ಸಂಗಮಗೊಳ್ಳಲಿ ಎಲ್ಲ ಚಳವಳಿಗಳು

ಹರಿಹರ ಹೊರವಲಯದ ಮೈತ್ರಿವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಮಟ್ಟದ ಅಧ್ಯಯನ ಶಿಬಿರವನ್ನು ಚಿಂತಕ ಎ.ಬಿ. ರಾಮಚಂದ್ರಪ್ಪ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು.  ಡಾ. ಸಿದ್ದನಗೌಡ ಪಾಟೀಲ್, ಪಿ.ವಿ.ಲೋಕೇಶ, ಎಚ್.ಜಿ.ಉಮೇಶ ಆವರಗೆರೆ, ಕೆ.ಎಸ್.ಜನಾರ್ದನ, ಶಾಂತರಾಜ್,  ಎಂ.ಸಿ. ಡೋಂಗ್ರೆ, ವೀರಣ್ಣ ಕೂಡ್ಲಿಗಿ ಇತರರಿದ್ದರು.
ಹರಿಹರ ಹೊರವಲಯದ ಮೈತ್ರಿವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಮಟ್ಟದ ಅಧ್ಯಯನ ಶಿಬಿರವನ್ನು ಚಿಂತಕ ಎ.ಬಿ. ರಾಮಚಂದ್ರಪ್ಪ ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು. ಡಾ. ಸಿದ್ದನಗೌಡ ಪಾಟೀಲ್, ಪಿ.ವಿ.ಲೋಕೇಶ, ಎಚ್.ಜಿ.ಉಮೇಶ ಆವರಗೆರೆ, ಕೆ.ಎಸ್.ಜನಾರ್ದನ, ಶಾಂತರಾಜ್, ಎಂ.ಸಿ. ಡೋಂಗ್ರೆ, ವೀರಣ್ಣ ಕೂಡ್ಲಿಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೇಶಕ್ಕೆ ಅಗತ್ಯವಿದೆ ಶ್ರಮಿಕರ ಮಹಾ ಒಕ್ಕೂಟ
  • ಚಿಂತಕ ಎ.ಬಿ.ರಾಮಚಂದ್ರಪ್ಪ ಆಶಯ
  • ಎಐಕೆಎಸ್ ರಾಜ್ಯ ಅಧ್ಯಯನ ಶಿಬಿರ ಚಾಲನೆ
ದಾವಣಗೆರೆ: ಕಾರ್ಪೊರೇಟ್ ಶಕ್ತಿಗಳ ಕಪಿಮುಷ್ಠಿಯಿಂದ ದೇಶವನ್ನು ರಕ್ಷಿಸಬೇಕಿದೆ. ಹೀಗಾಗಿ ದಲಿತ, ರೈತ, ಕಾರ್ಮಿಕ, ವಿದ್ಯಾರ್ಥಿ ಮತ್ತು ಮಹಿಳಾ ಚಳವಳಿಗಳು ಪ್ರತ್ಯೇಕತೆ ಮರೆತು ಒಂದೇ ಸೂರಿನಡಿ ಬರುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಚಿಂತಕ ಎ.ಬಿ. ರಾಮಚಂದ್ರಪ್ಪ ಆಶಿಸಿದರು.
ಹರಿಹರ ಹೊರವಲಯದ ಮೈತ್ರಿವನದ ಪ್ರೊ.ಬಿ.ಕೃಷ್ಣಪ್ಪ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎರಡು ದಿನಗಳ, ಅಖಿಲ ಭಾರತ ಕಿಸಾನ್ ಸಭಾದ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿದರು.
ದೇಶವ್ಯಾಪಿ ಜಾರಿಯಲ್ಲಿರುವ ಉದಾರೀಕರಣ, ಜಾಗತೀಕರಣದ ಆರ್ಥಿಕ ನೀತಿಗಳು ಸಾಮಾನ್ಯ ಜನರ ಬದುಕನ್ನು ಅಸ್ತವ್ಯಸ್ತಗೊಳಿಸುತ್ತಿವೆ. ಇದರ ವಿರುದ್ಧ ಶ್ರಮಿಕ ವರ್ಗ ಒಂದಾಗದಿದ್ದರೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ದೇಶಕ್ಕಿಂದು ಶ್ರಮಿಕ ವರ್ಗದ ಮಹಾ ಒಕ್ಕೂಟ ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದರು.
ಜಾಗತೀಕರಣವು ಕೇವಲ ಆರ್ಥಿಕ ಸುಧಾರಣೆಯಲ್ಲ, ಅದು ಸಾಮಾನ್ಯ ರೈತರು ಮತ್ತು ಕಾರ್ಮಿಕರ ಬದುಕನ್ನು ನುಂಗಿ ನೀರು ಕುಡಿಯುತ್ತಿರುವ ರಾಕ್ಷಸೀ ಶಕ್ತಿಯಾಗಿ ಮಾರ್ಪಟ್ಟಿದೆ. ಕೆಲವು ದಶಕಗಳ ಆರ್ಥಿಕ ನೀತಿಗಳಿಂದಾಗಿ ಶ್ರೀಮಂತರು ಮತ್ತು ಬಡವರ ನಡುವಿನ ಕಂದಕ ಹೆಚ್ಚಾಗುತ್ತಲೇ ಇದೆ ಎಂದು ವಿಷಾದಿಸಿದರು.
ಬಹುರಾಷ್ಟ್ರೀಯ ಕಂಪನಿಗಳು ನಮ್ಮ ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟಿವೆ. ನಮ್ಮ ನಾಡಿನ ಹಿತಾಸಕ್ತಿ ಹಾಗೂ ಅಸ್ಮಿತೆ ರಕ್ಷಣೆಗಾಗಿ ನಮ್ಮ ನೆಲ, ಜಲ ಮತ್ತು ಸಂಸ್ಕೃತಿಯನ್ನು ಈ ಕಂಪನಿಗಳ ಹಿಡಿತದಿಂದ ಮುಕ್ತಗೊಳಿಸಬೇಕಿದೆ ಎಂದರು.
ಆಳುವ ವರ್ಗವು ಜನರ ಅಸಹಾಯಕತೆಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಆದ್ದರಿಂದ ರೈತರು, ಕಾರ್ಮಿಕರು ಕೇವಲ ಆರ್ಥಿಕ ಬೇಡಿಕೆಗಳಿಗಾಗಿ ಪ್ರತಿಭಟಿಸದೆ, ರಾಜಕೀಯ ಅಧಿಕಾರ ಮತ್ತು ಸಾಂವಿಧಾನಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕೃಷಿ ಕ್ಷೇತ್ರದ ವ್ಯಾಪಾರೀಕರಣ ತಡೆಯಲು ಜನಪದ ಚಳವಳಿಗಳು ಮರುಜೀವ ಪಡೆಯಬೇಕಿದೆ. ಶ್ರಮಿಕ ವರ್ಗವು ಸಂಘಟಿತವಾಗಿ ಹೋರಾಟ ಮಾಡಿದಾಗ ಮಾತ್ರ ಸಮಾನತೆಯ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಲೋಕೇಶ, ಜಿಲ್ಲಾಧ್ಯಕ್ಷ ಎಚ್.ಜಿ.ಉಮೇಶ ಆವರಗೆರೆ, ರಾಜ್ಯ ಜಂಟಿ ಕಾರ್ಯದರ್ಶಿ ಕೆ.ಎಸ್.ಜನಾರ್ದನ, ರಾಜ್ಯ ಖಜಾಂಚಿ ಶಾಂತರಾಜ್, ರಾಜ್ಯ ಸಮಿತಿ ಉಪಾಧ್ಯಕ್ಷರಾದ ಎಂ.ಸಿ. ಡೋಂಗ್ರೆ, ವೀರಣ್ಣ ಕೂಡ್ಲಿಗಿ, ಹರಿಹರ ತಾಲೂಕು ಸಿಪಿಐ ಕಾರ್ಯದರ್ಶಿ ಎಚ್.ಕೆ. ಕೊಟ್ರಪ್ಪ, ಜಿ. ಯಲ್ಲಪಪ, ಆವರಗೆರೆ ಚಂದ್ರು, ಐರಣಿ ಚಂದ್ರು, ಲೋಕಿಕೆರೆ ಆಂಜಿನಪ್ಪ, ರುದ್ರೇಶ್ ಮಳಲ್ಕೆರೆ, ಆವರೆಗೆರೆ ಬಾನಪ್ಪ ಇದ್ದರು. ದಾವಣಗೆರೆ, ಚಿತ್ರದುರ್ಗ, ಹಾವೇರಿ, ವಿಜಯನಗರ, ಕೊಪ್ಪಳ, ಕಲಬುರಗಿ, ತುಮಕೂರು ಸೇರಿ 8 ಜಿಲ್ಲೆಗಳಿಂದ 50 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಇಂದಿನ ನವ ಸಾಮ್ರಾಜ್ಯಷಾಹಿ ವಿರುದ್ಧ ಹೋರಾಟಕ್ಕಾಗಿ ಇಂದು ಎಲ್ಲ ಚಳವಳಿಗಳು ಒಂದಾಗುವುದು ಅನಿವಾರ್ಯವಾಗಿದೆ. ಇದರ ಮೂಲಕ ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿ-ಯುವಜನರ ಮೇಲಿನ ಶೋಷಣೆ ತಡೆಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net