ಅಭಿಮಾನೋತ್ಸವ ಕಾರ್ಯಕ್ರಮದ ಸಿದ್ಧತೆ ಕುರಿತು ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾಹಿತಿ ನೀಡಿದರು. ಮುಖಂಡರಾದ ಬಿ.ಜಿ. ಅಜಯಕುಮಾರ್, ಡಾ. ಎ.ಎಚ್. ಶಿವಯೋಗಿಸ್ವಾಮಿ, ಎಂ.ಬಸವರಾಜನಾಯ್ಕ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಾಜಿ ಸಚಿವ ರೇಣುಕಾಚಾರ್ಯ ಮಾಹಿತಿ
ದಕ್ಷಿಣ ಕ್ಷೇತ್ರದ ಫಲಿತಾಂಶ ದಿಕ್ಸೂಚಿಯಲ್ಲ
2028ಕ್ಕೆ ಕಾಂಗ್ರೆಸ್‌ಮುಕ್ತ ದಾವಣಗೆರೆ ಜಿಲ್ಲೆ
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಲ್ಲಿಸಿದ 50 ವರ್ಷದ ಸಾರ್ವಜನಿಕ ಸೇವೆ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿರುವ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ದಾವಣಗೆರೆ ಜಿಲ್ಲೆಯಿಂದ 1 ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಜಿಲ್ಲೆಯಿಂದ ನೂರಾರು ಬಸ್, ಕಾರು, ಟಿಟಿ ಹಾಗೂ ಮಿನಿ ಬಸ್‌ಗಳಲ್ಲಿ ಅಭಿಮಾನಿಗಳು ತೆರಳುವರು. ಜನರು ಸ್ವಯಂಪ್ರೇರಿತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒನಕೆ ಓಬವ್ವ, ಮದಕರಿನಾಯಕರ ಐತಿಹಾಸಿಕ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಖಾತೆ ತೆರೆಯುವುದೇ ಕಷ್ಟವಿದ್ದ ಕಾಲದಲ್ಲಿ ನಿರಂತರ ಹೋರಾಟ, ಪಾದಯಾತ್ರೆ ನಡೆಸಿದರು. ಅಭಿವೃದ್ಧಿ ಎಂದರೇನೆ ಯಡಿಯೂರಪ್ಪ ಎಂದರು.
ಸಿಎಂ ಆಗಿದ್ದ ಕಾಲದಲ್ಲಿ ಮೊದಲ ಕೃಷಿ ಬಜೆಟ್ ಮಂಡನೆ, ಶಾಲಾ ಮಕ್ಕಳಿಗೆ ಬೈಸಿಕಲ್ ವಿತರಣೆ, ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್, ಕೋವಿಡ್‌ನಲ್ಲಿ ಮೃತರಾದವರಿಗೆ ಧನಸಹಾಯ, ಕಿಸಾನ್ ಸಮ್ಮಾನ್ ಮೂಲಕ ರೈತರಿಗೆ 4 ಸಾವಿರ ರೂ, ಮನೆ ಕಳೆದುಕೊಂಡವರಿಗೆ 3ರಿಂದ 5 ಲಕ್ಷ ರೂ. ನೆರವು ನೀಡಿದರು. ದಾವಣಗೆರೆ ವಿವಿ, ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಆರಂಭಕ್ಕೆ ಕಾರಣರಾದರು ಎಂದು ಸ್ಮರಿಸಿದರು.
ಅಭಿಮಾನೋತ್ಸವ ಇದೊಂದು ಪಕ್ಷಾತೀತ ಕಾರ್ಯಕ್ರಮ. ಬಿಜೆಪಿಯ ಯಾವುದೇ ಒಂದು ಬಣದ್ದಲ್ಲ. ಅಮಿತ್ ಶಾ ಸೇರಿ ಪಕ್ಷದ ವಿವಿಧ ಸ್ತರದ ನಾಯಕರು, ಮಠಾಧೀಶರು ಭಾಗಿಯಾಗಲಿದ್ದಾರೆ ಎಂದರು.
ಪಕ್ಷದಲ್ಲಿ ನಾವು ಒಟ್ಟಾಗಿಯೇ ಇದ್ದೇವೆ. ಯಡಿಯೂರಪ್ಪ ಅವರ ಬಗ್ಗೆ ಅಭಿಮಾನ ಇದ್ದವರು ಯಾರೇ ಸುದ್ದಿಗೋಷ್ಠಿ ನಡೆಸಿದರೂ ತಪ್ಪಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಫಲಿತಾಂಶ, ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯಲ್ಲ. ಇಲ್ಲಿ ಕಾಂಗ್ರೆಸ್ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ಹಣಬಲ ಬಳಸಿದೆ. ದೇಶದಲ್ಲಿ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಆಡಳಿತವಿಲ್ಲ. 2028ರ ಚುನಾವಣೆಯಲ್ಲೂ ದಾವಣಗೆರೆ ಕಾಂಗ್ರೆಸ್‌ಮುಕ್ತ ಜಿಲ್ಲೆಯಾಗಲಿದೆ ಎಂದು ಹೇಳಿದರು.
ಮೇಲ್ಮನೆ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ ಯಡಿಯೂರಪ್ಪ ಅವರದು ಜನಪರ ಕಾಳಜಿ ಇರುವ ವ್ಯಕ್ತಿತ್ವ. ಒಬ್ಬ ವ್ಯಕ್ತಿಯ ಬದಲಾಗಿ ಅವರ ವ್ಯಕ್ತಿತ್ವಕ್ಕೆ ಸಲ್ಲಿಸುವ ಪ್ರತಿಸ್ಪಂದನೆಯ ಭಾಗವಾಗಿ ಅಭಿಮಾನೋತ್ಸವ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು.
2009ರ ತರಳಬಾಳು ಹುಣ್ಣಿಮೆಯಲ್ಲಿ ಘೋಷಣೆ ಮಾಡಿದ ದಾವಣಗೆರೆ ವಿವಿಯನ್ನು ಕೆಲವೇ ತಿಂಗಳಲ್ಲಿ ಸ್ಥಾಪಿಸಿದ್ದ ಯಡಿಯೂರಪ್ಪ ಅವರು, ಭದ್ರಾ ನಾಲಾ ಆಧುನೀಕರಣಕ್ಕೆ 870 ಕೋಟಿ ರೂ. ದಾವಣಗೆರೆ ಪಾಲಿಕೆಗೆ ವಿಶೇಷ 100 ಕೋಟಿ ರೂ, ಅನುದಾನ ತಂದಿದ್ದು ಸ್ಮರಣೀಯ. ನಗರದ ವಿವಿಧ ದೇಗುಲಗಳಿಗೂ 1 ಕೋಟಿ ರೂ. ನೆರವು ನೀಡಿದ್ದರು ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಬಿ.ಜಿ. ಅಜಯಕುಮಾರ್, ಲೋಕಿಕೆರೆ ನಾಗರಾಜ್, ಎಂ.ಬಸವರಾಜನಾಯ್ಕ, ರುದ್ರೇಗೌಡ, ಆರನೇಕಲ್ಲು ವಿಜಯಕುಮಾರ್, ಜರೀಕಟ್ಟೆ ಹನುಮಂತಪ್ಪ, ಬೆಳ್ಳೂಡಿ ಮಂಜುನಾಥ್, ಮಂಜುನಾಥ ಪೈಲ್ವಾನ್, ವಿಶ್ವನಾಥ್ ಇದ್ದರು.