ಹೊನ್ನಾಳಿ ತಾಲೂಕು ಕುಂಚಿಟಿಗ ಸಮುದಾಯ ಭವನದಲ್ಲಿ ಪದಗ್ರಹಣ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳ ಪುರಸ್ಕಾರ ಸಮಾರಂಭವನ್ನು ಕರ್ನಾಟಕ ಕೌಶಲಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಉದ್ಘಾಟಿಸಿದರು. ಕುರುವ ಗಣೇಶ, ಡಿ.ಜಿ.ಸುರೇಂದ್ರಗೌಡ, ವಿರೇಶ್ ಹನಗವಾಡಿ, ಮಂಜಪ್ಪ, ಬಿ.ಟಿ.ಚನ್ನಬಸಪ್ಪ ಕುಳಗಟ್ಟೆ ಇದ್ದರು. Kunchitiga
ಹೊನ್ನಾಳಿ: ಕುಂಚಿಟಿಗ ಸಮಾಜ ಸಂಘಟನೆ ಮಾಡುವುದಲ್ಲದೆ ನಮ್ಮ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಪುರಸ್ಕಾರ ನೀಡಿ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಕರ್ನಾಟಕ ಕೌಶಲಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಹೇಳಿದರು. Kunchitiga
ಪಟ್ಟಣದಲ್ಲಿರುವ ಕುಂಚಿಟಿಗರ ಸಮುದಾಯ ಭವನದಲ್ಲಿ ದಾವಣಗೆರೆ, ಹಾವೇರಿ ಜಿಲ್ಲೆಗಳ ತಾಲೂಕು ಕುಂಚಿಟಿಗರ ಒಕ್ಕೂಟ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ತಾಲೂಕು ಕುಂಚಿಟಿಗರ ಒಕ್ಕೂಟದ ಪದಗ್ರಹಣ ಮತ್ತು ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ, ಆಧುನಿಕ ಜಗತ್ತಿನಲ್ಲಿ ಕುಂಚಿಟಿಗರ ಸಮಾಜದ ಮಕ್ಕಳು ಐಎಎಸ್, ಐಪಿಎಸ್ ಮತ್ತು ವೈದ್ಯಕೀಯ ಶಿಕ್ಷಣದಲ್ಲಿ ಹೆಚ್ಚು ಆಸಕ್ತಿ ವಹಿಸಿ ಉನ್ನತ ಹುದ್ದೆಯನ್ನು ಪಡೆಯಬೇಕು ಎಂಬುದು ನಮ್ಮ ಆಶಯ ಎಂದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಹೆಚ್ಚು ಮಹತ್ವ ಪಡೆದಿದೆ. ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವತ್ತ ಗಮನಹರಿಸಬೇಕು ಎಂದು ತಿಳಿಸಿದರು.
ಚಿತ್ರದುರ್ಗ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಮಾತನಾಡಿ, ತಾಲೂಕು ಕುಂಚಿಟಿಗ ಸಮಾಜ ಎಲ್ಲ ಸಮಾಜದವರ ಜತೆ ಉತ್ತಮವಾದ ಸಂಬಂಧವನ್ನು ಹೊಂದಿದೆ. ಕುಂಚಿಟಿಗ ಸಮಾಜದ ಟ್ರಸ್ಟ್ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕುಂಚಿಟಿಗ ಸಮಾಜದ ಜಿಲ್ಲಾಧ್ಯಕ್ಷ ಜಿ.ರಂಗನಗೌಡ ನಿಲೊಗಲ್ ಮಾತನಾಡಿ, ಕುಂಚಿಟಿಗ ಎಂಬ ಪುಸ್ತಕ ಹೊರತರಲು ಶ್ರಮಿಸಿದ್ದೇನೆ. ಸಮಾಜದ ಎಲ್ಲ ಬಂಧುಗಳು ಓದಿ ಮನನ ಮಾಡಿಕೊಳ್ಳಬೇಕು ಎಂದರು.
ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪ್ರತಿಭಾನ್ವಿತ ಮಕ್ಕಳು, ಶಿಕ್ಷಕರು, ಮಾಜಿ ಸೈನಿಕರು, ಮುರಾರ್ಜಿ ಮತ್ತು ನವೋದಯ ಪರೀಕ್ಷೆಯಲ್ಲಿ ಪಾಸಾದ ಮಕ್ಕಳಿಗೆ, ಉತ್ತಮ ಸೇವೆ ಸಲ್ಲಿಸಿದ ನೌಕರರನ್ನು ಸನ್ಮಾನಿಸಲಾಯಿತು.
ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಕುರುವ ಗಣೇಶ, ದಾವಣಗೆರೆ ಡಿಸಿಸಿ ಬ್ಯಾಂಕ್ ನಿದೇರ್ಶಕ ಡಿ.ಜಿ.ಸುರೇಂದ್ರಗೌಡ, ಬಿಜೆಪಿ ಮುಖಂಡ ವೀರೇಶ್‌ಹನಗವಾಡಿ, ಟೀಂ ಅಕಾಡೆಮಿ ಸದಸ್ಯ ಮಂಜಪ್ಪ, ತಾಲೂಕು ಕುಂಚಿಟಿಗರ ಒಕ್ಕೂಟ ಟ್ರಸ್ಟ್ ಅಧ್ಯಕ್ಷ ಬಿ.ಟಿ.ಚನ್ನಬಸಪ್ಪ ಕುಳಗಟ್ಟೆ ಮಾತನಾಡಿದರು.
ಶಿಕ್ಷಣಕ್ಕೆ ಆದ್ಯತೆ ನೀಡಿ: ಪ್ರತಿಯೊಂದು ಸಮಾಜದಲ್ಲಿ ಬಡತನದಲ್ಲಿ ಬೆಳೆದ ವಿದ್ಯಾರ್ಥಿಗಳಿದ್ದಾರೆ. ಅಂಥಹ ಮಕ್ಕಳನ್ನು ಗುರುತಿಸಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆಗ ನಿಮ್ಮ ಸಮಾಜಮುಖಿ ಸೇವೆ ಸಾರ್ಥಕ ಪಡೆಯುತ್ತದೆ. ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವಂಥಹ ಕೆಲಸವಾಗಬೇಕು. ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ಸಮುದಾಯದ ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕಾರ ನೀಡುವ ಮೂಲಕ ಅವರನ್ನು ಮತ್ತಷ್ಟು ಉತ್ತೇಜಿಸಬೇಕು ಎಂದು ಹರಿಹರ ಶಾಸಕ ಬಿ.ಪಿ.ಹರೀಶ್ ಹೇಳಿದರು.