ದಾವಣಗೆರೆ :ಭಾಷಾ ಬೋಧನೆ ಎಲ್ಲರಿಗೂ ಸುಲಭವಾಗಿ ಒಲಿಯುವುದಿಲ್ಲ. ಇದಕ್ಕೆ ಅಪಾರ ಶ್ರಮ, ತಾಳ್ಮೆ ಮತ್ತು ಸತತ ಪ್ರಯತ್ನದ ಅಗತ್ಯವಿದೆ ಎಂದು ಹಾಸನದ ನಿವೃತ್ತ ಪ್ರಾಚಾರ್ಯ, ಶಿಕ್ಷಣ ತಜ್ಞ ಡಾ. ಓಬಳೇಶ್ ಘಟ್ಟಿ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬೇರು-ಚಿಗುರು (ಕನ್ನಡ ಸಾಹಿತ್ಯ-ಸಂಶೋಧಕರ ವಿಚಾರ ವೇದಿಕೆ) ಸಹಯೋಗದಲ್ಲಿ ನಗರದ ರೋಟರಿ ಬಾಲಭವನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕನ್ನಡ ಭಾಷಾ ಬೋಧನೆಯ ಕೌಶಲಗಳು’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಪರಿಣಾಮಕಾರಿ ಬೋಧನೆಗೆ ಶಿಕ್ಷಕರಲ್ಲಿ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮ ಮುಖ್ಯ. ಬೋಧನೆಯಲ್ಲಿ ಶಾರೀರಿಕ ಭಾಷೆ (‘ಬಾಡಿ ಲ್ಯಾಂಗ್ವೇಜ್’) ಪ್ರಮುಖ ಪಾತ್ರ ವಹಿಸುತ್ತದೆ. ಪಾಠ ಮಾಡುವಾಗ ಶಿಕ್ಷಕರು ಕೇವಲ ಬಾಯಿ ಮಾತಿಗಷ್ಟೇ ಸೀಮಿತವಾಗದೆ, ಅವರ ಹಾವಭಾವಗಳು ಕಲಿಕೆಗೆ ಪೂರಕವಾಗಿರಬೇಕು ಎಂದು ತಿಳಿಸಿದರು.
ಇಡೀ ವಿದ್ಯಾರ್ಥಿಗಳ ಗುಂಪನ್ನು ಗಮನಿಸುತ್ತ, ಕಣ್ಣ ಸಂಪರ್ಕ (ಐ ಕಾಂಟ್ಯಾಕ್ಟೃ್) ಸಾಧಿಸಬೇಕು. ಮುಖಭಾವಗಳು ಮತ್ತು ಕೈ ಬೆರಳುಗಳ ಚಲನೆಗಳು ಪಾಠದ ಸನ್ನಿವೇಶಕ್ಕೆ ತಕ್ಕಂತಿದ್ದಾಗ ಕಲಿಕೆ ಆಸಕ್ತಿದಾಯಕವಾಗುತ್ತದೆ. ಭಾಷೆಯನ್ನು ಜೀವನ ಕೌಶಲವಾಗಿ ಅಳವಡಿಸಿಕೊಂಡಾಗ ಮಾತ್ರ ಪರಿಪೂರ್ಣ ಅಭಿವ್ಯಕ್ತಿ ಸಾಧ್ಯ ಎಂದರು.
ಎಸ್.ಎಂ.ಎಸ್. ಕಾಲೇಜು ಪ್ರಾಚಾರ್ಯ ಡಾ.ಅಂಜನಪ್ಪ ಡಿ.ಕೆ. ಅಧ್ಯಕ್ಷತೆ ವಹಿಸಿದ್ದರು. ಡಾ.ರುದ್ರಮುನಿ ಹಿರೇಮಠ, ಡಾ.ಧನಂಜಯ ಕೆ.ಆರ್. ಇದ್ದರು. ದಾವಣಗೆರೆ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರಾಘವೇಂದ್ರ ಕೆ.ಆರ್. ಹಾಗೂ ಎ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯದ ಆಂಜನೇಯ ಕಾರ್ಯಕ್ರಮ ನಿರೂಪಿಸಿದರು.
ಕೇವಲ ಅಕ್ಷರಗಳ ಕಲಿಕೆಯಲ್ಲ
ಭಾಷೆಯು ಕೇವಲ ಅಕ್ಷರಗಳ ಕಲಿಕೆಯಲ್ಲ, ಅದೊಂದು ನಿರಂತರ ವಿಕಸನಗೊಳ್ಳುವ ಅದ್ಭುತ ಕೌಶಲ. ಭಾಷೆ ಮನುಷ್ಯನ ಅಭಿವ್ಯಕ್ತಿಯ ಪ್ರಬಲ ಮಾಧ್ಯಮವಾಗಿದ್ದು, ಇದನ್ನು ಮೈಗೂಡಿಸಿಕೊಳ್ಳುವುದು ಅಪೂರ್ವ ಕಲೆ ಎಂದು ಡಾ. ಓಬಳೇಶ್ ಘಟ್ಟಿ ಅಭಿಪ್ರಾಯಪಟ್ಟರು.
ಭಾಷಾ ಕೌಶಲವೆಂದರೆ ಕೇವಲ ವ್ಯಾಕರಣ ಅಥವಾ ಪದ ಬಳಕೆಯಲ್ಲ, ಅದೊಂದು ತಂತ್ರ ಹಾಗೂ ನೈಪುಣ್ಯತೆಯ ಸಮ್ಮಿಶ್ರಣ. ಒಬ್ಬ ಉತ್ತಮ ವಾಗ್ಮಿ ಅಥವಾ ಓದುಗನಾಗಲು ಭಾಷೆಯನ್ನು ಅತ್ಯಂತ ಕುಶಲತೆಯಿಂದ ಬಳಸುವ ಕಲೆ ಗೊತ್ತಿರಬೇಕು ಎಂದರು.
ಮಗುವಿನಿಂದ ಹಿಡಿದು ಉಪನ್ಯಾಸಕರ ವರೆಗೆ ಪ್ರತಿಯೊಬ್ಬರಿಗೂ ಆಲಿಸುವ, ಮಾತನಾಡುವ, ಓದುವ, ಬರೆಯುವ ಮತ್ತು ಚಿಂತಿಸುವ ಸಾಮರ್ಥ್ಯ ಅತ್ಯಗತ್ಯ. ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ನಂತರ ಭಾಷೆ ಕೇವಲ ಕಲಿಕೆಯಾಗಿ ಉಳಿಯದೆ, ಅಭಿವೃದ್ಧಿಯಾಗಿ ರೂಪಾಂತರಗೊಳ್ಳುತ್ತದೆ ಎಂದು ವಿವರಿಸಿದರು.
ಮೌಖಿಕ ಭಾಷೆಯು ಶಿಕ್ಷಕರಿಗೆ ವರದಾನವಾಗಬೇಕು. ಮಾತು ಸ್ಪಷ್ಟ ಹಾಗೂ ಅರ್ಥವತ್ತಾಗಿರಬೇಕು. ಶಬ್ದ ಭಂಡಾರ ಇಲ್ಲದವನು ಭಾವನಾ ವೈವಿಧ್ಯವನ್ನು ಅರಿಯಲು ಸಾಧ್ಯವಿಲ್ಲ. ಹೊಸ ಪದಗಳ ಬಳಕೆ ಶಿಕ್ಷಕರಿಗೆ ವಿಷಯ ಮಂಡಿಸಲು ಶಕ್ತಿ ತುಂಬುತ್ತದೆ. ಸ್ಪಷ್ಟತೆ ಮತ್ತು ನಿರರ್ಗಳತೆಯ ಜತೆಗೆ ಲಿಖಿತ ಭಾಷೆಯೂ ಅಷ್ಟೇ ಪ್ರಭಾವಶಾಲಿಯಾಗಿರಬೇಕು ಎಂದು ಓಬಳೇಶ್ ಘಟ್ಟ ಆಶಯ ವ್ಯಕ್ತಪಡಿಸಿದರು.