ಕೊಡಗನೂರು, ಸುಲ್ತಾನಿಪುರ ರಸ್ತೆ ಸಂಪೂರ್ಣ ಹಾಳು

ಭಯದಲ್ಲಿ ಸಂಚರಿಸುವ ಸವಾರರು, ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ
Road
ಆನಗೋಡು ಹೋಬಳಿ ಕಂದನಕೋವಿ ಸಮೀಪ ಮಂಡ್ಯ ಹಡಗಲಿ ರಾಜ್ಯ ಹೆದ್ದಾರಿ 47 ಕಿತ್ತು ಹಾಳಾಗಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿರುವುದು.Road
Published on: 

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ

ಹೋಬಳಿಯ ಕೊಡಗನೂರು- ಸುಲ್ತಾನಿಪುರ ಕೆರೆ ಏರಿಯ ಮೇಲೆ ಹಾದು ಹೋಗಿರುವ ಮಂಡ್ಯ- ಹಡಗಲಿ ರಾಜ್ಯ ಹೆದ್ದಾರಿ 47 ಅಕ್ಷರಶಃ ಕಿತ್ತು ಹಾಳಾಗಿದ್ದು ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿವೆ, ಚಾಲಕರು ಈ ರಸ್ತೆಯಲ್ಲಿ ವಾಹನ ಚಲಾಯಿಸಲು ಪರದಾಟ ನಡೆಸುವ ಸ್ಥಿತಿ ಇದೆ.

ಏರಿ ಮೇಲಿನ ರಸ್ತೆಯಲ್ಲಿ ನಿತ್ಯ ಬೃಹತ್ ಲಾರಿಗಳು, ಬಸ್‌ಗಳು ದಾವಣಗೆರೆ, ಚಿತ್ರದುರ್ಗ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ಆನಗೋಡು ತಲುಪಿ ಇದೇ ರಸ್ತೆ ಮೂಲಕ ಬೆಂಗಳೂರು, ಮೈಸೂರು, ಹಾಸನ, ಅರಸೀಕೆರೆ, ಹೊಳಲ್ಕೆರೆ, ಹೊಸದುರ್ಗ, ಚಿಕ್ಕಜಾಜೂರು ಮಾರ್ಗವಾಗಿ ಸಂಚರಿಸುತ್ತವೆ. ಈ ಏರಿ ರಸ್ತೆಯ ಮೇಲೆ ಪ್ರಾಣ ಭಯದಲ್ಲಿ ವಾಹನ ಚಲಾಯಿಸುವ ದುಸ್ಥಿತಿ ಇದೆ.

5.50 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆ ದುರಸ್ತಿ (ಬಂಡಿಂಗ್) ಕಾಮಗಾರಿ ಮುಗಿಸಿದೆ, ಆದರೆ ಹಾಳಾಗಿರುವ ಏರಿಯ ಮೇಲಿನ ರಸ್ತೆಯ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಮಾತ್ರ ಮುಂದಾಗಿಲ್ಲ.

ಅಭಿವೃದ್ಧಿ ಮರಿಚಿಕೆ

ಮಂಡ್ಯ- ಹಡಗಲಿ ರಾಜ್ಯ ಹೆದ್ದಾರಿ ಜಿಲ್ಲೆಯ ಹಲವು ಗ್ರಾಮೀಣ ರಸ್ತೆಗಳು ಹಲವು ಕಡೆಗಳಲ್ಲಿ ಕಿತ್ತು ಹಾಳಾಗಿ ಸಂಚಾರಕ್ಕೆ ತೊಡ ಕಾದರೂ ಜನಪ್ರತಿನಿಧಿಗಳಾಗಲಿ, ರಾಜ್ಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾಗಲಿ ತಲೆ ಕೆಡಿಸಿ ಕೊಳ್ಳುತ್ತಿಲ್ಲ. ಹೆದ್ದಾರಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಯಾವಾಗ ಎಂಬುದೇ ಪ್ರಶ್ನೆಯಾಗಿದೆ.

ರಸ್ತೆಗೆ ಚಾಚಿದ ಗಿಡಗಂಟಿ

ಸುಲ್ತಾನಿಪುರ ಹಾಗೂ ಕೊಡಗನೂರು ಕೆರೆ ಏರಿಗಳ ಮೇಲಿನ ಹೆದ್ದಾರಿ ಇಕ್ಕೆಲಗಳಲ್ಲಿ ದೊಡ್ಡ ದೊಡ್ಡ ಮರಗಳು ಒಣಗಿ ನಿಂತಿವೆ, ಅಕ್ಕ ಪಕ್ಕ ಗಿಡಗಳು ಬೆಳೆದು ಹೆದ್ದಾರಿಗೆ ಚಾಚಿವೆ. ರಸ್ತೆಯ ತಿರುವುಗಳಲ್ಲಿ ರಸ್ತೆ ಕಾಣದೆ ಹಲವು ಅನಾಹುತ ನಡೆದಿವೆ. ಹೆದ್ದಾರಿ ಹಾಳಾಗಿರುವುದರಿಂದ ಹಲವು ಕಡೆ ಅಪಘಾತ ಸಂಭವಿಸಿ ಸಾಕಷ್ಟು ಜನರು ಜೀವ ಕಳೆದುಕೊಂಡಿರುವ ನಿದರ್ಶನಗಳಿವೆ.

ರಸ್ತೆಯ ಸಂಪರ್ಕ

ಮಂಡ್ಯ- ಹಡಗಲಿ ರಾಜ್ಯ ಹೆದ್ದಾರಿ 47 ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಯಿಂದ ಹರಪನಹಳ್ಳಿ, ಅರಸೀಕೆರೆ, ಉಚ್ಚಂಗಿದುರ್ಗ, ದಾವಣಗೆರೆ ತಾಲೂಕಿನ ಅಣಜಿ, ಕಂದನಕೋವಿ, ಆನಗೋಡು, ಸುಲ್ತಾನಿಪುರ, ಕೊಡಗನೂರು ಕೆರೆ ಏರಿಯ ಮೂಲಕ ಮಾಯಕೊಂಡ ಹೊರವಲಯದಲ್ಲಿ ಹಾದು ಹೋಗಿದ್ದು ಸಾಸಲುಹಳ್ಳ, ಚಿಕ್ಕಜಾಜೂರು, ಹೊಳಲ್ಕೆರೆ, ಹೊಸದುರ್ಗ ಮಾರ್ಗವಾಗಿ ತುಮಕೂರು, ಅರಸೀಕೆರೆ ಹಾಸನ, ಮಂಡ್ಯ, ಬೆಂಗಳೂರು, ಮೈಸೂರು ನಗರಗಳನ್ನು ಸಂಪರ್ಕಿಸುತ್ತದೆ. ಹರಪನಹಳ್ಳಿಯಿಂದ ಅರಸೀಕೆರೆ, ಉಚ್ಚಂಗಿದುರ್ಗ ಹಾಗೂ ಅಣಜಿ ಗ್ರಾಮ ಸಂಪರ್ಕಿಸುವ ರಸ್ತೆಯಲ್ಲಿ ಸಂಚರಿಸುವುದಂತೂ ನರಕ ಸದೃಶ್ಯವೇ ಸರಿ.

ಮಂಡ್ಯ- ಹಡಗಲಿ ರಾಜ್ಯ ಹೆದ್ದಾರಿಯನ್ನು ಕೊಡಗನೂರು ಕೆರೆಯ ಹಿಂಭಾಗದಲ್ಲಿ ನೂತನ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸುಮಾರು 30 ಕೋಟಿ ಅನುದಾನ ಕೋರಿ ಸಿಎಂಗೆ ಮನವಿ ಮಾಡಲಾಗಿದೆ. ಅನುದಾನ ಕೊಡುವ ಭರವಸೆ ನೀಡಿದ್ದಾರೆ. ಅನುದಾನ ಬಿಡುಗಡೆಯಾದ ತಕ್ಷಣ ಸೂಪರ್ ಬೈಪಾಸ್ ನಿರ್ಮಿಸಲಾಗುವುದು.
ಕೆ.ಎಸ್. ಬಸವಂತಪ್ಪ ಸಚಿವರು