ದಾವಣಗೆರೆಯ ಕೆಟಿಜೆ ನಗರ ಠಾಣೆಯ ಪೊಲೀಸರು ಚಿನ್ನಾಭರಣ ವಶಪಡಿಸಿಕೊಂಡಿರುವುದು. ಡಿವೈಎಸ್ಪಿ ಶರಣ ಬಸವೇಶ್ವರ ಬಿ, ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ಎಚ್.ಎಸ್, ಪಿ.ಎಸ್.ಐ ಲತಾ.ಆರ್. ಇತರರು ಇದ್ದರು.
ದಾವಣಗೆರೆ : ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿರುವ ಕೆಟಿಜೆ ನಗರ ಠಾಣೆಯ ಪೊಲೀಸರು, ಚಿನ್ನದ ಆಭರಣ ಸೇರಿದಂತೆ 12 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.
ಕೋಲಾರ ಜಿಲ್ಲೆ ಬಂಗಾರಪೇಟೆಯ ಸೆಲ್ವಿ, ಪ್ರೀತಿ ಮತ್ತು ತಮಿಳುನಾಡಿನ ಜೋಲಾರಪೇಟೆ ಜಿಲ್ಲೆಯ ಜಯ ಮಾಧನಗರದ ವಲ್ಲಿ ಬಂಧಿತರು. ಆ. 7 ರಂದು ಕೊಟ್ರಯ್ಯ ಕೆ.ಎಂ. ಹರಪನಹಳ್ಳಿ ಅವರು ಪತ್ನಿಯೊಂದಿಗೆ ಬೆಂಗಳೂರಿಗೆ ಹೋಗಲು ದಾವಣಗೆರೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಬಸ್ ಹತ್ತುತ್ತಿದ್ದಾಗ ಕಳ್ಳತನ ನಡೆದಿತ್ತು.
ಆರೋಪಿಗಳು ಬ್ಯಾಗಿನ ಜಿಪ್ ತೆಗೆದು 102 ಗ್ರಾಂ ಬಂಗಾರದ ಆಭರಣಗಳನ್ನು ಮತ್ತು 75 ಸಾವಿರ ರೂ. ನಗದು ಹಣವಿದ್ದ ಚಿಕ್ಕ ಹ್ಯಾಂಡ್ ಬ್ಯಾಗನ್ನು ಕಳವು ಮಾಡಲಾಗಿತ್ತು. ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆರೋಪಿಯ ಪತ್ತೆಗಾಗಿ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ಪರಮೇಶ್ವರ. ಎಚ್. ಮತ್ತು ಡಿವೈಎಸ್ಪಿ ಶರಣ ಬಸವೇಶ್ವರ ಬಿ, ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ಎಚ್.ಎಸ್. ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.
ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪಿ.ಎಸ್.ಐ ಲತಾ.ಆರ್. ಹಾಗೂ ಸಿಬ್ಬಂದಿ ಸುರೇಶ್ ಬಾಬು, ಮಹಮದ್ ರಫಿ, ಸತೀಶ್, ಸಿದ್ದಪ್ಪ, ಮಂಜಪ್ಪ, ನಾಗರಾಜ, ಡಿ.ಬಿ. ಗಿರೀಶ್ ಗೌಡ ಇತರರು ಇದ್ದರು.