ಪಠ್ಯ ತಾಕೀತು ವಿರುದ್ಧ ಕಾನೂನು ಹೋರಾಟ

 ದಾವಣಗೆರೆಯಲ್ಲಿ ಶಾಶ್ವತ ಅನುದಾನರಹಿತ ಶಾಲಾ ಮಂಡಳಿಗಳ ಸಂಘದ ಜಿಲ್ಲಾಧ್ಯಕ್ಷ ತ್ಯಾವಣಿಗೆ ವೀರಭದ್ರಸ್ವಾಮಿ ಸುದ್ದಿಗೋಷ್ಠಿ ನಡೆಸಿದರು.  ಎಚ್.ಜಿ. ಪ್ರಕಾಶ್, ಎಚ್.ಎಂ. ರುದ್ರಮುನಿಸ್ವಾಮಿ ಇದ್ದರು.
ದಾವಣಗೆರೆಯಲ್ಲಿ ಶಾಶ್ವತ ಅನುದಾನರಹಿತ ಶಾಲಾ ಮಂಡಳಿಗಳ ಸಂಘದ ಜಿಲ್ಲಾಧ್ಯಕ್ಷ ತ್ಯಾವಣಿಗೆ ವೀರಭದ್ರಸ್ವಾಮಿ ಸುದ್ದಿಗೋಷ್ಠಿ ನಡೆಸಿದರು. ಎಚ್.ಜಿ. ಪ್ರಕಾಶ್, ಎಚ್.ಎಂ. ರುದ್ರಮುನಿಸ್ವಾಮಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅನುದಾನರಹಿತ ಶಾಲಾ ಮಂಡಳಿಗಳ ಸಂಘದ ಎಚ್ಚರಿಕೆ
  • ಪುಸ್ತಕ ಖರೀದಿಗೆ ಸರ್ಕಾರಿ ಆದೇಶ ಹೊರಡಿಸಲು ಆಗ್ರಹ
  • ಅನಗತ್ಯ ತೊಂದರೆ ನೀಡಿದಲ್ಲಿ ನ್ಯಾಯಾಲಯ ಮೊರೆ
ದಾವಣಗೆರೆ: ಖಾಸಗಿ ಶಾಲೆಗಳಿಗೆ ಪಠ್ಯಪುಸ್ತಕ ಬೇಡಿಕೆ ವಿಷಯದಲ್ಲಿ ತೊಂದರೆ ನೀಡಿದಲ್ಲಿ ಕಾನೂನು ಹೋರಾಟ ಅನಿವಾರ್ಯವಾಗಲಿದೆ ಎಂದು ಶಾಶ್ವತ ಅನುದಾನರಹಿತ ಶಾಲಾ ಮಂಡಳಿಗಳ ಸಂಘದ ಜಿಲ್ಲಾಧ್ಯಕ್ಷ ತ್ಯಾವಣಿಗೆ ವೀರಭದ್ರಸ್ವಾಮಿ ತಿಳಿಸಿದರು.
ಸರ್ಕಾರದ ಮುದ್ರಣಾಲಯದಿಂದಲೇ ಅಗತ್ಯ ಪಠ್ಯಪುಸ್ತಕಗಳ ಖರೀದಿಗೆ ಶಾಶ್ವತ ಅನುದಾನರಹಿತ ಶಾಲೆಗಳು ಸಿದ್ಧವಿವೆ. ಆದರೆ, ನಿರ್ದಿಷ್ಟವಾಗಿ ಪುಸ್ತಕಗಳ ಖರೀದಿ ಕಡ್ಡಾಯ ಎಂಬುದಕ್ಕೆ ನಮ್ಮ ವಿರೋಧವಿದೆ. ಅನಗತ್ಯ ತೊಂದರೆ ನೀಡಿದಲ್ಲಿ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಠ್ಯಪುಸ್ತಕ ಬೇಡಿಕೆ ವಿಷಯದಲ್ಲಿ ಪ್ರತಿ ಜಿಲ್ಲೆಯಲ್ಲೂ ಪ್ರತ್ಯೇಕ ಕಾನೂನು ಜಾರಿ ಆಗುತ್ತಿದೆ. ಕಳೆದ ವರ್ಷದಿಂದ ಇಷ್ಟೇ ಪುಸ್ತಕಗಳನ್ನು ಕಡ್ಡಾಯವಾಗಿ ಖರೀದಿಸವೇಕೆಂದು ಒತ್ತಾಯ ಮಾಡಲಾಗುತ್ತಿದೆ. ಹಿಂದಿನ ವರ್ಷ ಬೇಕಿರುವ ಪುಸ್ತಕಗಳಿಗೆ ಶೇ.10ರಷ್ಟು ಮುಂಗಡ ಹಣ ನೀಡಲಾಗಿತ್ತು. ಈ ಬಾರಿ ಶೇ.25 ರಷ್ಟು ಹಣ ಮುಂಗಡವಾಗಿ ನೀಡಬೇಕೆಂದು ಒತ್ತಾಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ವರ್ಷಕ್ಕೊಮ್ಮೆ ಪಠ್ಯಪುಸ್ತಕಗಳ ಬದಲಾವಣೆ ಮಾಡಲಾಗುತ್ತಿದೆ. ಒಂದು ರೀತಿಯಲ್ಲಿ ವಾಣಿಜ್ಯೀಕರಣದ ಮಾದರಿಯಲ್ಲಿ ಪಠ್ಯಪುಸ್ತಕಗಳ ಬೇಡಿಕೆ ವಿಷಯದಲ್ಲಿ ನಡೆದುಕೊಳ್ಳಲಾಗುತ್ತಿದೆ. ಮುಂಗಡ ಹಣ ಜಮೆ ಮಾಡಿದರೂ ಅನೇಕ ಪುಸ್ತಕಗಳನ್ನು ಸಕಾಲಕ್ಕೆ ಪೂರೈಸುವುದಿಲ್ಲ. ಹಿಂದಿನ ವರ್ಷ ಹಲವಾರು ಪುಸ್ತಕಗಳು ಡಿಸೆಂಬರ್‌ವರೆಗೆ ಪೂರೈಕೆ ಮಾಡಿರಲಿಲ್ಲ. ನಮಗೆ ಪಾಲಕರ ಒತ್ತಡ ಇರುತ್ತದೆ. ಸರ್ಕಾರವೇ ಪುಸ್ತಕಗಳನ್ನು ಸಕಾಲಕ್ಕೆ ನೀಡದಿದ್ದರೆ ಹೇಗೆ? ಎಂದು ಪ್ರಶ್ನಿಸಿದರು.
ಶಾಶ್ವತ ಅನುದಾನರಹಿತ ಶಾಲೆಗಳಿಗೆ ಪುಸ್ತಕ ಖರೀದಿ ಕಡ್ಡಾಯವಿಲ್ಲ. ಆದರೂ, ಸುತ್ತೋಲೆ ಹೊರಡಿಸಿ ಇಂತಿಷ್ಟೇ ಪುಸ್ತಕಗಳನ್ನು ಕಡ್ಡಾಯವಾಗಿ ಖರೀದಿಸದಿದ್ದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎನ್ನಲಾಗುತ್ತಿದೆ. ನಿರ್ದಿಷ್ಟ ವಾಣಿಜ್ಯ ಮುದ್ರಣ ಸಂಸ್ಥೆಯಿಂದಲೇ ಖರೀದಿಸಬೇಕೆಂಬ ನಿಯಮವಿಲ್ಲ. ಆದರೂ ತೊಂದರೆ ಮಾಡಲಾಗುತ್ತಿದೆ ಎಂದು ದೂರಿದರು.
ಖಾಸಗಿ ಶಾಲೆಗಳು ಕಡ್ಡಾಯವಾಗಿ ಇಷ್ಟು ಪುಸ್ತಕಗಳನ್ನು ಖರೀದಿಸಬೇಕೆಂಬ ಸರ್ಕಾರದ ಆದೇಶ ನೀಡದ ಹೊರತು ಯಾವುದೇ ಸುತ್ತೋಲೆಗಳನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಜಿ. ಪ್ರಕಾಶ್, ಎಚ್.ಎಂ. ರುದ್ರಮುನಿಸ್ವಾಮಿ, ಮಂಜುನಾಥ ಸ್ವಾಮಿ, ಮಲ್ಲಿಕಾರ್ಜುನ್, ವೀರೇಶ್ ಬಿರಾದಾರ್, ಪರಮೇಶ್ವರಪ್ಪ, ಪಂಚಾಕ್ಷರಿ, ಬಾತಿ ನಾಗರಾಜ್, ಚೇತನ್‌ಕುಮಾರ್, ಗಂಗಾಧರಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net