ದಾವಣಗೆರೆ: ಹಗಲಿರುಳು ಶ್ರಮವಹಿಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಬದುಕು ನಡೆಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ, ಎಸ್ಸೆಸ್ಸೆಲ್ಸಿ ಪರೀಕ್ಷೆಯ ಆಯ್ದ 10 ಪ್ರತಿಭಾನ್ವಿತರನ್ನು ಸನ್ಮಾನಿಸಿ ಮಾತನಾಡಿ, ಪ್ರಜ್ಞಾವಂತರಿಂದ ಮಾಹಿತಿ ಪಡೆದು, ತಮ್ಮ ಬುದ್ದಿಮತ್ತೆ ಹೆಚ್ಚಿಸಿಕೊಳ್ಳಬೇಕು ಎಂದೂ ತಿಳಿಸಿದರು.
ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಅನೇಕರು ಐಎಎಸ್, ಐಪಿಎಸ್ ತರಬೇತಿ ಪಡೆದು ತಮ್ಮ ಶಿಕ್ಷಣ ಪಥದಲ್ಲಿ ಸಾಗುವ ಆಲೋಚನೆ ಹೊಂದಿದ್ದಾರೆ. ಆದರೆ ಎಲ್ಲರಿಗೂ ಈ ಅವಕಾಶ ಒದಗುವುದು ಕಷ್ಟಸಾಧ್ಯ.ಇದಕ್ಕೆ ಸಹವರ್ತಿ ಹಾಗೂ ಪರ್ಯಾಯವಾದ ಕೋರ್ಸ್‌ಗಳಿವೆ. ಇವುಗಳಲ್ಲಿ ಆಸಕ್ತಿ ಇರುವ ವಿಷಯಗಳನ್ನು ಆಯ್ದುಕೊಂಡು ಬದುಕು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಪುಸ್ತಕದ ಜ್ಞಾನಕ್ಕೆ ಸೀಮಿತರಾಗದೆ ವಾಸ್ತವ ಬದುಕಿನ ಎಲ್ಲಾ ಮಗ್ಗಲುಗಳ ಪರಿಚಯ ಹೊಂದಿದ್ದು, ಮೇಲ್ಪಂಕ್ತಿಯಲ್ಲಿರಬೇಕು. ಹಿರಿಯರನ್ನು ಗೌರವಿಸುವ, ಕುಟುಂಬದ ಮುಖ್ಯಸ್ಥರು ಹಾಗೂ ಮನೆಯ ಕೆಲಸಗಳಲ್ಲಿ ಸಹಕರಿಸುವ, ಎಲ್ಲರೊಂದಿಗೆ ಬೆರೆಯುವ ಸೌಜನ್ಯ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶೈಕ್ಷಣಿಕ ಕಲಿಕೆ ಜತೆಗೆ ಕ್ರೀಡೆ, ವಿಜ್ಞಾನ, ಸಂಗೀತ, ನೃತ್ಯ ಮುಂತಾದ ವಿಷಯಗಳಲ್ಲಿ ಆಸಕ್ತಿ ಹೊಂದಬೇಕು. ಇತ್ತೀಚಿನ ದಿನಗಳಲ್ಲಿ ಕಲಿಕೆಯ ಸ್ವರೂಪವೂ ಬದಲಾಗಿದೆ. ಕೃತಕ ಬುದ್ದಿಮತ್ತೆಯಿಂದಾಗಿ ಅವಕಾಶಗಳು ವಿರಳವಾಗುತ್ತಿವೆ. ಯುವ ವಿದ್ಯಾರ್ಥಿಗಳು ಮಾನಸಿಕವಾಗಿ ವಿಚಲಿತರಾಗದೆ, ಅಡ್ಡದಾರಿ ಹಿಡಿಯದೆ ರಾಜಮಾರ್ಗದಲ್ಲಿಯೇ ನಡೆದು, ಬಲಿಷ್ಠರಾಗಬೇಕು ಎಂದರು.
ವಿದ್ಯಾರ್ಥಿಗಳು ವಾಟ್ಸಾೃಪ್, ಫೇಸ್‌ಬುಕ್, ಮೊಬೈಲ್ ಗೀಳಿನಿಂದ ಹೊರಬರಬೇಕು. ಇತ್ತೀಚಿಗೆ ಅಭಿವೃದ್ಧಿ ಹೊಂದಿರುವ ತಂತ್ರಾಂಶಗಳಿಂದ ಇಡೀ ಜಗತ್ತು ಅಂಗೈಯಲ್ಲಿ ಬಂದು ನಿಂತಿದೆ. ಯುವ ವಿದ್ಯಾರ್ಥಿಗಳು ಮೂಡಿಸಿರುವ ಹೆಜ್ಜೆ ಗುರುತುಗಳು ಮಾಸದಂತೆ ಭವಿಷ್ಯದ ದಾರಿಯಲ್ಲಿ ಮುಂದುವರೆಯಬೇಕು ಎಂದರು.
ಮಕ್ಕಳು ಒತ್ತಡ ಮುಕ್ತರಾಗಿ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಈ ನೆಲದ ಕಾನೂನನ್ನು ಗೌರವಿಸುವ ಜತೆಗೆ ಅಪೂರ್ವ ಜೀವನಾನುಭವ ಹೊಂದಿರುವ ಹಿರಿಯರ ಸಲಹೆ-ಸೂಚನೆಗಳನ್ನು ಪಾಲಿಸಿ. ಜೀವನ ಅಮೂಲ್ಯವಾದುದು. ಬರುವ ಸದವಕಾಶಗಳಿಂದ ವಂಚಿತರಾಗಬೇಡಿ ಎಂದು ಹಿತವಚನ ನೀಡಿದರು. ಎಸ್ಸೆಸ್ಸೆಲ್ಸಿ ಸಾಧಕ ಮಕ್ಕಳು, ಕಾರಣಕರ್ತ ಶಿಕ್ಷಕರನ್ನು ಅಭಿನಂದಿಸಿದರು.
ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ, ಕಲಿಕೆ ನಿರಂತರ ಪ್ರಕ್ರಿಯೆಯಾಗಿರಲಿ. ಯುವ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದ್ದು, ಸಾಮಾಜಿಕ ಕಳಕಳಿ ಉಳ್ಳವರಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಗೆ ಅತಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಜಿ. ಭರತ್, ಎನ್. ಎಸ್. ಚೈತ್ರಾ, ಕೆ.ಎಸ್.ಬಿಂದು, ಎಸ್. ಮಲ್ಲಿಕಾರ್ಜುನ ಶ್ರೀ ವಿ. ಮಠದ್, ಆರ್. ಸ್ಪಂದನಾ, ಎಂ.ಆರ್. ಮನೋಜ್, ಕೆ.ಎಸ್. ಶುಭಲೇಖಾ, ಎಸ್.ಜಿ.ದಿವ್ಯಾ, ಬಿ. ಸೂಫಿಯಾ ಅವರಿಗೆ ಸ್ಮರಣಿಕೆ, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಿಡಿಪಿಐ ಜಿ.ಕೊಟ್ರೇಶ್, ಡಯಟ್ ಪ್ರಾಚಾರ್ಯೆ ಗೀತಾ, ಶಿಕ್ಷಣಾಧಿಕಾರಿಗಳಾದ ಸಿದ್ದಪ್ಪ, ಜಯಪ್ಪ, ಹಾಲಮೂರ್ತಿ, ವಿಶಾಲಾಕ್ಷಿ, ಪುಷ್ಪಲತಾ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಹಾಲಪ್ಪ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮುಬಾರಕ್ ಅಲಿ ಇತರರಿದ್ದರು.