ವಿದ್ಯಾರ್ಥಿಗಳು ಶಿಕ್ಷಣದ ಜತೆ ಸಂಸ್ಕಾರ ಅಳವಡಿಸಿಕೊಳ್ಳಲಿ education
ಆನಗೋಡು ಹೋಬಳಿ ಕುರ್ಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ನಡೆಯಿತು. ಹಿರಿಯ ಶಿಕ್ಷಕ ಬಳಗ, ಮುಖಂಡರಾದ ಓದೇಗೌಡ್ರು ರೇವಣಸಿದ್ಧಪ್ಪ, ವೇದಮೂರ್ತಿ, ಹೊಸಮನಿ ಶಾಂತಪ್ಪ, ಜೆ.ಡಿ. ರಂಗಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಓಂಕಾರಪ್ಪ ಇತರರಿದ್ದರು. education
ಮಾಯಕೊಂಡದಲ್ಲಿ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ
ಮಾಯಕೊಂಡ: ವಿದ್ಯಾರ್ಥಿಗಳು ಕೇವಲ ಪಠ್ಯದ ಶಿಕ್ಷಣ ಪಡೆಯುವುದಲ್ಲದೇ, ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹಿರಿಯ ಶಿಕ್ಷಕಿ ಎಚ್.ಎನ್. ಸುಜಾತ ತಿಳಿಸಿದರು. education
ಆನಗೋಡು ಹೋಬಳಿಯ ಕುರ್ಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಯೋಜಿಸಿದ್ದ 2002-03ನೇ ಸಾಲಿನ ಎಸ್‌ಎಸ್‌ಎಲ್‌ಸಿ ಬ್ಯಾಚ್ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಉದ್ಘಾಟಿಸಿ ಮಾತನಾಡಿದರು.
ಪಾಲಕರು ಮನೆಯಲ್ಲಿ ಕಷ್ಟಗಳಿದ್ದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ವಿದ್ಯಾರ್ಥಿಗಳು ಚನ್ನಾಗಿ ಓದಿ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಹೊಂದಬೇಕೆಂದು ಕಿವಿಮಾತು ಹೇಳಿದರು.
ನಾವು ವಿದ್ಯಾರ್ಥಿಗಳಾಗಿದ್ದಾಗ ಆರ್ಥಿಕವಾಗಿ ಸಮಸ್ಯೆಗಳಿದ್ದರೂ ಪಾಲಕರು ನಮ್ಮ ಓದಿಗೆ ಪ್ರೋತ್ಸಾಹ ನೀಡಿದರು. ಅದರಿಂದ ಈ ಸ್ಥಾನಕ್ಕೆ ಬಂದಿದ್ದೇವೆ. ಮಕ್ಕಳು ಗುರು ಹಿರಿಯರಿಗೆ, ಪಾಲಕರಿಗೆ ಗೌರವ ಸಮರ್ಪಣೆಯ ಗುಣಗಳನ್ನು ಕಲಿಯಬೇಕು ಎಂದರು.
ಶಿಕ್ಷಕಿ ಎಸ್.ಪಿ. ಪಾರ್ವತಮ್ಮ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚು ಮೊಬೈಲ್ ಬಳಕೆಯಲ್ಲಿ ಮಗ್ನರಾಗಿದ್ದು ವಿದ್ಯಾಭ್ಯಾಸಕ್ಕಿಂತ ಹೆಚ್ಚಾಗಿ ರೀಲ್ಸ್ ನೋಡುತ್ತಾರೆ. ಪಾಲಕರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ಶಿಕ್ಷಕ ಜಗದೀಶ್ ಮಾತನಾಡಿ, ನಮ್ಮ ಶಿಷ್ಯ ಬಳಗ ನಮ್ಮ ಮೇಲಿಟ್ಟಿರುವ ಅಪಾರ ಪ್ರೀತಿ ಸ್ಮರಣೀಯ, ಎಲ್ಲರೂ ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಬಗ್ಗೆ ಗಮನ ಹರಿಸಬೇಕು ಎಂದರು.
ಹಳೇ ವಿದ್ಯಾರ್ಥಿಗಳು ತಮಗೆ ವಿದ್ಯೆ ಹೇಳಿಕೊಟ್ಟ ಶಿಕ್ಷಕರಿಗೆ ಪುಷ್ಪವೃಷ್ಟಿ ಮಾಡಿದರು. ಸ್ನೇಹ ಸಮ್ಮಿಲನದಲ್ಲಿ ಪರಸ್ಪರ ಶುಭಾಶಯ ಕೋರಿದ ದೃಶ್ಯಗಳು ಕಂಡು ಬಂದವು.
ಮುಖ್ಯಶಿಕ್ಷಕ ಮಂಜುನಾಥಾಚಾರಿ, ಮುಖಂಡರಾದ ಓದೇಗೌಡ್ರು ರೇವಣಸಿದ್ದಪ್ಪ, ವೇದಮೂರ್ತಿ, ಹೊಸಮನಿ ಶಾಂತಪ್ಪ, ಜೆ.ಡಿ. ರಂಗಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಓಂಕಾರಪ್ಪ ಇತರರು ಇದ್ದರು.