ಹೊನ್ನಾಳಿ ಪೊಲೀಸ್ ಠಾಣೆ ಆವರಣದಲ್ಲಿ ಹಮ್ಮಿಕೊಂಡಿದ್ದ ಹಳೆಯ ಆರೋಪಿಗಳ ಪರೇಡ್‌ನಲ್ಲಿ ಚನ್ನಗಿರಿ ಡಿವೈಎಸ್ಪಿ ರುದ್ರೇಶ್ ಉಜ್ಜಿನಕೊಪ್ಪ ಅವರು ಆರೋಪಿಗಳಿಗೆ ಎಚ್ಚರಿಕೆ ನೀಡಿದರು. ಸುನಿಲ್‌ಕುಮಾರ್, ರವಿಕುಮಾರ್, ನಿರ್ಮಲಾ, ಕುಮಾರ್, ಹೊಳೆಬಸಪ್ಪ ಹೋಳಿ ಇತರರಿದ್ದರು.Parade
ಹೊನ್ನಾಳಿ:ಒಮ್ಮೆ ಕಳ್ಳತನದ ಆರೋಪ ಹೊತ್ತು ಜೈಲಿಗೆ ಹೋಗಿ ಬಂದರೆ ಸಮಾಜ ನಿಮ್ಮನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ನಂತರ ನೀವು ತಪ್ಪು ಮಾಡದಿದ್ದರೂ ಸಮಾಜ ಅನುಮಾನದಿಂದಲೇ ನೋಡುತ್ತದೆ. ಆದ್ದರಿಂದ ಕೆಟ್ಟ ದಾರಿ ಬಿಟ್ಟು ಕಷ್ಟಪಟ್ಟು ದುಡಿದು ಗೌರವದಿಂದ ಜೀವನ ನಡೆಸಿ ಎಂದು ಚನ್ನಗಿರಿ ಉಪ ವಿಭಾಗದ ಡಿವೈಎಸ್ಪಿ ರುದ್ರೇಶ್ ಉಜ್ಜಿನಕೊಪ್ಪ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಭಾನುವಾರ ಹೊನ್ನಾಳಿ ಹಾಗೂ ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯ ಆರೋಪಿಗಳು ಹಾಗೂ ಗಾಂಜಾ ವ್ಯಸನಿಗಳ ಪರೇಡ್ ನಡೆಸಿ ಮಾತನಾಡಿದರು.
ಯಾವುದೋ ಕಾರಣಕ್ಕೆ ಅಥವಾ ಕೆಟ್ಟ ಸ್ನೇಹಿತರ ಸಹವಾಸದಿಂದ ನೀವು ತಪ್ಪು ಮಾಡಿರಬಹುದು. ಆದರೆ ನಿಮ್ಮ ಕೃತ್ಯಗಳಿಂದ ಕುಟುಂಬದ ಮೇಲಾಗುವ ಪರಿಣಾಮಗಳನ್ನು ಒಮ್ಮೆಯಾದರೂ ಯೋಚಿಸಿದ್ದೀರಾ? ನೀವು ಜೈಲಿಗೆ ಹೋದರೆ ನಿಮ್ಮ ಪಾಲಕರು, ಪತ್ನಿ ಮತ್ತು ಮಕ್ಕಳು ಸಮಾಜದಲ್ಲಿ ಎಷ್ಟು ನಿಂದನೆ ಎದುರಿಸಬೇಕಾಗುತ್ತದೆ ಎಂಬುದರ ಅರಿವು ನಿಮಗಿರಲಿ. ಸಮಾಜಘಾತಕ ಕೆಲಸಗಳನ್ನು ಬಿಟ್ಟು ಇತರರಿಗೆ ಮಾದರಿಯಾಗಿ ಬದುಕಿ ಎಂದು ಕಿವಿಮಾತು ಹೇಳಿದರು.
ಆರೋಪಿಗಳು ವಾಸಿಸುವ ಸ್ಥಳದ ಠಾಣೆಗಳಿಗೆ ಇವರ ಸಂಪೂರ್ಣ ಮಾಹಿತಿ ನೀಡಿ, ಪ್ರತಿನಿತ್ಯ ಇವರ ಚಟುವಟಿಕೆಗಳ ಮೇಲೆ ನಿಗಾ ವಹಿಸುವಂತೆ ಹೊನ್ನಾಳಿ ಇನ್ಸ್‌ಪೆಕ್ಟರ್ ಸುನಿಲ್‌ಕುಮಾರ್ ಹಾಗೂ ನ್ಯಾಮತಿ ಇನ್ಸ್‌ಪೆಕ್ಟರ್ ರವಿಕುಮಾರ್ ಅವರಿಗೆ ಸೂಚಿಸಿದರು.
ಪೊಲೀಸ್ ಇನ್ಸ್‌ಪೆಕ್ಟರ್ ಸುನಿಲ್‌ಕುಮಾರ್ ಮಾತನಾಡಿ, ಇನ್ನೊಬ್ಬರು ಕಷ್ಟಪಟ್ಟು ಸಂಪಾದಿಸಿದ ಹಣ, ಒಡವೆಗಳನ್ನು ಕಳ್ಳತನ ಮಾಡಿದರೆ ಅವರ ಪರಿಸ್ಥಿತಿ ಏನಾಗಬಹುದು ಎಂದು ಊಹಿಸಿ. ಇನ್ನಾದರೂ ದುಡಿದು ತಿನ್ನುವ ಗುಣ ಬೆಳೆಸಿಕೊಳ್ಳಿ ಎಂದರು.
ಪರೇಡ್‌ನಲ್ಲಿ ನ್ಯಾಮತಿ ಬ್ಯಾಂಕ್ ದರೋಡೆ, ಚಿನ್ನಾಭರಣ- ಜಾನುವಾರು- ಬೈಕ್- ಪಂಪ್‌ಸೆಟ್ ಪರಿಕರಗಳ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಾಗೂ ಜಾಮೀನಿನ ಮೇಲೆ ಹೊರಬಂದಿದ್ದ ಹೊನ್ನಾಳಿ ವ್ಯಾಪ್ತಿಯ 79 ಹಾಗೂ ನ್ಯಾಮತಿ ವ್ಯಾಪ್ತಿಯ 40 ಆರೋಪಿಗಳನ್ನು ಹಾಜರುಪಡಿಸಲಾಗಿತ್ತು.
ನ್ಯಾಮತಿ ಪೊಲೀಸ್ ಇನ್ಸ್‌ಪೆಕ್ಟರ್ ರವಿಕುಮಾರ್, ಹೊನ್ನಾಳಿ ಪಿಎಸ್‌ಐಗಳಾದ ನಿರ್ಮಲಾ, ಕುಮಾರ್, ನ್ಯಾಮತಿ ಪಿಎಸ್‌ಐ ಹೊಳೆಬಸಪ್ಪ ಹೋಳಿ, ಎಎಸ್‌ಐಗಳಾದ ಹರೀಶ್, ಪ್ರಕಾಶ್‌ನಾಯ್ಕ, ಅಶೋಕ್‌ರೆಡ್ಡಿ, ಪರಮೇಶ್ವರ್‌ನಾಯ್ಕ, ರಾಮಚಂದ್ರ, ಚೇತನ್‌ಕುಮಾರ್ ಸೇರಿ ಹಲವಾರು ಪೊಲೀಸರು ಇದ್ದರು.