ದಾವಣಗೆರೆ: ನಗರದೇವತೆ ದುರ್ಗಾಂಬಿಕಾ ದೇವಸ್ಥಾನದಲ್ಲಿ 20 ದಿನದ ಹಿಂದೆ ದೇವಿಯ ಅಲಂಕಾರಿಕ ಚಿನ್ನದ ಒಡವೆ ಕಳವಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನ ಟ್ರಸ್ಟ್‌ನ ಎಲ್ಲ ಸದಸ್ಯರು ನೈತಿಕ ಹೊಣೆ ಹೊತ್ತು ಸಾಮೂಹಿಕ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಆಗ್ರಹಿಸಿದರು.
ಈ ಕಳವು ಪ್ರಕರಣದ ಲೋಪಕ್ಕೆ ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಅವರೇ ಹೊಣೆ. ಅಂದಾಜು 200 ಗ್ರಾಂ ತೂಕದ ಒಡವೆ ಕಳವಾಗಿದ್ದು, ಈ ವಿಚಾರ ಬಯಲಾಗದಿರಲು ಎಸ್ಸೆಸ್ಸೆಂ, ದೇವಸ್ಥಾನದಲ್ಲಿ ಜು. 25ರಂದು ರಾತ್ರೋರಾತ್ರಿ ಸಭೆ ನಡೆಸಿದ್ದಾರೆ. ಒಡವೆಯನ್ನು 8 ಲಕ್ಷ ರೂ.ಗೆ ಖರೀದಿಸಿದವನನ್ನೂ ಕರೆಸಿ ಎಚ್ಚರಿಕೆ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಕಳ್ಳತನ ಹಿನ್ನೆಲೆಯಲ್ಲಿ ಪೂಜಾರಿ ಸಂಬಂಧಿ ಒಬ್ಬ ಯುವಕ ಹಾಗೂ ಚಿನ್ನ ಖರೀದಿಸಿದ ಒಬ್ಬಾತನಿಗೆ ಶನಿವಾರವಷ್ಟೇ ಥಳಿಸಲಾಗಿದೆ. ಪ್ರಕರಣ ಸಂಬಂಧ ನಾಲ್ಕು ದಿನದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಶಾಸಕರು ಸ್ಪಷ್ಟಪಡಿಸಿದ್ದಾರೆ. ಟ್ರಸ್ಟ್‌ನ ನಡೆ ಗಮನಿಸಿ ನಾವು ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಿದ್ದೇವೆ ಎಂದು ತಿಳಿಸಿದರು.
ಕಳ್ಳತನದ ಬಗ್ಗೆ ಪೂರ್ಣ ಮಾಹಿತಿ ನನ್ನಲ್ಲಿದೆ. ಈಗಲೇ ಬಹಿರಂಗಪಡಿಸಿದರೆ ಬೇರೆ ಕತೆ ಕಟ್ಟುವ ಸಾಧ್ಯತೆ ಇದೆ. ಅಲಂಕಾರಿಕ ಒಡವೆ ನೀಡುವಾಗ ಲೆಡ್ಜರ್‌ನಲ್ಲಿ ನಮೂದಿಸಿರಲಿಲ್ಲವೆ? ಅವನ್ನು ನೀಡುವಾಗ ಲೆಕ್ಕಕ್ಕೆ ಸಹಿ ಮಾಡಿದವರು ಯಾರು? ಎಂದೂ ಪ್ರಶ್ನಿಸಿದರು.
ದೇವಸ್ಥಾನ ಸಂಬಂಧಿಸಿದಂತೆ ನಡೆದಿರುವ ಹಗರಣಗಳ ಬಗ್ಗೆ ನನಗೆ ಮಾಹಿತಿ ಇದೆ. ಇದರ ಬಗ್ಗೆ ಸಮಿತಿ ಇದುವರೆಗೆ ತನಿಖೆ ನಡೆಸದಿರುವುದೇಕೆ? ಯಾವ ಶಿಸ್ತುಕ್ರಮ ಆಗಿದೆ? ಇದುವರೆಗೆ ಅಧ್ಯಕ್ಷರು ಎಷ್ಟು ಸಭೆ ನಡೆಸಿದ್ದಾರೆ? ಎಂಬುದರ ಬಗ್ಗೆಯೂ ಸ್ಪಷ್ಟಪಡಿಸಲಿ. ಹಗರಣದ ವಿಚಾರದಲ್ಲಿ ಚರ್ಚೆಗೆ ತಾವು ಸಿದ್ಧ ಎಂದೂ ಹೇಳಿದರು.
ದೇವಸ್ಥಾನದ ಜಾಗದಲ್ಲಿ ಕಟ್ಟಿಸಲಾದ 34 ಮಳಿಗೆಗಳ ನಿರ್ಮಾಣಕ್ಕೆ ವ್ಯಯಿಸಿದ 3.5 ಕೋಟಿ ರೂ. ವೆಚ್ಚಕ್ಕೆ 55 ಲಕ್ಷ ರೂ. ಜಿಎಸ್‌ಟಿ ಪಾವತಿಸಲಾಗಿದೆ ಎಂದು ಲೆಕ್ಕ ನೀಡಿರುವ ಸಮಿತಿ ಇದುವರೆಗೆ ಅದರ ಬಿಲ್ ಪ್ರದರ್ಶಿಸಿಲ್ಲ. ಟ್ರಸ್ಟ್‌ನ ಕಾರ್ಯದರ್ಶಿ, ಹಂಗಾಮಿ ಕಾರ್ಯದರ್ಶಿ ಸಾವಿಗೀಡಾಗಿ ಅನೇಕ ವರ್ಷವಾದರೂ ಹೊಸ ಕಾರ್ಯದರ್ಶಿ ನೇಮಕ ಮಾಡಲಾಗಿಲ್ಲ. ಅನೇಕ ಹಿರಿಯ ಸದಸ್ಯರು ತೀರಿದ್ದರೂ ಬದಲಿ ನೇಮಕ ನಡೆದಿಲ್ಲ ಎಂದರು.
ಈ ಹಿಂದೆ ಮೋತಿ ವೀರಣ್ಣ ಅವಧಿಯಲ್ಲಿ ನಿರ್ಮಿಸಲಾದ 8 ಮಳಿಗೆಗಳ ಕುರಿತಂತೆ ನಾಲ್ವರ ತಂಡ ಪರಿಶೀಲನೆ ನಡೆಸಿ ಯಾವುದೇ ಅವ್ಯವಹಾರ ಆಗಿಲ್ಲ ಎಂದು ವರದಿ ನೀಡಿದ್ದರೂ ಇಡೀ ಟ್ರಸ್ಟ್ ವಜಾ ಮಾಡಿಸಲಾಗಿತ್ತು. ಆಗ ಶಾಮನೂರು ಶಿವಶಂಕರಪ್ಪ ಹಾಗೂ ಎಸ್ಸೆಸ್ಸೆಂ ಸದಸ್ಯರಾದರು ಎಂದು ಹೇಳಿದರು.
ಮುಖಂಡರಾದ ರಾಜನಹಳ್ಳಿ ಶಿವಕುಮಾರ್, ಬಿ. ರಮೇಶನಾಯ್ಕ, ಕೊಂಡಜ್ಜಿ ಜಯಪ್ರಕಾಶ್, ಟಿಂಕರ್ ಮಂಜಣ್ಣ, ಗುರು ಸೋಗಿ, ಬಾಲಚಂದ್ರ ಶೆಟ್ಟಿ, ಶಿವಾನಂದ್, ಹರೀಶ್, ಶಿವನಗೌಡ ಪಾಟೀಲ್, ಕುಮಾರ್ ಘಾಟ್ಗೆ ಸುದ್ದಿಗೋಷ್ಠಿಯಲ್ಲಿ ಇದ್ದರು.
ರಾಮಮಂದಿರಕ್ಕೆ ನೀಡಿದ್ದೇವೆ
ದಾವಣಗೆರೆಯಿಂದ 11 ಕೆಜಿ 655 ಗ್ರಾಂ ತೂಕದ ಬೆಳ್ಳಿ ಇಟ್ಟಿಗೆಯನ್ನು ರಾಮಮಂದಿರ ದೇವಸ್ಥಾನಕ್ಕೆ ನೀಡಿ ಬಂದಿದ್ದೇವೆ ಎಂದು ಹೇಳಿದ ಯಶವಂತರಾವ್ ಜಾಧವ್, ಸಂಬಂಧಿಸಿದ ಫೋಟೋ, ರಸೀದಿ ಪ್ರದರ್ಶಿಸಿದರು. ನಾವು ಜನರಿಂದ ದೇಣಿಗೆ ಎತ್ತಿದ್ದರೆ, ಬೆಳ್ಳಿಇಟ್ಟಿಗೆ ಲಪಟಾಯಿಸಿದ್ದೇವೆ ಎಂದು ಟೀಕಿಸುವವರು ಚರ್ಚೆಗೆ ಬರಲಿ. ಎಸ್‌ಐಟಿ ಅಥವಾ ಯಾವುದೇ ತನಿಖೆಯನ್ನಾದರೂ ನಡೆಸಲಿ ಎಂದು ಹೇಳಿದರು.