾಥಮಿಕ ಶಾಲೆಗಳಿದ್ದು, ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಪದವೀಧರರಿದ್ದಾರೆ. ಶಿಕ್ಷಣದ ತವರೂರಂತಿರುವ ಈ ಗ್ರಾಮದಲ್ಲಿ ಕಿರಿದಾದ ಜಾಗದಲ್ಲಿ ಗ್ರಂಥಾಲಯ ನಡೆಯುತ್ತಿರುವುದರಿಂದ ಪುಸ್ತಕಗಳ ರ‌್ಯಾಕ್ ಇಡಲು ಮತ್ತು ವಿದ್ಯಾರ್ಥಿಗಳು, ಸಾರ್ವಜನಿಕರು ಕುಳಿತು ಓದಲು ಜಾಗವಿಲ್ಲದೆ ಪರದಾಡುವ ಸ್ಥಿತಿಯಿದೆ.
ಗ್ರಂಥಾಲಯದಲ್ಲಿ ಒಂದು ಕಂಪ್ಯೂಟರ್ ಇದ್ದು, ಡಿಜಿಟಲ್ ಸೌಲಭ್ಯವಿದೆ ಎಂದು ಹೇಳಲಾಗುತ್ತಿದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು, ರೈತರು ಮತ್ತು ಕೂಲಿ ಕಾರ್ಮಿಕರ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಅನುಕೂಲವಾಗುವಂತೆ ವಿಶಾಲವಾದ ಆವರಣದಲ್ಲಿ ನೂತನ ಕಟ್ಟಡ ನಿರ್ಮಿಸಿ, ಹೆಚ್ಚಿನ ಕಂಪ್ಯೂಟರ್ ಹಾಗೂ ಆನ್‌ಲೈನ್ ಡಿಜಿಟಲ್ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ.