ಅಖಿಲ ಕರ್ನಾಟಕ ಎನ್‌ಪಿಎಸ್ ನೌಕರರ ಸಂಘದಿಂದ ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ರಾಜ್ಯ ಮಟ್ಟದ ಎರಡನೇ ಕಾರ್ಯಕಾರಿಣಿ ಸಭೆಯನ್ನು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಉದ್ಘಾಟಿಸಿದರು. ಎಂ.ಎ.ನಾಗನಗೌಡ, ಸೆಲ್ವಕುಮಾರ್, ಫೆಡ್ರಿಕ್, ಎಂ.ವಿ.ರುದ್ರಪ್ಪ, ಪರಶುರಾಮಪ್ಪ, ಶೈಲಜಾ, ವೀರೇಶ್ ಒಡೇನಪುರ ಇತರರಿದ್ದರು.
ದಾವಣಗೆರೆ:ಹಳೆಯ ಪಿಂಚಣಿ ಯೋಜನೆ ಜಾರಿಗೆ ತರದಿದ್ದಲ್ಲಿ ರಾಜ್ಯವ್ಯಾಪಿ ಸರ್ಕಾರಿ ಕಚೇರಿಗಳ ಬಂದ್ ಅನಿವಾರ್ಯವಾಗಲಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅಖಿಲ ಕರ್ನಾಟಕ ಎನ್‌ಪಿಎಸ್ ನೌಕರರ ಸಂಘದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ, ರಾಜ್ಯ ಮಟ್ಟದ ಎರಡನೇ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದರು.
ಈ ಬಾರಿಯ ನಮ್ಮ ಹೋರಾಟ ಸಾಂಕೇತಿಕವಲ್ಲ; ಇಡೀ ವ್ಯವಸ್ಥೆಯನ್ನೇ ಸ್ತಬ್ಧಗೊಳಿಸುವ ’ಕರ್ನಾಟಕ ಬಂದ್’ ಮಾದರಿಯಲ್ಲಿ ನಡೆಯಲಿದೆ. ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಬಂಧನ, ಅಮಾನತು, ಜೈಲು ಶಿಕ್ಷೆಯಂತಹ ಕ್ರಮಗಳಿಗೆ ಮುಂದಾದರೂ ನೌಕರರು ಹಿಂದೆ ಸರಿಯುವುದಿಲ್ಲ ಎಂದು ಗುಡುಗಿದರು.
ನಮ್ಮ ಹೋರಾಟ ಪ್ರವಾಹ ಮಾದರಿಯಲ್ಲಿರಬೇಕು. ಜಿಲ್ಲಾ, ತಾಲೂಕು ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳು ಒಗ್ಗಟ್ಟಿನಿಂದ ಬೀದಿಗಿಳಿಯಬೇಕು. ಹೋರಾಟ ಶಾಂತಿಯುತವಾಗಿರಬೇಕು. ಪ್ರತಿಭಟನೆಗೆ ಸ್ಪಂದಿಸದೆ ಯಾರೇ ಅಧಿಕಾರಿಗಳು ಕಚೇರಿಯಲ್ಲಿದ್ದರೆ ಎಳೆದು ಹೊರಗೆ ತರಬೇಕು ಎಂದೂ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಬೇಡಿಕೆ ಕೇವಲ ವೇತನದ ವಿಚಾರದ್ದಲ್ಲ. ಇದು ನೌಕರರ ಬದುಕಿನ ಮತ್ತು ಭವಿಷ್ಯದ ಪ್ರಶ್ನೆಯಾಗಿದೆ. ಆದ್ದರಿಂದ ಮುಲಾಜಿಲ್ಲದೆ ಕಠಿಣ ನಿಲುವು ತಳೆಯುವುದು ಅನಿವಾರ್ಯವಾಗಿದೆ. ಯಾವಾಗ ಕರೆ ನೀಡಿದರೂ ಹಿಂದಿನ ಮುಷ್ಕರದಂತೆಯೇ ನೌಕರರು ಶಕ್ತಿ ಪ್ರದರ್ಶನ ಸಜ್ಜಾಗಬೇಕು. ನಮ್ಮ ಸಾಮರ್ಥ್ಯದಿಂದಾಗಿ ಸರ್ಕಾರಿ ನೌಕರಿ ದಕ್ಕಿದೆ. ಹೀಗಾಗಿ ಯಾರೂ ಹೆದರಬೇಕಿಲ್ಲ ಎಂದು ಹೇಳಿದರು.
ಒಪಿಎಸ್ ಜಾರಿಗೆ ತಂದಲ್ಲಿ ಸರ್ಕಾರಕ್ಕೆ ಬೊಕ್ಕಸಕ್ಕೆ ಹೊರೆಯಿಲ್ಲ. ವಾರ್ಷಿಕ 5 ಸಾವಿರ ಕೋಟಿ ರೂ. ಉಳಿತಾಯವಾಗಲಿದ್ದು ಎನ್‌ಪಿಎಸ್ ಸಮಿತಿ ಎದುರು ವಿವರಿಸಲಾಗಿದೆ. ರಾಜ್ಯದ 2.93 ಲಕ್ಷ ನೌಕರರ ಎನ್‌ಪಿಎಸ್ ವಂತಿಗೆಯಾಗಿ ಸರ್ಕಾರವು ಪ್ರತಿವರ್ಷ 3 ಸಾವಿರ ಕೋಟಿ ರೂ.ಗಳನ್ನು ಪಿಎಫ್‌ಆರ್‌ಡಿಎಗೆ ಪಾವತಿಸುತ್ತಿದೆ. ಈ ಖಾತೆಯಲ್ಲಿ ಸುಮಾರು 25 ಸಾವಿರ ಕೋಟಿ ರೂ. ಜಮೆಯಾಗಿದ್ದು, ಇದನ್ನು ರಾಜ್ಯದ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಬಹುದು ಎಂದು ಸಲಹೆ ನೀಡಲಾಗಿದೆ ಎಂದರು.
ಪಶ್ಚಿಮ ಬಂಗಾಳ ಇತರೆ ರಾಜ್ಯಗಳಲ್ಲಿ ಇಂದಿಗೂ ಒಪಿಎಸ್ ಜಾರಿಯಲ್ಲಿದೆ. ಅಲ್ಲಿನ ಐಎಎಸ್ ಅಧಿಕಾರಿಗಳಿಗೆ ಮಾತ್ರ ಎನ್‌ಪಿಎಸ್ ಅನ್ವಯವಾಗುತ್ತಿದ್ದು, ಉಳಿದ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯೇ ಮುಂದುವರಿಯುತ್ತಿದೆ ಎಂಬ ಅಂಶವನ್ನು ಇಲ್ಲಿ ಉಲ್ಲೇಖಿಸಿದ ಅವರು, ಬರುವ ಬಜೆಟ್‌ನಲ್ಲಿ ಸರ್ಕಾರದಿಂದ ಮಹತ್ವ ಘೋಷಣೆ ನಿರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಎನ್‌ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಎ.ನಾಗನಗೌಡ ಮಾತನಾಡಿ, ಅಸಹಾಯಕತೆ ಆಕ್ರೋಶವಾಗಿ ಸ್ಫೋಟಗೊಳ್ಳುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಯುಪಿಎಸ್, ಜಿಪಿಎಸ್‌ನಂತಹ ಯಾವುದೇ ಮಧ್ಯಂತರ ಆಯ್ಕೆಗಳನ್ನು ನಾವು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ತಮಿಳುನಾಡಿನ ಸಿಪಿಎಸ್ ರಾಜ್ಯ ಸಂಚಾಲಕ ಸೆಲ್ವಕುಮಾರ್ ಮಾತನಾಡಿ ಕರ್ನಾಟಕದಲ್ಲಿ ಒಪಿಎಸ್ ಜಾರಿಗೆ ಸವಾಲು ಹಣದ್ದಲ್ಲ. ಎನ್‌ಪಿಎಸ್ ಜಾರಿಯಾದರೆ ಅದರ ಹಣ ಅಂಬಾನಿ, ಅದಾನಿ ಕಂಪನಿಗಳಿಗೆ ಹೋಗಲಿದೆ. ಒಪಿಎಸ್ಸನ್ನು ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಕಾಂಗ್ರೆಸ್ ಇದನ್ನೇಕೆ ಜಾರಿ ಮಾಡುತ್ತಿಲ್ಲ. ಇದಕ್ಕಾಗಿ ಇಲ್ಲದ ಸಮಿತಿ ರಚನೆ ಮಾಡಿದ್ದಾದರೂ ಏಕೆ? ಎಂದು ಪ್ರಶ್ನಿಸಿದರು.
ಎನ್‌ಪಿಎಸ್ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಸದಾನಂದ ನಲ್ಕುದುರೆ ಮಾತನಾಡಿ ಬೇರೆ ಬೇರೆ ರಾಜ್ಯಗಳಲ್ಲಿ ಜಾರಿಯಾದ ಯುಪಿಎಸ್, ಜಿಪಿಎಸ್, ಎಸ್‌ಪಿಎಸ್ ಎಲ್ಲವೂ ಒಂದೇ ಆಗಿದ್ದು ಸ್ವರೂಪ ಮಾತ್ರ ಬದಲಾಗಿದೆ. ಎನ್‌ಪಿಎಸ್‌ನಿಂದ ಸಿ ಮತ್ತು ಡಿ ದರ್ಜೆ ನೌಕರರಿಗೆ ಅನ್ಯಾಯವಾಗಲಿದೆ ಎಂದರು.
ರಾಜ್ಯ ಗೌರವಾಧ್ಯಕ್ಷ ಬಸವರಾಜ್ ಮಾತನಾಡಿ ಎನ್‌ಪಿಎಸ್ ನೌಕರರ ಹೋರಾಟದ ಹಿಂದೆ ರಾಜ್ಯ ಸರ್ಕಾರಿ ನೌಕರರ ಸಂಘದ ಬೆಂಬಲವಿದೆ. ಈಬಗ್ಗೆ ನೌಕರರು ವಿಚಲಿತರಾಗಬೇಕಿಲ್ಲ. ಸಂಘಟನೆ ಬಗ್ಗೆ ನಕಾರಾತ್ಮಕ ಧೋರಣೆ ಬೇಡ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಮಿಳುನಾಡಿನ ಎನ್‌ಪಿಎಸ್ ಸಂಚಾಲಕ ಫೆಡ್ರಿಕ್, ಸೆಲ್ವಕುಮಾರ್, ಸಂಘದ ಪದಾಧಿಕಾರಿಗಳಾದ ಎಂ.ವಿ.ರುದ್ರಪ್ಪ, ಪರಶುರಾಮಪ್ಪ, ಶೈಲಜಾ, ಶಿವಣ್ಣ, ಚಂದ್ರಶೇಖರ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಒಡೇನಪುರ, ಖಜಾಂಚಿ ಜಿ.ಆರ್.ತಿಪ್ಪೇಸ್ವಾಮಿ ಇತರರಿದ್ದರು.