ಜಮೀರ್-ಸಿರಾಜ್ ಆಡಿಯೋ ವೈರಲ್

ಜಮೀರ್ ಅಹಮದ್
ಜಮೀರ್ ಅಹಮದ್
Published on

ಪ್ರಮುಖ ಮುಖ್ಯಾಂಶಗಳು

  • ಉಪ ಚುನಾವಣೆ ವೇಳೆ ನಡೆದ ಸಂಭಾಷಣೆ
  • ಸಂಪುಟ ರಚನೆ ಹೊತ್ತಿನಲ್ಲಿ ಸಂಚಲನ
ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಸಂದರ್ಭದಲ್ಲಿ ಮಾಜಿ ಸಚಿವ ಜಮೀರ್ ಅಹಮದ್ ಮತ್ತು ಜಿಲ್ಲಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಸಿರಾಜ್ ಅಹಮದ್ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಅಸ್ತಿತ್ವಕ್ಕೆ ಬರುತ್ತಿರುವ ಹೊತ್ತಿನಲ್ಲಿ ಈ ಆಡಿಯೋ ಬಹಳ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವ ವಿಚಾರ ಈ ಸಂಭಾಷಣೆಯಲ್ಲಿದೆ ಎಂಬುದು ಸಂಚಲನ ಸೃಷ್ಟಿಸಿದೆ.
ಉಪ ಚುನಾವಣೆಯ ಮತದಾನದ ದಿನವಾದ ಏ. 9ರಂದು ನಡೆದ ಈ ಮಾತುಕತೆಯ ಆಡಿಯೋವನ್ನು ಸೋಮವಾರ ಬೆಳಗಿನ ಜಾವ 3 ಗಂಟೆಗೆ ಕನ್ನಡ ಕಾಕ್ರೋಚ್ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಮತದಾನ ಹೇಗೆ ನಡೆಯುತ್ತಿದೆ ಎಂಬುದರ ವಿವರಣೆ ಆರಂಭದಲ್ಲಿದೆ. ಹಲವು ಬೂತ್‌ಗಳಿಗೆ ಭೇಟಿ ನೀಡಿದ್ದೆ. ಎಲ್ಲೆಡೆ ಕುಕ್ಕರ್‌ಗೆ (ಎಸ್‌ಡಿಪಿಐ ಚಿಹ್ನೆ) ಬೆಂಬಲ ವ್ಯಕ್ತವಾಗಿದೆ. ಡೈಮಂಡ್ (ಪಕ್ಷೇತರ ಅಭ್ಯರ್ಥಿಯ ಚಿಹ್ನೆ) ಕಡಿಮೆ ಇದೆ ಎಂದು ಸಿರಾಜ್ ಹೇಳುತ್ತಾರೆ.
ಮತದಾನಕ್ಕೆ ಯಾರನ್ನೂ ಒತ್ತಾಯ ಪೂರ್ವಕವಾಗಿ ಮನೆಯಿಂದ ಕರೆತರುವುದು ಬೇಡ. ನಮ್ಮವರಿಗೆ ಯಾವಾಗಲೂ ಕಾಂಗ್ರೆಸ್‌ಗೆ ಮತ ಹಾಕಿ ರೂಢಿಯಾಗಿದೆ. ಒಂದು ವೇಳೆ ಜನರು ಮನೆಯಿಂದ ಹೊರಬರಲು ಆರಂಭಿಸಿದರೆ ನಮಗೆ ಪ್ರಯೋಜನವಾಗುವುದಿಲ್ಲ. ಬಂದರೂ ಕೂಡ ಎಸ್‌ಡಿಪಿಐ ಅಥವಾ ಪಕ್ಷೇತರ ಅಭ್ಯರ್ಥಿಗೆ ಮತ ಹಾಕುವಂತೆ ಹೇಳಬೇಕು ಎಂದು ಜಮೀರ್ ಅವರು ಸಿರಾಜ್ ಅವರಿಗೆ ತಿಳಿಸುತ್ತಾರೆ.
ಸಾದಿಕ್ ಪೈಲ್ವಾನ್ ದೊಡ್ಡ ನಾಯಕ ಎಂದು ಭಾವಿಸಿದಂತೆ ಕಾಣುತ್ತಿದೆ. ಅವರ ವಾರ್ಡ್‌ನಲ್ಲಿ ಹಿನ್ನಡೆಯಾಗಬೇಕು ಎಂದು ಜಮೀರ್ ಹೇಳುತ್ತಾರೆ. ಅದಕ್ಕೆ ವ್ಯವಸ್ಥೆ ಮಾಡಿರುವುದಾಗಿ ಸಿರಾಜ್ ಉತ್ತರಿಸುತ್ತಾರೆ. ಕಾಂಗ್ರೆಸ್‌ನ ಕೆಲವರು ಹಣ ಹಂಚುತ್ತಿದ್ದಾರೆ. ಜನರು ಹಣವನ್ನು ತಿರಸ್ಕರಿಸಿ ಮತ ಹಾಕುವುದು ಗೊತ್ತಿದೆ ಎಂದು ಹೇಳುತ್ತಿದ್ದಾರೆ ಎಂದು ಸಿರಾಜ್ ಮಾಹಿತಿ ನೀಡುವುದು ಆಡಿಯೋದಲ್ಲಿದೆ.
‘ಸಾದಿಕ್ ಸಹೋದರನಿಗೆ 1.5 ಲಕ್ಷ ಹಣ ಕೊಟ್ಟಿದ್ದೇನೆ. ಎಸ್‌ಡಿಪಿಐಗೆ ಮತಗಳು ಬರುವಂತೆ ನೋಡಿಕೊಳ್ಳಲು ಸೂಚಿಸಿದ್ದೇನೆ’ ಎಂದು ಸಿರಾಜ್ ನೀಡಿದ್ದಾರೆನ್ನುವ ಹೇಳಿಕೆ ಹಾಗೂ ‘ಶ್ರೀನಿವಾಸ್’ ಜತೆಗೆ ಮಾತನಾಡಿದ ವಿಚಾರ ಆಡಿಯೋದಲ್ಲಿದೆ.

ಜಮೀರ್ ವಿರುದ್ಧ ಷಡ್ಯಂತ್ರ

ಆಡಿಯೋ ಬಗ್ಗೆ ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಸಿರಾಜ್ ಅಹಮದ್, ಆರೋಪ ಸತ್ಯಕ್ಕೆ ದೂರವಾಗಿದೆ. ಸಚಿವ ಸಂಪುಟ ರಚನೆ ಹಿನ್ನೆಲೆಯಲ್ಲಿ ಜಮೀರ್ ಅಹಮದ್ ಅವರಿಗೆ ಡಿಸಿಎಂ ಅಥವಾ ಸಚಿವ ಸ್ಥಾನದ ಅವಕಾಶ ತಪ್ಪಿಸಬೇಕೆಂಬ ಉದ್ದೇಶದಿಂದ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದರು.
ನಾನು ಆ ರೀತಿಯ ಸಂಭಾಷಣೆ ನಡೆಸಿಲ್ಲ. ಈ ಬಗ್ಗೆ ಕೇಳಿ ನನಗೆ ಆಶ್ಚರ್ಯವಾಯಿತು. ಕೃತಕ ಬುದ್ಧಿಮತ್ತೆ ಬಳಸಿ ಸೃಷ್ಟಿ ಮಾಡಲಾಗಿದೆ. ಆಡಿಯೋ ಯಾರು ಮಾಡಿದ್ದಾರೆ ಎಂಬುದು ಬಹಿರಂಗವಾಗಲಿ ಎಂದು ಆಗ್ರಹಿಸಿದರು.
ಮತದಾನದ ದಿನ ಮತ ಚಲಾವಣೆ ಮಾಡಿದ ನಂತರ ಮನೆಗೆ ಬಂದು ಮಲಗಿದ್ದೆ. ಯಾರೊಂದಿಗೂ ಮಾತನಾಡಿಲ್ಲ. ಆಡಿಯೋ ಎಲ್ಲಿಂದ ಬಂದಿತು ಎಂಬುದು ಗೊತ್ತಾಗಬೇಕು. ಕಾನೂನು ಸಲಹೆ ಪಡೆದು ಮುಂದುವರಿಯುವೆ ಎಂದರು.
ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಜತೆಗೆ ನಾನು ಇದುವರೆಗೆ ಮಾತನಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಉಪ ಚುನಾವಣೆಯ ಸಂದರ್ಭದಲ್ಲಿ ನಮ್ಮ ವಿರುದ್ಧವೂ ಷಡ್ಯಂತ್ರ ನಡೆದಿದೆ. ಮುಸ್ಲಿಂ ನಾಯಕರಿಗೆ ಗೂಬೆ ಕೂರಿಸುವ ಪ್ರಯತ್ನ ನಡೆಯಿತು ಎಂದು ಸಿರಾಜ್ ಹೇಳಿದರು.

ಪಕ್ಷದ ವರಿಷ್ಠರು ಪರಿಶೀಲಿಸಲಿ

ವೈರಲ್ ಆಗಿರುವ ಆಡಿಯೋವನ್ನು ಪಕ್ಷದ ವರಿಷ್ಠರು ಪರಿಶೀಲಿಸಲಿ, ಸತ್ಯಾಂಶ ಬೆಳಕಿಗೆ ಬರಲಿ ಎಂದು ಶಾಸಕ ಸಮರ್ಥ್ ಶಾಮನೂರು ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉಪ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ನ್ನು ಸೋಲಿಸಲು ಪಕ್ಷದೊಳಗೆ ಷಡ್ಯಂತ್ರಗಳು ನಡೆದವು. ಈ ಹಿನ್ನೆಲೆಯಲ್ಲಿ ಹಲವರ ವಿರುದ್ಧ ಪಕ್ಷ ಕಠಿಣ ಕ್ರಮ ಜರುಗಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆಡಿಯೋ ಬಗ್ಗೆ ಪರಿಶೀಲಿಸುವ ಅಗತ್ಯವಿದೆ ಎಂದು ತಿಳಿಸಿದರು.
ಉಪ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ನ ಕೆಲ ನಾಯಕರು ಬಿಜೆಪಿ ಹಾಗೂ ಎಸ್‌ಡಿಪಿಐ ಜತೆಗೆ ಶಾಮೀಲಾಗಿದ್ದರು ಎಂಬುದು ಇದರಿಂದ ಬಹಿರಂಗವಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡುವುದು ಸರಿಯಲ್ಲ. ವರಿಷ್ಠರು ಗಮನಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net