ಭದ್ರಾ ಡ್ಯಾಂ ನೀರಾವರಿ ನಿಗಮದಲ್ಲೇ ಉಳಿಸಿ

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಹಸ್ತಾಂತರಿಸದಿರಿ
  • ರೈತರ ಹಿತ ಕಾಪಾಡಿ ಇಲ್ಲವೆ ಹೋರಾಟ ಎದುರಿಸಿ
  • ರಾಜ್ಯ ಸರ್ಕಾರಕ್ಕೆ ರೇಣುಕಾಚಾರ್ಯ ಎಚ್ಚರಿಕೆ
ದಾವಣಗೆರೆ: ಕರ್ನಾಟಕ ನೀರಾವರಿ ನಿಗಮದ ಭಾಗವಾದ ಭದ್ರಾ ಜಲಾಶಯವನ್ನು ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಹಸ್ತಾಂತರಿಸಲು ಮುಂದಾಗಿರುವ ರಾಜ್ಯ ಸರ್ಕಾರದ ದುಸ್ಸಾಹಸದ ಕ್ರಮ ಸರಿಯಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಭದ್ರಾ ಜಲಾಶಯದ ಹಕ್ಕುದಾರರು ಅಚ್ಚುಕಟ್ಟು ರೈತರೇ ಹೊರತು ಸರ್ಕಾರವಲ್ಲ. ರೈತರ ಅಭಿಪ್ರಾಯ ಪಡೆಯದೆ ಸರ್ಕಾರ ಈ ತೀರ್ಮಾನ ಮಾಡುವುದು ಸರಿಯಲ್ಲ. ಮಧ್ಯ ಕರ್ನಾಟಕದ ಜೀವನಾಡಿ ಡ್ಯಾಂ, ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಒಳಪಡಿಸುವ ಕೆಲಸವನ್ನು ಕೈಬಿಡಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಒಳಪಡಿಸಿದಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಅನ್ಯಾಯವಾಗಲಿದೆ. ಭದ್ರಾ ಅವಲಂಭಿತ ಜಿಲ್ಲೆಗಳ ರೈತರ ಹಿತ ಕಾಯಬೇಕು. ಈ ವಿಚಾರದಲ್ಲಿ ಸರ್ಕಾರ ಮೊಂಡುತನ ಮಾಡಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಬಗ್ಗೆ ಸಿಎಂ, ಡಿಸಿಎಂ ಭೇಟಿ ಮಾಡಿ, ಮನವಿ ಮಾಡಿದ್ದೇವೆ. ನೀರಾವರಿ ನಿಗಮದಿಂದ ಭದ್ರಾ ಡ್ಯಾಂ ಬೇರ್ಪಡಿಸಬಾರದು. ನಾವು ತುಮಕೂರು, ಬಳ್ಳಾರಿ, ವಿಜಯ ನಗರ ಜಿಲ್ಲೆಗಳ ರೈತರ ವಿರುದ್ಧವಿಲ್ಲ. ಭದ್ರಾ ಅಚ್ಚುಕಟ್ಟು ಪ್ರದೇಶದ ಗ್ರಾಮಗಳಿಗೆ ತೆರಳಿ, ರೈತರನ್ನು ಸಂಘಟಿಸುವ ಮೂಲಕ ಪ್ರಬಲ ಹೋರಾಟ ರೂಪಿಸಲಿದ್ದೇವೆ ಎಂದರು.
ಶಾಸಕ ಸ್ಥಾನದಿಂದ ವಜಾಗೊಳಿಸಿ
ಬಳ್ಳಾರಿ ಜಿಲ್ಲೆಯ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಿ, ಜನಸಾಮಾನ್ಯರ ನೆಮ್ಮದಿಗೆ ಭಂಗ ತಂದ ನಾ.ರ.ಭರತ್ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ ನಾಗಪ್ಪ ಇದೇ ವೇಳೆ ಆಗ್ರಹಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಸಮಾರಂಭದ ಬ್ಯಾನರ್ ಕಟ್ಟುವ ವಿಚಾರಕ್ಕೆ ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ನಡೆದಿದೆ. ಕಾಂಗ್ರೆಸ್‌ನ ಓರ್ವ ಕಾರ್ಯಕರ್ತನ ಮೇಲೆ ಗುಂಡು ಹಾರಿಸಿದ್ದು, ಶಾಸಕರ ಖಾಸಗಿ ಬೆಂಗಾವಲು ಸಿಬ್ಬಂದಿ ಕೃತ್ಯವೆಂಬ ಸಂಗತಿ ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ ಎಂದರು.
ವಾಲ್ಮೀಕಿ ಗುರುಗಳ ಪುತ್ಥಳಿ ಅನಾವರಣ ಕಾರ್ಯವನ್ನು ಹಿರಿಯರಿಂದ ನೆರವೇರಿಸಬೇಕು. ಈ ಕಾರ್ಯಕ್ರಮದಲ್ಲಿ ಆಪಾದಿತರನ್ನು ದೂರ ಇಡಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ಲೋಕಿಕೆರೆ ನಾಗರಾಜ, ಬಿ.ಎಂ.ಸತೀಶ ಕೊಳೇನಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಎನ್.ಎಚ್. ಹಾಲೇಶ ನಾಯ್ಕ, ಪಂಜು ಪೈಲ್ವಾನ್ ಇತರರು ಇದ್ದರು.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಇದುವರೆಗೆ ಕಾಂಗ್ರೆಸ್‌ನ ಶಾಮನೂರು ಶಿವಶಂಕರಪ್ಪ ಅವರ ಹಿರಿತನಕ್ಕೆ ಬೆಂಬಲಿಸಿ ಗೆಲ್ಲಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ರಾಜ್ಯ, ರಾಷ್ಟ್ರ ನಾಯಕರು ನಿರ್ಧರಿಸಲಿದ್ದಾರೆ. ಸಾಮಾನ್ಯವಾಗಿ ಪರಾಜಿತ ಅಭ್ಯರ್ಥಿಯನ್ನೇ ಪರಿಗಣಿಸುವುದು ಸಹಜ. ಹೀಗಾಗಿ ಬಿ.ಜೆ. ಅಜಯ್‌ಕುಮಾರ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net