ನೀರು ಶುದ್ಧಿಗೆ ಕೆ.ಸಿ ವ್ಯಾಲಿ ಮಾದರಿ

ಜಗಳೂರು  ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ  ಜಿಲ್ಲಾ ನಗರಾಭಿವೃದ್ಧಿ ಕೋಶದ   ಯೋಜನಾ ನಿರ್ದೇಶಕಿ ರೇಣುಕಾ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು. ಲೋಕ್ಯಾ ನಾಯ್ಕ, ರವಿ, ಗುರುದತ್ತ, ಕುಮಾರನಾಯ್ಕ  ಮತ್ತಿತರರಿದ್ದರು.solid waste
ಜಗಳೂರು ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು. ಲೋಕ್ಯಾ ನಾಯ್ಕ, ರವಿ, ಗುರುದತ್ತ, ಕುಮಾರನಾಯ್ಕ ಮತ್ತಿತರರಿದ್ದರು.solid waste
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಯೋಜನಾ ನಿರ್ದೇಶಕಿ ರೇಣುಕಾ ಮಾಹಿತಿ
  • ಕೆರೆ ಪರಿಶೀಲಿಸಿದ ಅಧಿಕಾರಿಗಳ ತಂಡ
ಜಗಳೂರು: ಕೆರೆಗಳಿಗೆ ಕಲುಷಿತ ನೀರು ಸೇರದಂತೆ ತಡೆಯುವ ಜತೆಗೆ ಅಂತರ್ಜಲ ವೃದ್ಧಿಗೆ ಪೂರಕವಾಗಿ ಜಗಳೂರಿನಲ್ಲಿ ಕೆ.ಸಿ.ವ್ಯಾಲಿ ಮಾದರಿ ರೂಪಿಸಲಾಗುವುದು ಎಂದು ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ರೇಣುಕಾ ಮಾಹಿತಿ ನೀಡಿದರು.
ಜಗಳೂರು ಕೆರೆಗೆ ತ್ಯಾಜ್ಯ ನೀರು ಸೇರುತ್ತಿರುವ ದೂರು ಆಧರಿಸಿ ಹಾಗೂ ಅಲ್ಲಿನ ಘನತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆ ಪರಿಶೀಲನೆಗೆ ಅಧಿಕಾರಿಗಳ ತಂಡದ ಜತೆ ಗುರುವಾರ ಭೇಟಿ ನೀಡಿ ಮಾತನಾಡಿದರು.
ಕೆರೆಗೆ ಕಲುಷಿತ ನೀರು ಸೇರಿದರೆ ಜನಾರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ತ್ಯಾಜ್ಯ ನೀರು ಕೆರೆ ಸೇರದಂತೆ ತಡೆಯಲು ಮೂರು ಕಡೆ ವೆಟ್‌ವೆಲ್ ನಿರ್ಮಿಸಿ ಪೈಪ್‌ಲೈನ್ ಮೂಲಕ ಶುದ್ಧೀಕರಿಸಲು ಉದ್ದಗಟ್ಟ ಬಳಿ ಸ್ಥಳ ನಿಗದಿಪಡಿಸಲಾಗಿದೆ ಎಂದರು.
ಬೆಂಗಳೂರು, ಕೋಲಾರದಲ್ಲಿ ಇಂಥದ್ದೇ ಸಮಸ್ಯೆಯನ್ನು ಕೆಸಿ ವ್ಯಾಲಿ ಮಾದರಿಯಲ್ಲಿ ಯಶಸ್ವಿಯಾಗಿ ಮಾಡಲಾಗಿದೆ. ಜಗಳೂರಿನಲ್ಲೂ ಅದೇ ಮಾದರಿ ಅನುಸರಿಸ ಲಾಗುವುದು ಎಂದು ತಿಳಿಸಿದರು.
ತುಂಬ ವರ್ಷಗಳ ನಂತರ ಜಗಳೂರು ಕೆರೆ ತುಂಬಿದೆ. ಆದರೆ ರಾಜ ಕಾಲುವೆ ಸೇರಿ ವಿವಿಧ ವಾರ್ಡ್‌ಗಳಿಂದ ಚರಂಡಿ ಮೂಲಕ ತ್ಯಾಜ್ಯ ನೀರು ನೇರ ಕೆರೆಗೆ ಸೇರಿ ಪರಿಸರ ಮಾಲಿನ್ಯ ಆಗುತ್ತಿರುವ ಬಗ್ಗೆ ಲೋಕಾಯುಕ್ತ ಇಲಾಖೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪರಿಶೀಲಿಸಿ ವರದಿ ಪಡೆದರು.
ಕೆರೆಗೆ ಸೇರುವ ಕಲುಷಿತ ನೀರು ಶುದ್ಧೀಕರಿಸಲು ಉದ್ದಗಟ್ಟ ಸಮೀಪ ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ನಿಗದಿಪಡಿಸಿದ ಸ್ಥಳವನ್ನೂ ವೀಕ್ಷಿಸಿ ಮಾಹಿತಿ ಪಡೆದರು.
ಚಿಕ್ಕಮ್ಮನಹಟ್ಟಿ ಬಳಿ ಘನತ್ಯಾಜ್ಯ ವಿಲೇವಾರಿ ಘಟಕ ಹಾಗೂ ಕೆರೆಗೆ ಚರಂಡಿ ನೀರು ಸೇರುವ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಆಲಿಸಿ ಸಾಧಕ, ಬಾಧಕಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ರವಿ, ಗುರುದತ್ತ, ಕುಮಾರನಾಯ್ಕ, ಶ್ರೀನಿವಾಸ್, ಮದ ಕರಿನಾಯಕ ಮತ್ತಿತರರಿದ್ದರು.

2.60 ಕೋಟಿ ರೂ. ಮಂಜೂರು

ಕೇಂದ್ರ ಸರ್ಕಾರ ಜಗಳೂರು ಕೆರೆ ಅಭಿವೃದ್ಧಿ ಕೈಗೆತ್ತಿಕೊಂಡಿದೆ. ಕೆರೆಗೆ ಸೇರುತ್ತಿರುವ ಕಲುಷಿತ ನೀರು ತಡೆಯಲು ಕೊಳಚೆ ನೀರು ಶುದ್ದೀಕರಣ ಘಟಕ ನಿರ್ಮಾಣಕ್ಕೆ ಸ್ವಚ್ಛ ಭಾರತ್ ಮಿಷನ್ ಅಡಿ 2.60 ಕೋಟಿ ರೂ. ಮಂಜೂರಾಗಿದೆ. ಹೀಗಾಗಿ ಕಾರ್ಯ ಸಾಧ್ಯತಾ ವರದಿ ತಯಾರಿಸಲು ವಾಟರ್ ಬೋರ್ಡ್ ಸೇರಿ ಇತರೆ ಅಧಿಕಾರಿಗಳ ತಂಡದ ಜತೆ ಸೇರಿ ಭೇಟಿ ನೀಡಿ ಮಾಹಿತಿ ಕಲೆ ಹಾಕಲಾಗಿದೆ ಎಂದು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರೂ ಆಗಿರುವ ಜಿಲ್ಲಾ ಯೋಜನಾ ನಿರ್ಧೇಶಕಿ ರೇಣುಕಾ ಅವರು ಮಾಹಿತಿ ನೀಡಿದರು.

ಆರೋಗ್ಯ ನಿರೀಕ್ಷಕನಿಗೆ ತರಾಟೆ

ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ಜಿಲ್ಲಾ ಯೋಜನಾ ಕೇಂದ್ರದ ನಿರ್ದೇಶಕಿ ರೇಣುಕಾ ಅವರು ಅಲ್ಲಿನ ಅವ್ಯವಸ್ಥೆ ಕಂಡು ಗರಂ ಆದರು.
ಹಸಿ-ಒಣ ಕಸವನ್ನು ವಿಂಗಡಿಸಬೇಕು ಆದರಿಲ್ಲಿ ಎಲ್ಲ ಕಸವನ್ನು ಒಂದೆಡೆ ಹಾಕಿ ಬೆಂಕಿ ಹಚ್ಚಿರುವುದನ್ನು ಗಮನಿಸಿ, ಆರೋಗ್ಯ ನಿರೀಕ್ಷಕ ಪ್ರಶಾಂತ್ ಅವರನ್ನು ತರಾಟೆಗೆ ತೆಗೆದುಕೊಂಡರು. ಹಸಿ ಮತ್ತು ಒಣ ಕಸ ಸಂಗ್ರಹ, ವಿಂಗಡಣೆಗೆ ನೌಕರರನ್ನು ನೇಮಿಸಲಾಗಿದೆ. ಆದರೆ ಸರ್ಕಾರದ ಆದೇಶ,ನಿಯಮಗಳನ್ನು ಗಾಳಿಗೆ ತೂರಿ ಮನಸ್ಸಿಗೆ ಬಂದಂತೆ ಮಾಡುವುದು ಸರಿಯಾ ಎಂದು ಪ್ರಶ್ನಿಸಿದರು. ಈ ರೀತಿ ಮುಂದಿನ ದಿನಗಳಲ್ಲೂ ಮರುಕಳಿಸಿದರೆ ಮುಲಾಜಿಲ್ಲದೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net